ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಪನ ಪ್ರತಿಷ್ಠಾಪನೆಗೆ ಭರದ ಸಿದ್ಧತೆ | ಕೆಲವೆಡೆ ಸರಳ, ಕೆಲವೆಡೆ ಅದ್ದೂರಿ ಉತ್ಸವ

ಸಿದ್ಧತೆಯಲ್ಲಿ ತೊಡಗಿರುವ ಗಣೇಶ ಮಂಡಳಿಗಳು
Last Updated 31 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಹೊಸಪೇಟೆ: ಗಣೇಶ ಪ್ರತಿಷ್ಠಾಪನೆಗೆ ಒಂದೇ ದಿನ ಬಾಕಿ ಉಳಿದಿದ್ದು, ವಿವಿಧ ಪ್ರಕಾರದ ಗಣಪನ ಮೂರ್ತಿಗಳು ಪ್ರತಿಷ್ಠಾಪನೆಗೆ ಸಿದ್ಧಗೊಂಡಿವೆ.

ಆಯಾ ಗಣೇಶ ಮಂಡಳಿಯವರು ಉತ್ಸವಕ್ಕೆ ಕೊನೆಯ ಹಂತದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಮರಾವತಿ, ಚಿತ್ತವಾಡ್ಗಿ, ಪಟೇಲ್‌ ನಗರ, ಬಸವೇಶ್ವರ ಬಡಾವಣೆ, ರಾಣಿಪೇಟೆ, ಟಿ.ಬಿ.ಡ್ಯಾಂ ಬಡಾವಣೆ ಸೇರಿದಂತೆ ವಿವಿಧ ಕಡೆಗಳಲ್ಲಿ ಪೆಂಡಾಲ್‌ ನಿರ್ಮಾಣ, ವಿದ್ಯುದ್ದೀಪಗಳ ಅಲಂಕಾರ ಮಾಡುತ್ತಿರುವುದು ಶುಕ್ರವಾರ ಕಂಡು ಬಂತು.

ಕೆಲವೆಡೆ ಸರಳ, ಕೆಲವೆಡೆ ಅದ್ದೂರಿ:

ನೆರೆಯಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಾವು–ನೋವು ಉಂಟಾಗಿರುವ ಕಾರಣ ಈ ವರ್ಷ ಕೆಲ ಗಣೇಶ ಮಂಡಳಿಗಳು ಸರಳ ರೀತಿಯಲ್ಲಿ ಹಬ್ಬ ಆಚರಿಸಲು ನಿರ್ಧರಿಸಿವೆ. ಸಂಗ್ರಹಿಸಿದ್ದ ಚಂದಾ ಹಣದ ಪೈಕಿ ಹೆಚ್ಚಿನ ಮೊತ್ತವನ್ನು ನೆರೆ ಸಂತ್ರಸ್ತರ ನಿಧಿಗೆ ದೇಣಿಗೆ ಕೊಟ್ಟಿದ್ದಾರೆ. ಸಣ್ಣ ಮೂರ್ತಿ ಕೂರಿಸಿ, ಪೂಜೆ ಮಾಡಿ ಸರಳವಾಗಿ ಗಣೇಶ ಉತ್ಸವ ಆಚರಿಸಲು ಮುಂದಾಗಿದ್ದಾರೆ.

ರಾಣಿಪೇಟೆಯ ಆನಂದ ಗಣಪ ಉತ್ಸವ ಮಂಡಳಿಯವರು ಈ ಸಲವೂ ವಿಜೃಂಭಣೆಯಿಂದ ಹಬ್ಬ ಆಚರಿಸುವರು. ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್‌, ಗಾಯಕಿ ಅನನ್ಯ ಭಟ್‌, ವಾಸು ದೀಕ್ಷಿತ್‌ ಅವರಂತಹ ಹೆಸರಾಂತ ಕಲಾವಿದರ ಕಾರ್ಯಕ್ರಮ ಆಯೋಜಿಸಿದ್ದಾರೆ. ವಿಸರ್ಜನೆಗೂ ಮುನ್ನ ನಡೆಯಲಿರುವ ಮೆರವಣಿಗೆಯಲ್ಲಿ ಮುಂಬೈ, ಪುಣೆ, ಕೇರಳದ ಕಲಾ ತಂಡಗಳು ಪಾಲ್ಗೊಳ್ಳಲಿವೆ.

ಅಲ್ಲಿ ದುರ್ಗೆ– ಇಲ್ಲಿ ಗಣಪ

ಪ್ರತಿ ವರ್ಷದಂತೆ ಈ ವರ್ಷವೂ ಕೋಲ್ಕತ್ತದ ನೂರು ಜನ ಕಲಾವಿದರು ನಗರಕ್ಕೆ ಬಂದು, ಐದು ತಿಂಗಳ ಹಿಂದೆಯೇ ಗಣಪನ ಮೂರ್ತಿ ನಿರ್ಮಿಸುವ ಕೆಲಸ ಶುರು ಮಾಡಿದ್ದರು. ಬಹುತೇಕ ಮೂರ್ತಿಗಳು ಸಿದ್ಧಗೊಂಡಿದ್ದು, ಕೆಲವು ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ.

ಎಂದಿನಂತೆ ಬಿದಿರು, ಜೇಡಿ ಮಣ್ಣು ಹಾಗೂ ನೈಸರ್ಗಿಕ ಬಣ್ಣ ಬಳಸಿ ಪರಿಸರ ಸ್ನೇಹಿ ಮೂರ್ತಿಗಳನ್ನು ನಿರ್ಮಿಸಿದ್ದಾರೆ. ನಾಲ್ಕರಿಂದ 13 ಅಡಿ ಎತ್ತರದ ಮೂರ್ತಿಗಳನ್ನು ಮಾಡಿದ್ದಾರೆ. ಒಟ್ಟು ಹತ್ತು ಕಡೆಗಳಲ್ಲಿ ಮೂರ್ತಿಗಳನ್ನು ತಯಾರಿಸಿದ್ದು, ₹3,500ರಿಂದ ₹1,02,000 ಮೌಲ್ಯದ ಗಣೇಶನ ಮೂರ್ತಿಗಳಿವೆ.

ಕೆಲವು ಗಣೇಶ ಮಂಡಳಿಯವರು ಅವರಿಗೆ ಬೇಕಾದ ರೀತಿಯಲ್ಲಿ ಮುಂಗಡ ಹಣ ಪಾವತಿಸಿ, ಬೇಡಿಕೆ ಸಲ್ಲಿಸಿದರೆ, ಕೆಲವು ಮೂರ್ತಿಗಳಿಗೆ ಇವರೇ ರೂಪ ಕೊಟ್ಟಿದ್ದಾರೆ. ಅದರಲ್ಲಿ ನಟರಾಜ ಗಣಪ, ಡೈಮಂಡ್‌ ಗಣಪ, ಶಿವ ಗಣಪ, ಶಿವ ಪಾರ್ವತಿ ಗಣಪ, ಮೂಷಿಕ ಆಸನ ಗಣಪ ಮೊದಲಾದವು ಸೇರಿವೆ. ಜಿಲ್ಲೆ ಸೇರಿದಂತೆ ನೆರೆಯ ದಾವಣಗೆರೆ, ಚಿತ್ರದುರ್ಗ, ಕೊಪ್ಪಳ, ಆಂಧ್ರದ ಗುಂತಕಲ್‌, ಅನಂತಪುರದ ಗಣೇಶ ಮಂಡಳಿಗಳಿಂದ ಬೇಡಿಕೆ ಬಂದಿದೆ.

ಅಂದಹಾಗೆ, ಈ ಕಲಾವಿದರು ಆರರಿಂದ ಎಂಟು ತಿಂಗಳು ಕೋಲ್ಕತ್ತದಲ್ಲಿ ದುರ್ಗಾ ಮಾತೆ ಮೂರ್ತಿಗಳನ್ನು ತಯಾರಿಸುತ್ತಾರೆ. ಮಿಕ್ಕುಳಿದ ನಾಲ್ಕು ತಿಂಗಳು ನಗರಕ್ಕೆ ಬಂದು ಗಣೇಶನ ಮೂರ್ತಿಗಳನ್ನು ಮಾಡುತ್ತಾರೆ. ಕಾರ್ಮಿಕರ ಕೆಲಸ ನೋಡಿಕೊಂಡು ಒಬ್ಬರಿಗೆ ₹15ರಿಂದ ₹50 ಸಾವಿರದ ವರೆಗೆ ಮಾಸಿಕ ಕೂಲಿ ನೀಡಲಾಗುತ್ತದೆ.

‘ನಮ್ಮ ಪೂರ್ವಜರ ಮೂಲ ಕಾಯಕ ಮೂರ್ತಿಗಳನ್ನು ಮಾಡುವುದು. ಕೋಲ್ಕತ್ತದಲ್ಲಿ 15ರಿಂದ 20 ಅಡಿಯ ದುರ್ಗಾ ದೇವಿ ಮೂರ್ತಿಗಳನ್ನು ಮಾಡುತ್ತೇವೆ’ ಎಂದು ಕಲಾವಿದ ಮಾಧವ ಪಾಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT