ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇನಿನ ಮಾಧುರ್ಯದ ಅಂಜೂರ ಕಣ್ಮರೆ: ಬೇರೆ ಬೆಳೆಗಳತ್ತ ಮುಖ ಮಾಡಿದ ಬಳ್ಳಾರಿ ರೈತರು

Last Updated 11 ಫೆಬ್ರುವರಿ 2022, 13:34 IST
ಅಕ್ಷರ ಗಾತ್ರ

ಬಳ್ಳಾರಿ: ನಾಲಿಗೆಗೆ ಜೇನಿನಂಥ ಸಿಹಿ ಕೊಡುವ ಅಂಜೂರದ ಹಣ್ಣು ಬಳ್ಳಾರಿ ಜಿಲ್ಲೆಯಿಂದ ಕಣ್ಮರೆಯಾಗುತ್ತಿದೆಯೇ? ಎರಡು ವರ್ಷಗಳಿಂದ ಜನರನ್ನು ಬಾಧಿಸುತ್ತಿರುವ ಕೋವಿಡ್, ಅಂಜೂರದ ಮಾರುಕಟ್ಟೆ ಮೇಲೂ ಪರಿಣಾಮ ಬೀರಿದ್ದರಿಂದ ರೈತರು ಅಂಜೂರದ ಗಿಡಗಳನ್ನು ಕತ್ತರಿಸಿ ಬಿಸಾಡಿ, ಬೇರೆ ಬೆಳೆಗಳತ್ತ ಮುಖ ಮಾಡಿದ್ದಾರೆ.

ಕೇಂದ್ರ ಸರ್ಕಾರದ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆಯಡಿ ಬಳ್ಳಾರಿ ಜಿಲ್ಲೆಯಿಂದ ಅಂಜೂರ ಆಯ್ಕೆ ಮಾಡಲಾಗಿತ್ತು. ಕುರುಗೋಡು ತಾಲ್ಲೂಕು, ಸಿರುಗುಪ್ಪ ತಾಲ್ಲೂಕಿನ ಕೆಲ ಭಾಗಗಳ ರೈತರು ಅಂಜೂರ ಬೆಳೆಯುತ್ತಿದ್ದಾರೆ. ಎರಡು ವರ್ಷದ ಹಿಂದೆ ಎರಡು ಸಾವಿರ ಹೆಕ್ಟೇರ್‌ನಲ್ಲಿ ಅಂಜೂರದ ಗಿಡಗಳಿದ್ದವು. ಕಳೆದ ವರ್ಷ ಇದು 1,200 ಹೆಕ್ಟೇರ್‌ಗೆ ಇಳಿದಿತ್ತು. ಈಗ ಕೇವಲ 400 ಹೆಕ್ಟೇರ್‌ನಲ್ಲಿ ಮಾತ್ರ ಅಂಜೂರದ ಗಿಡಗಳಿವೆ.

ಅಂಜೂರದ ಹಣ್ಣು ಬಳ್ಳಾರಿಯಿಂದ ಬೆಂಗಳೂರು, ಹೈದರಾಬಾದ್‌, ಚೆನ್ನೈ ಮತ್ತು ಮುಂಬೈ ಮಾರುಕಟ್ಟೆಗೆ ಹೋಗುತ್ತದೆ. ಕೋವಿಡ್‌ ಕಾರಣಕ್ಕೆ ಎರಡು ವರ್ಷದಿಂದ ಈ ಎಲ್ಲ ಮಾರುಕಟ್ಟೆಗಳು ಬಂದ್‌ ಆದವು. ಕೇಳುವವರಿಲ್ಲದೆ ಹಣ್ಣುಗಳು ಗಿಡದಲ್ಲೇ ಕೊಳೆತು ಉದುರಿದವು. ಹಣ್ಣುಗಳನ್ನು ಕಿತ್ತ 24ರಿಂದ 48ಗಂಟೆಯೊಳಗಾಗಿ ಮಾರಬೇಕು. ಇಲ್ಲದಿದ್ದರೆ ಹಾಳಾಗುತ್ತವೆ. ಹೀಗಾಗಿ, ಅಂಜೂರ ಬೆಳೆದು ತೊಂದರೆ ಅನುಭವಿಸಿದ ಬಳಿಕ ಗಿಡಗಳನ್ನು ಕಿತ್ತು ಹಾಕಿದ್ದಾಗಿ ಹಲವು ರೈತರು ವಿವರಿಸಿದರು.

