ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪವಾಸಕ್ಕೆ ಇವರಿಗೆ ವಯಸ್ಸು ಅಡ್ಡಿಯಲ್ಲ

ರಂಜಾನ್
Last Updated 4 ಜೂನ್ 2019, 19:45 IST
ಅಕ್ಷರ ಗಾತ್ರ

ಹೊಸಪೇಟೆ: ರಂಜಾನ್‌ ಮಾಸದ ಉಪವಾಸ ಅಂದರೆ ಅದೊಂದು ಕಠಿಣ ವ್ರತಾಚರಣೆಯೇ ಸರಿ. ಈ ಪವಿತ್ರ ತಿಂಗಳಲ್ಲಿ ಉಪವಾಸ ಇದ್ದವರು ಉಗುಳು ಸಹ ನುಂಗುವುದಿಲ್ಲ. ಅಷ್ಟರಮಟ್ಟಿಗೆ ಅದನ್ನು ಕಠಿಣವಾಗಿ ಪಾಲಿಸುತ್ತಾರೆ. ಕಾರಣ ಅದು ದೈವ ಸಂದೇಶ ಎಂಬ ನಂಬಿಕೆ.

ಯುವಕರು, ಹದಿಹರೆಯದವರು ಈ ಮಾಸವಿಡೀ ಉಪವಾಸ ಆಚರಿಸುವುದು ಸಾಮಾನ್ಯ ಸಂಗತಿ. ಆದರೆ, ವಯಸ್ಕರಿಗೆ ಇದು ಸವಾಲಿನ ವಿಷಯ. ಅಂತಹ ಸವಾಲನ್ನು ಸ್ವೀಕರಿಸಿ ಅಚ್ಚುಕಟ್ಟಾಗಿ ಉಪವಾಸ ವ್ರತವನ್ನು ಆಚರಿಸುವವರು ಬೆರಳೆಣಿಕೆಯಷ್ಟು ಜನ. ಅಂತಹ ಕೆಲವೇ ಕೆಲವರಲ್ಲಿ ನಗರದ ಐದು ಜನ ಹಿರಿಯ ನಾಗರಿಕರು ಸೇರಿದ್ದಾರೆ. ಅವರೆಲ್ಲರ ವಯಸ್ಸು 70ಕ್ಕಿಂತ ಹೆಚ್ಚು. ಉಪವಾಸದಿಂದ ಅವರೇನೂ ಕಳೆಗುಂದಿಲ್ಲ. ಅವರಲ್ಲಿ ಹೊಸ ಚೈತನ್ಯ ಬಂದಿದೆ.

ನಗರದ ಜಿ.ಟಿ. ಕಾಂಪೌಂಡ್‌ ಬಡಾವಣೆಯ ಮೊಹಮ್ಮದ್‌ ಖಾಸೀಂ ಖಾನ್‌ (ವಯಸ್ಸು 73), ಟಕ್ಕಾ ಬಡಾವಣೆಯ ಮೆಹಮೂದ್‌ ಸಾಬ್‌ (72), ಸೈಯದ್‌ ಮೆಹಬೂಬ್‌ ಪೀರ್‌ ಸಾಹೇಬ್‌ (71), ರಾಣಿ ಪೇಟೆಯ ವಲಿ ಸಾಬ್‌ (72), ಮೊಹಮ್ಮದ್‌ ಅಲಿ (70) ಅವರು ಪ್ರತಿ ವರ್ಷ ತಪ್ಪದೇ ಉಪವಾಸ ವ್ರತ ಆಚರಿಸುತ್ತಾರೆ.

ಅಂದಹಾಗೆ, ಈ ಐದು ಜನ ಹತ್ತು–ಹನ್ನೆರಡು ವರ್ಷದವರಿದ್ದಾಗ ಉಪವಾಸ ಕೈಗೊಳ್ಳಲು ಆರಂಭಿಸಿದರು. ಅಂದಿನಿಂದ ಇಂದಿನವರೆಗೆ ಚಾಚೂತಪ್ಪದೇ ಉಪವಾಸ ಮಾಡುತ್ತಿದ್ದಾರೆ. ಮೊಹಮ್ಮದ್‌ ಖಾಸೀಂ ಖಾನ್‌ ಅವರಿಗೆ ಹೃದಯ ಕಾಯಿಲೆ, ಉಸಿರಾಟದ ಸಮಸ್ಯೆ ಇದೆ. ಹೀಗಿದ್ದಾಗಲೂ ಅವರು ರಂಜಾನ್‌ ಮಾಸದಲ್ಲಿ ಉಪವಾಸ ಕೈಗೊಳ್ಳುವುದು ಬಿಟ್ಟಿಲ್ಲ.

ವಲಿ ಸಾಬ್‌ ಕೂಡ ಹೃದಯ ರೋಗದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸದಾ ಜೇಬಿನಲ್ಲಿ ಗುಳಿಗೆ ಇಟ್ಟುಕೊಂಡಿರುತ್ತಾರೆ. ಇನ್ನು ಮೆಹಮೂದ್‌ ಸಾಬ್‌, ಸೈಯದ್‌ ಮೆಹಬೂಬ್‌ ಪೀರ್‌ ಸಾಹೇಬ್‌ ಹಾಗೂ ಮೊಹಮ್ಮದ್‌ ಅಲಿ ಅವರಲ್ಲಿ ನಿಶ್ಯಕ್ತಿಯ ಸಮಸ್ಯೆ ಇದೆ. ಇಷ್ಟೆಲ್ಲ ಇದ್ದರೂ ಅದನ್ನು ಮೆಟ್ಟಿನಿಂತು ಉಪವಾಸ ಮಾಡುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ‘ನಮಾಜ್‌’ (ಪ್ರಾರ್ಥನೆ) ಮಾಡಿ ದೇವರ ಸ್ಮರಿಸುತ್ತಾರೆ. ಸತತ ಒಂದು ತಿಂಗಳಿಂದ ಉಪವಾಸ ಮಾಡುತ್ತಿರುವ ಇವರ ಮುಖಗಳೇನೂ ಬಾಡಿಲ್ಲ.

ಈದ್‌–ಉಲ್‌–ಫಿತ್ರ ಹಬ್ಬದ ಮುನ್ನ ದಿನವಾದ ಮಂಗಳವಾರ ಸಂಜೆ ನಗರದ ಜಾಮೀಯ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಹೊರಬಂದು, ‘ಪ್ರಜಾವಾಣಿ’ಯೊಂದಿಗೆ ಉತ್ಸಾಹದಿಂದಲೇ ಮಾತನಾಡಿದರು. ‘ಉಪವಾಸ ಮಾಡುವುದರಿಂದ ದೇಹ ಮತ್ತು ಮನಸ್ಸು ಶುದ್ಧವಾಗುತ್ತದೆ. ತಾಳ್ಮೆ ಶಕ್ತಿ ಬೆಳೆಸುತ್ತದೆ. ಬೇರೆಯವರಿಗೆ ಕೆಟ್ಟದ್ದನ್ನು ಮಾಡಲು ಬಯಸುವುದಿಲ್ಲ. ವರ್ಷದಲ್ಲಿ ಒಂದು ಮಾಸ ಉಪವಾಸ ಮಾಡುವುದರಿಂದ ಆರೋಗ್ಯ ಕೂಡ ವೃದ್ಧಿಸುತ್ತದೆ’ ಎನ್ನುತ್ತಾರೆ ಮೊಹಮ್ಮದ್‌ ಖಾಸೀಂ ಖಾನ್‌.

‘ನನಗೆ ಹೃದಯ ಕಾಯಿಲೆ ಬಂದು ಅನೇಕ ವರ್ಷಗಳಾಗಿವೆ. ಆದರೂ ಪ್ರತಿವರ್ಷ ತಪ್ಪದೇ ಉಪವಾಸ ಮಾಡುತ್ತೇನೆ. ಯಾವುದೇ ಸಮಸ್ಯೆ ಆಗಿಲ್ಲ. ಉಪವಾಸ ಮಾಡುವುದರಿಂದ ಹೊಸ ಚೈತನ್ಯ ಬರುತ್ತದೆ’ ಎಂದು ವಲಿ ಸಾಬ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT