ಭಾನುವಾರ, ಜನವರಿ 24, 2021
17 °C
ಮಳೆಯಾಶ್ರಿತ ಪ್ರದೇಶಕ್ಕೆ ನೀರು ಹರಿಸುವ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಚಾಲನೆ

ಬಳ್ಳಾರಿ | ಕೊನೆಗೂ ಈಡೇರಿತು ಬಹುವರ್ಷಗಳ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾಪಿನಾಯಕನಹಳ್ಳಿ (ಹೊಸಪೇಟೆ ತಾಲ್ಲೂಕು): ತಾಲ್ಲೂಕಿನ ಮಳೆಯಾಶ್ರಿತ ಪ್ರದೇಶದ ಗ್ರಾಮಗಳಿಗೆ ನೀರು ಹರಿಸಬೇಕೆಂಬ ರೈತರ ಬಹುವರ್ಷಗಳ ಬೇಡಿಕೆಗೆ ಕೊನೆಗೂ ಸರ್ಕಾರ ಸ್ಪಂದಿಸಿದೆ.

₹243.35 ಕೋಟಿ ಮೊತ್ತದ ನೀರಾವರಿ ಯೋಜನೆಗೆ ಚಾಲನೆ ಕೊಡುವುದರ ಮೂಲಕ ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ತಾಲ್ಲೂಕಿನ ಪಾಪಿನಾಯಕನಹಳ್ಳಿ ಹಾಗೂ ಅದರ ಸುತ್ತಮುತ್ತಲಿನ ಗ್ರಾಮಗಳು ಗಣಿಗಾರಿಕೆಯಿಂದ ಬಾಧಿತವಾಗಿವೆ. ಅಲ್ಲಿ ಯಾವುದೇ ಜಲಮೂಲಗಳಿಲ್ಲ. ರೈತರು ಮಳೆಯನ್ನೇ ಆಶ್ರಯಿಸಿ ಕೃಷಿ ಮಾಡುತ್ತಾರೆ. ಅಂತರ್ಜಲ ಮಟ್ಟ ಕುಸಿದಿದೆ.

ಈ ಯೋಜನೆಯ ಮೂಲಕ ಆ ಭಾಗದ 22 ಕೆರೆಗಳನ್ನು ತುಂಬಿಸಲಾಗುತ್ತದೆ. ಈ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸುವುದು ಮತ್ತು ಅಂತರ್ಜಲ ಮಟ್ಟ ಹೆಚ್ಚಿಸುವುದು ಯೋಜನೆಯ ಉದ್ದೇಶವಾಗಿದೆ.
ತುಂಗಭದ್ರಾ ನದಿಯ ನಿಂಬಾಪುರದಿಂದ ನೀರು ಎತ್ತಿ, ನಾಲ್ಕು ಹೊಸ ಕಿರು ಸಂಗ್ರಹಾಗಾರಗಳಲ್ಲಿ ನೀರು ಸಂಗ್ರಹಿಸಲಾಗುತ್ತದೆ. ಅಲ್ಲಿ ಜಾಕ್‌ವೆಲ್‌ ನಿರ್ಮಿಸಿ, ವಿತರಣಾ ಪೈಪ್‌ಲೈನ್‌ಗಳ ಮೂಲಕ 0.304 ಟಿಎಂಸಿ ನೀರು ತುಂಬಿಸಲು ಯೋಜಿಸಲಾಗಿದೆ.

ಈಗಾಗಲೇ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ತುಂಗಭದ್ರಾ ನೀರಾವರಿ ನಿಗಮದ ಮೇಲ್ವಿಚಾರಣೆಯಲ್ಲಿ ಗುತ್ತಿಗೆದಾರರಾದ ದೊಡ್ಡ ಹನುಮಂತಪ್ಪ, ಜನಾರ್ದನ ರೆಡ್ಡಿಯವರು ಯೋಜನೆ ಕಾರ್ಯರೂಪಕ್ಕೆ ತರುವರು.

ಬೆಂಗಳೂರಿನಿಂದಲೇ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ‘ಈ ಯೋಜನೆಗೆ ಚಾಲನೆ ನೀಡುತ್ತಿರುವುದಕ್ಕೆ ಬಹಳ ಖುಷಿಯಾಗುತ್ತಿದೆ. ಬರುವ ದಿನಗಳಲ್ಲಿ ಈ ಗ್ರಾಮಗಳಲ್ಲಿ ನೀರಿನ ಸಮಸ್ಯೆ ನೀಗಲಿದೆ. ಕಾಮಗಾರಿ ಶೀಘ್ರ ಪೂರ್ಣಗೊಂಡು ಜನಬಳಕೆಗೆ ಮುಕ್ತವಾಗಲಿ. ‘ಜಲಜೀವನ ಮಿಷನ್‌’ ಯೋಜನೆಯ ಅಡಿ ರಾಜ್ಯದ ಒಂದು ಲಕ್ಷ ಮನೆಗಳಿಗೆ ನಲ್ಲಿ ಮೂಲಕ ನೀರು ಪೂರೈಸಲಾಗುವುದು’ ಎಂದು ಹೇಳಿದರು.

ಅರಣ್ಯ ಸಚಿವ ಆನಂದ್‌ ಸಿಂಗ್‌ ಮಾತನಾಡಿ, ‘ಉಪಚುನಾವಣೆಯಲ್ಲಿ ಸಿ.ಎಂ. ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಅವರ ಇಂದಿನ ಎಲ್ಲ ಕಾರ್ಯಕ್ರಮ ರದ್ದುಮಾಡಿ, ಕ್ಷೇತ್ರಕ್ಕೆ ಸಮಯ ಕೊಟ್ಟಿದ್ದಾರೆ. ವಿಜಯನಗರ ಕ್ಷೇತ್ರದ ಜನತೆ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಯೋಜನೆ ಕುರಿತು ವರದಿ ತಯಾರಿಸಲು ಆರೇಳು ವರ್ಷಗಳಿಂದ ನೀರಾವರಿ ಇಲಾಖೆಯ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ರೈತರು ಇದಕ್ಕಾಗಿ ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಇದರ ಶ್ರೇಯ ಅವರಿಗೆ ಸಲ್ಲಬೇಕು. ನಾನು ಜನರ ಧ್ವನಿಯಾಗಿ ಸರ್ಕಾರದೊಂದಿಗೆ ಸೇತುವೆಯಾಗಿ ಕೆಲಸ ಮಾಡುತ್ತಿರುವೆ’ ಎಂದರು.

‘ವಿಜಯನಗರ ಜಿಲ್ಲೆ ರಚನೆ ಮಾಡುತ್ತಿರುವುದು ಆಡಳಿತಾತ್ಮಕ ದೃಷ್ಟಿಕೋನದಿಂದ. ಹಂಪಿ, ತುಂಗಭದ್ರಾ ಹೋಗಿ ಬಿಡುತ್ತದೆ. ರೈತರಿಗೆ ತೊಂದರೆಯಾಗುತ್ತದೆ ಎಂಬುದೆಲ್ಲ ಸುಳ್ಳು. ಎಲ್ಲರೂ ಅಣ್ಣ ತಮ್ಮಂದಿರಂತೆ ಇರೋಣ’ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಸಂಸದ ವೈ.ದೇವೇಂದ್ರಪ್ಪ ಮಾತನಾಡಿ, ‘ಕೆರೆಗಳಿಗೆ ನೀರು ತುಂಬಿಸಬೇಕು ಎನ್ನುವುದು ಸ್ವಾತಂತ್ರ್ಯ ಪೂರ್ವದಿಂದಲೂ ಇರುವ ಬೇಡಿಕೆ. ಈಗ ಅದು ಆನಂದ್‌ ಸಿಂಗ್‌ ಅವರ ಕಾಲದಲ್ಲಿ ಈಡೇರಿದೆ. ಜಿಲ್ಲೆಯ ಸಂಡೂರು, ಕೂಡ್ಲಿಗಿ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಲು ಯೋಜನಾ ವರದಿ ಸಿದ್ಧಪಡಿಸಲಾಗಿದೆ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎಸ್‌. ಮಂಜುನಾಥ, ತುಂಗಭದ್ರಾ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್‌ ಎಸ್‌.ಎಚ್‌. ಮಂಜಪ್ಪ, ಎಂಜಿನಿಯರ್‌ ಎಸ್‌.ವಿ. ನಾಗಭೂಷಣ, ತಹಶೀಲ್ದಾರ್‌ ಎಚ್‌. ವಿಶ್ವನಾಥ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಾಗವೇಣಿ ಬಸವರಾಜ, ಸದಸ್ಯ ಗಾದಿಲಿಂಗಪ್ಪ, ಹುಡಾ ಅಧ್ಯಕ್ಷ ಅಶೋಕ ಜೀರೆ, ಮುಖಂಡರಾದ ಈಶ್ವರ್‌, ಸಾಲಿ ಸಿದ್ದಯ್ಯ ಸ್ವಾಮಿ, ಬಸವರಾಜ ನಾಲತ್ವಾಡ, ಕವಿತಾ ಈಶ್ವರ್‌ ಸಿಂಗ್‌, ಶ್ರೀನಿವಾಸ್‌ ಗುಜ್ಜಲ್‌, ಜಂಬಯ್ಯ ನಾಯಕ, ನಾಗಿರೆಡ್ಡಿ ಇದ್ದರು.

‘ಪಿಕ್ಚರ್‌ ಅಭಿ ಬಾಕಿ ಹೈ’:
‘ಪಿಕ್ಚರ್‌ ಅಭಿ ಬಾಕಿ ಹೈ. ಇನ್ನೊಂದು ಕೆಲಸವಾಗಬೇಕಿದೆ. ಆ ಕೆಲಸ ಪೂರ್ಣಗೊಂಡ ನಂತರ ವಿಜಯನಗರ ಕ್ಷೇತ್ರದ ಎಲ್ಲ ಗ್ರಾಮಗಳಿಗೆ ಭೇಟಿ ಕೊಡುವೆ’ ಎಂದು ಸಚಿವ ಆನಂದ್‌ ಸಿಂಗ್‌ ಅವರು ವಿಜಯನಗರ ಜಿಲ್ಲೆ ರಚನೆ ಕುರಿತು ಹೇಳಿದರು.
‘ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆಲಸ ಮಾಡಿಸಲು ಬೆಂಗಳೂರಿಗೆ ಓಡಾಡುತ್ತಿರುವೆ. ಹೀಗಾಗಿ ಗ್ರಾಮಗಳಿಗೆ ಭೇಟಿ ಕೊಡಲು ಆಗಿಲ್ಲ. ನನ್ನಿಂದ ಕೂಡ ಕೆಲವು ತಪ್ಪುಗಳಾಗಿವೆ. ನನ್ನನ್ನು ಕ್ಷಮಿಸಬೇಕು. ಮನೆಯ ಮಗನಂತೆ ನನಗೆ ಸಹಕಾರ ಕೊಟ್ಟಿದ್ದೀರಿ. ನಿಮಗೆ ನ್ಯಾಯ ಒದಗಿಸಿಕೊಡಲು ಶ್ರಮಿಸುವೆ’ ಎಂದು ಭರವಸೆ ನೀಡಿದರು.

ಯೋಜನೆಯ ವಿವರ...
₹243.35 ಕೋಟಿ ಮೊತ್ತದ ಯೋಜನೆ
ತುಂಗಭದ್ರಾ ನದಿ ನಿಂಬಾಪುರ ಗ್ರಾಮದಿಂದ ನೀರೆತ್ತುವುದು
0.304 ಟಿಎಂಸಿ ನೀರಿನ ಪ್ರಮಾಣ
ಇನ್ ಟೆಕ್ ಕಾಲುವೆಯ ಉದ್ದ 100 ಮೀ.
ಒಂದು ಪಂಪ್ ಹೌಸ್ ನಿರ್ಮಾಣ
16.8 ಕಿ.ಮೀ ಎಂಎಸ್ ರೈಸಿಂಗ್ ಮೇನ್ ಉದ್ದ
52.55 ಕಿ.ಮೀ ವಿತರಣಾ ಪೈಪ್
04 ವಿತರಣಾ ತೊಟ್ಟಿಗಳು
22 ಕೆರೆಗಳಿಗೆ ನೀರು
04 ಕಿರು ನೀರು ಸಂಗ್ರಹಾಗಾರ
48 ಸಾವಿರ‌ ಜನರಿಗೆ ಪ್ರಯೋಜನ

ಯಾವ್ಯಾವ ಗ್ರಾಮಗಳಿಗೆ ಪ್ರಯೋಜನ
ಇಂಗಳಗಿ
ಬೈಲುವದ್ದಿಗೇರಿ
ಕಾಕುಬಾಳು
ಚಿನ್ನಾಪುರ
ನಲ್ಲಾಪುರ
ಗಾಳೆಮ್ಮನಗುಡಿ
ಭುವನಹಳ್ಳಿ
ಗಾದಿಗನೂರು
ಕಾರಿಗನೂರು
ವಡ್ಡರಹಳ್ಳಿ
ಧರ್ಮಸಾಗರ
ಕೊಟಗಿನಹಾಳ್
ಗುಂಡ್ಲವದ್ದಿಗೇರಿ
ಜೋಗ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.