ಬಳ್ಳಾರಿ ಸಮೀಪದ ಶ್ರೀನಿವಾಸ ಕ್ಯಾಂಪ್‌ ‘ಎಂ.ಆರ್‌. ಫ್ರೂಟ್ಸ್‌’ನ ರಮೇಶ್‌ 100 ಎಕರೆಯಲ್ಲಿ ಅಂಜೂರದ ಗಿಡಗಳನ್ನು ಬೆಳೆದಿದ್ದರು. 50 ಎಕರೆಯಲ್ಲಿ ಗಿಡಗಳನ್ನು ತೆಗೆದಿದ್ದಾರೆ. ‘ಕೋವಿಡ್‌ನಿಂದ ಮಾರುಕಟ್ಟೆ ಬಂದ್‌ ಆಗಿದ್ದರಿಂದ 50 ಎಕರೆಯಲ್ಲಿ ಅಂಜೂರದ ಗಿಡಗಳನ್ನು ತೆಗೆದು, ದಾಳಿಂಬೆ ಬೆಳೆದಿದ್ದೇನೆ’ ಎಂದು ವಿವರಿಸಿದರು.

ಅಂಜೂರದ ಹಣ್ಣುಗಳನ್ನು ಸಂಸ್ಕರಿಸಿ, ‘ಫಿಗ್‌ ಬಾರ್’ ಮತ್ತು ಜಾಮ್‌ ಮಾಡುವ ಪ್ರಯತ್ನ ಜಿಲ್ಲೆಯಲ್ಲಿ ಆರಂಭವಾಗಿದೆ. ಸಣ್ಣಪುಟ್ಟ ಪ್ರಮಾಣದಲ್ಲಿ ನಡೆದಿರುವುದರಿಂದ ಇನ್ನೂ ಹಣ್ಣುಗಳಿಗೆ ಬೇಡಿಕೆ ಬರುತ್ತಿಲ್ಲ. ದೊಡ್ಡ ಪ್ರಮಾಣದಲ್ಲಿ ಹಣ್ಣುಗಳನ್ನು ಸಂಸ್ಕರಿಸಿ ಮೌಲ್ಯವರ್ಧಿಸಿದರೆ ಈ ಬೆಳೆಗೆ ಬೇಡಿಕೆ ಬರುವ ಸಾಧ್ಯತೆಯಿದೆ. ಅಂಜೂರದ ಬೆಲೆ ಸದ್ಯ ಕೆ.ಜಿಗೆ ₹30ರಿಂದ ₹35 ಇದೆ. ಎಕರೆಗೆ ವರ್ಷಕ್ಕೆ ಆರೇಳು ಟನ್ ಇಳುವರಿ ಬರುತ್ತದೆ.

ಅಂಜೂರ ಬೆಳೆಯುವ ಪ್ರದೇಶವನ್ನು ವಿಸ್ತರಿಸಲು ತೋಟಗಾರಿಕೆ ಇಲಾಖೆಯೂ ಪ್ರಯತ್ನ ಆರಂಭಿಸಿದೆ. ಈ ಪ್ರಯತ್ನ ಯಶಸ್ವಿಯಾದರೆ ಮಾತ್ರ ಜಿಲ್ಲೆಯಲ್ಲಿ ಅಂಜೂರ ಉಳಿಯಬಹುದು. ಬಳ್ಳಾರಿ ಗಣಿ ದೂಳಿನಲ್ಲೂ ಅಂಜೂರದ ಘಮ ತೇಲಿ ಬರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT