ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಬೆಳೆಗೆ ನೀರಿನ ಭರವಸೆ: ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ

Last Updated 20 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಹೊಸಪೇಟೆ: ಗುರುವಾರ (ನ.21) ನಡೆಯಲಿರುವ ಮಹತ್ವದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯ ಮೇಲೆ ರೈತರ ದೃಷ್ಟಿ ನೆಟ್ಟಿದ್ದು, ಎರಡನೇ ಬೆಳೆಗೆ ನೀರು ಹರಿಸುವ ಖಚಿತ ಭರವಸೆ ರೈತರು ಇಟ್ಟುಕೊಂಡಿದ್ದಾರೆ.

ಹೋದ ವರ್ಷ ಜಲಾಶಯ ತುಂಬಿದ್ದರೂ ಎರಡನೇ ಬೆಳೆಗೆ ಸಮರ್ಪಕವಾಗಿ ನೀರು ಹರಿಸಿರಲಿಲ್ಲ. ಶೇ 50ಕ್ಕಿಂತ ಕಡಿಮೆ ರೈತರಿಗೂ ಅದರ ಪ್ರಯೋಜನವಾಗಿರಲಿಲ್ಲ. ಅದರ ಹಿಂದಿನ ಎರಡು ವರ್ಷ ಬರದಿಂದ ರೈತರು ಎರಡನೇ ಬೆಳೆಯನ್ನೇ ಬೆಳೆದಿರಲಿಲ್ಲ.

ಈ ವರ್ಷ ಜಲಾಶಯ ತುಂಬಿ ಅಪಾರ ಪ್ರಮಾಣದಲ್ಲಿ ನದಿಗೆ ನೀರು ಹರಿಸಲಾಗಿದೆ. ಒಟ್ಟು 133 ಟಿ.ಎಂ.ಸಿ. ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 33 ಟಿ.ಎಂ.ಸಿ. ಹೂಳು ತುಂಬಿಕೊಂಡಿದೆ. 100 ಟಿ.ಎಂ.ಸಿ. ನೀರು ಸಂಗ್ರಹಿಸಬಹುದು. ಸದ್ಯ 97.162 ಟಿ.ಎಂ.ಸಿ. ಅಡಿ ನೀರಿನ ಸಂಗ್ರಹವಿದೆ. ಬೇಸಿಗೆ ಮುಗಿಯುವವರೆಗೆ ಕುಡಿಯುವ ನೀರು, ಡೆಡ್‌ ಸ್ಟೋರೇಜ್‌ಗೆ 8ರಿಂದ 10 ಟಿ.ಎಂ.ಸಿ. ಅಡಿ ನೀರು ಸಾಕಾಗುತ್ತದೆ.

ಈಗಿರುವ ನೀರಿನ ಸಂಗ್ರಹ ನೋಡಿದರೆ ಎರಡನೇ ಬೆಳೆಗೆ ನೀರು ಹರಿಸದಿರಲು ಕಾರಣವೇ ಇಲ್ಲ ಎನ್ನುತ್ತಾರೆ ರೈತರು. ಹೀಗಾಗಿಯೇ ಸಭೆಯ ಮೇಲೆ ರೈತರು ಹೆಚ್ಚಿನ ಭರವಸೆ ಇಟ್ಟುಕೊಂಡಿದ್ದಾರೆ. ಈ ವರ್ಷ ಎರಡನೇ ಬೆಳೆ ಬೆಳೆದು ಸ್ವಲ್ಪಮಟ್ಟಿಗಾದರೂ ಚೇತರಿಸಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

‘ಜಲಾಶಯದ ಕೆಳಮಟ್ಟದ ಕಾಲುವೆಯನ್ನು (ಎಲ್‌.ಎಲ್‌.ಸಿ.) ನೆಚ್ಚಿಕೊಂಡು 1 ಲಕ್ಷ ಎಕರೆಗೂ ಅಧಿಕ ಪ್ರದೇಶದಲ್ಲಿ ರೈತರು ಭತ್ತ, ಬಾಳೆ ಸೇರಿದಂತೆ ಇತರೆ ಬೆಳೆ ಬೆಳೆಯುತ್ತಾರೆ. ಇದರಿಂದ ಹೊಸಪೇಟೆ, ಕಂಪ್ಲಿ, ಕುರುಗೋಡು, ಸಿರುಗುಪ್ಪ, ಬಳ್ಳಾರಿ ತಾಲ್ಲೂಕಿನ ರೈತರಿಗೆ ಅನುಕೂಲವಾಗುತ್ತದೆ. ಅಣೆಕಟ್ಟೆ ಸಂಪೂರ್ಣ ತುಂಬಿರುವುದರಿಂದ 2020ರ ಏಪ್ರಿಲ್‌ ಅಂತ್ಯದ ವರೆಗೆ ಎರಡನೇ ಬೆಳೆಗೆ ನೀರು ಹರಿಸಬೇಕು’ ಎನ್ನುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್‌.

‘ಬೆಳೆ ಕೈಸೇರುವ ಹಂತದಲ್ಲಿ ಮಳೆಯಾಗಿದ್ದರಿಂದ ಬಳ್ಳಾರಿ ಸುತ್ತಮುತ್ತ ಮೆಣಸಿನಕಾಯಿ, ಹತ್ತಿ ಹಾಳಾಗಿದೆ. ಮತ್ತೆ ರೈತರು ನಾಟಿ ಮಾಡಿದ್ದಾರೆ. ಬೆಳೆ ಕೈ ಸೇರುವವರೆಗೆ ಮೇಲ್ಮಟ್ಟದ ಕಾಲುವೆಗೂ (ಎಚ್‌.ಎಲ್‌.ಸಿ.) ನೀರು ಹರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT