ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾರ್ದನ ರೆಡ್ಡಿ ಹುಟ್ಟುಹಬ್ಬ: ಎಫ್‌ಐಆರ್‌ ದಾಖಲು-ಸಚಿವರು, ಮಾಜಿ ಸಚಿವರ ಹೆಸರಿಲ್ಲ

Last Updated 13 ಜನವರಿ 2022, 15:00 IST
ಅಕ್ಷರ ಗಾತ್ರ

ಬಳ್ಳಾರಿ: ಕೋವಿಡ್‌ ಮೂರನೇ ಅಲೆ ಸಮುದಾಯಕ್ಕೆ ಹರಡದಂತೆ ತಡೆಯಲು ರಾಜ್ಯ ಸರ್ಕಾರ ಮತ್ತು ಬಳ್ಳಾರಿ ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶ ಉಲ್ಲಂಘಿಸಿ ಮಂಗಳವಾರ ಏರ್ಪಡಿಸಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಹುಟ್ಟುಹಬ್ಬದ ಸಂಬಂಧ ಇಲ್ಲಿನ ಗಾಂಧಿನಗರ ಮತ್ತು ಎಪಿಎಂಸಿ ಮಾರುಕಟ್ಟೆ ಪೊಲೀಸ್‌ ಠಾಣೆಗಳಲ್ಲಿ ಎರಡು ಪ್ರತ್ಯೇಕ ಎಫ್ಐಆರ್‌ಗಳು ದಾಖಲಾಗಿವೆ.

ಎಪಿಎಂಸಿ ಠಾಣೆಯಲ್ಲಿ (0003/2022) ದಾಖಲಾಗಿರುವ ಎಫ್‌ಐಆರ್‌ನಲ್ಲಿ ಮಲ್ಲಿಕಾರ್ಜುನ, ನಾಗೇಂದ್ರ ಬಿ ಹಾಗೂ ಪ್ರಭಾಕರ್‌ ಮತ್ತು ಗಾಂಧಿನಗರದಲ್ಲಿ ಗಾದೆಪ್ಪ, ಮಾರುತಿ ಪ್ರಸಾದ್‌ ಹಾಗೂ ಅಶೋಕ್‌ ಎಂಬುವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ, ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ ಹಾಗೂ ಭಾರತ ದಂಡ ಸಂಹಿತೆ ಅಡಿ ಪ್ರಕರಣ ದಾಖಲಿಸಲಾಗಿದೆ.

ಆದರೆ, ಹುಟ್ಟುಹಬ್ಬದ ಪ್ರಮುಖ ಆಕರ್ಷಣೆ ಆಗಿದ್ದ ಜನಾರ್ದನ ರೆಡ್ಡಿ, ಸಾರಿಗೆ ಸಚಿವ ಶ್ರೀರಾಮುಲು ಸೇರಿದಂತೆ ಅನೇಕ ಗಣ್ಯರ ಹೆಸರನ್ನು ಎಫ್‌ಐಆರ್‌ಗಳಲ್ಲಿ ಸೇರ್ಪಡೆ ಮಾಡದಿರುವ ಬಗ್ಗೆ ಪೊಲೀಸ್‌ ಇಲಾಖೆ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.

ಸಾರ್ವತ್ರಿಕ ದಾಖಲೆಯಾದ ಎಫ್‌ಐಆರ್‌ ಪ್ರತಿಗಳನ್ನು ಮಾಧ್ಯಮಗಳಿಗೆ ನೀಡಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲು ಅಡಾವತ್‌ ನಿರಾಕರಿಸಿದ್ದಾರೆ. ಕರ್ನಾಟಕ ರಾಜ್ಯ ಪೊಲೀಸ್‌ ವೆಬ್‌ಸೈಟ್‌ನಲ್ಲಿ ಎಪಿಎಂಸಿ ಠಾಣೆ ಎಫ್‌ಐಆರ್‌ ಅಪ್‌ಲೋಡ್‌ ಆಗಿದೆ. ಗಾಂಧಿನಗರ ಠಾಣೆ ಎಫ್‌ಐಆರ್‌ ಗುರುವಾರ ಸಂಜೆ 5ರವರೆಗೂ ಅಪ್‌ಲೋಡ್‌ ಆಗಿರಲಿಲ್ಲ.

ಎಪಿಎಂಸಿ ಠಾಣೆ ಪಿಎಸ್ಐ ಪರುಶರಾಮ ದಾಖಲಿಸಿರುವ ಸ್ವಯಂಪ್ರೇರಿತ ದೂರಿನಲ್ಲಿ, ‘ಕಾಕರ್ಲ ತೋಟದಲ್ಲಿರುವ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಲು ಜನಾರ್ದನ ರೆಡ್ಡಿ ಬರುತ್ತಾರೆಂಬ ಸುದ್ದಿ ತಿಳಿದು ಅಲ್ಲಿಗೆ ಹೋದಾಗ, ಮಲ್ಲಿಕಾರ್ಜುನ, ನಾಗೇಂದ್ರ ಮತ್ತು ಪ್ರಭಾಕರ್‌ ಬೆಂಬಲಿಗರ ಜತೆ ಮಾಸ್ಕ್‌ ಧರಿಸದೆ, ಕೈಯಲ್ಲಿ ಹೂಗುಚ್ಛ ಹಿಡಿದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹುಟ್ಟುಹಬ್ಬದ ಶುಭಾಶಯ ಕೋರಲು ನೂಕುನುಗ್ಗಲು ಉಂಟುಮಾಡಿರುತ್ತಾರೆ. ಆ ಮೂಲಕ ನಿರ್ಲಕ್ಷ್ಯ ತೋರಿದ್ದಾರೆ’ ಎಂದು ಆರೋಪಿಸಿದ್ದಾರೆ.

ಮೇಲಧಿಕಾರಿಗಳ ಜತೆ ಚರ್ಚಿಸಿ ದೂರು ಕೊಟ್ಟಿರುವುದರಿಂದ ಸ್ವಲ್ಪ ತಡವಾಗಿದೆ ಎಂದು ಪಿಎಸ್‌ಐ ಪರುಶರಾಮ ಕಾರಣ ನೀಡಿದ್ದಾರೆ.

ಬಳ್ಳಾರಿ ಜಿಲ್ಲಾಧಿಕಾರಿ ಪವನ್‌ ಕುಮಾರ್‌ ಮಾಲಪಾಟಿ ರಾಜ್ಯ ಸರ್ಕಾರದ ಮಾರ್ಗಸೂಚಿಗೆ ಪೂರಕವಾಗಿ ಈ ತಿಂಗಳ 5ರಂದು ಹೊರಡಿಸಿರುವ ಆದೇಶದಲ್ಲಿ, ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅನುಮತಿ ನೀಡಿದ್ದಾರೆ. ಯಾವುದೇ ಸಮಯದಲ್ಲಿ 50ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರಿರಬಾರದು ಎಂದು ಸೂಚಿಸಿದ್ದಾರೆ.

ಕನಕ ದುರ್ಗಮ್ಮ ಗುಡಿ ಹಾಗೂ ಕಾಕರ್ಲ ತೋಟದ ಆಂಜನೇಯ ಸ್ವಾಮಿ ಗುಡಿಯಲ್ಲಿ ಜನಜಂಗುಳಿ ಸೇರಿದ್ದ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.

ಗುಂಪಿನಲ್ಲಿದ್ದರೆ ಕ್ರಮ: ಎಸ್‌ಪಿ
ಜನಾರ್ದನ ರೆಡ್ಡಿ ಹುಟ್ಟುಹಬ್ಬಕ್ಕೆ ಸಂಬಂಧಿಸಿದಂತೆ ಸದ್ಯ ಸಂಘಟಕರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಮಾಜಿ ಸಚಿವ ಜನಾರ್ದನ ರೆಡ್ಡಿ, ಸಾರಿಗೆ ಸಚಿವ ಬಿ. ಶ್ರೀರಾಮುಲು ಮತ್ತಿತರರು ಗುಂಪಿನ ಭಾಗವಾಗಿದ್ದರೆ ಕ್ರಮ ಕೈಗೊಳ್ಳಲಾಗುವುದು, ಆನಂತರ ಹೆಸರು ಸೇರ್ಪಡೆ ಮಾಡಲಾಗುವುದು ಎಂದು ಎಸ್‌ಪಿ ಸೈದುಲು ಅಡಾವತ್‌ ಗುರುವಾರ ಸಂಜೆ ತಿಳಿಸಿದ್ದಾರೆ. ಕಾರ್ಯಕ್ರಮಕ್ಕೆ ಸಂಬಂಧಿಸಿದ ವೀಡಿಯೊ ಹಾಗೂ ಫೋಟೋಗಳನ್ನು ತರಿಸಿಕೊಂಡು ನೋಡುವುದಾಗಿ ಎಸ್‌ಪಿ ಬುಧವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದರು.

ಒತ್ತಡಕ್ಕೆ ಮಣಿದರೆ?
ಜನಾರ್ದನ ರೆಡ್ಡಿ ಹುಟ್ಟುಹಬ್ಬದ ವೇಳೆ ಮಾಡಿದ ಭಾಷಣವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಅವರಿಗೆ ಬಳ್ಳಾರಿಗೆ ಬರಲು ಅನುಮತಿ ನೀಡುವಾಗ, ಕೋರ್ಟ್‌ ಕೆಲವು ಕಟ್ಟುಪಾಡುಗಳನ್ನು ವಿಧಿಸಿದೆ. ಅವರ ವಿರುದ್ಧ ಪ್ರಕರಣ ದಾಖಲಾದರೆ ಅನುಮತಿ ರದ್ದಾಗಬಹುದೆಂಬ ಕಾರಣಕ್ಕೆ ಎಫ್‌ಐಆರ್‌ ಹಾಕಿಲ್ಲ. ಪೊಲೀಸರು ಒತ್ತಡಕ್ಕೆ ಮಣಿದಂತಿದೆಎಂದು ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಡುತ್ತಿರುವ ಉದ್ಯಮಿ ಟಪಾಲ್‌ ಗಣೇಶ್‌ ಆರೋಪಿಸಿದ್ದಾರೆ.

ಕೋವಿಡ್‌ ನಿಯಮ ಉಲ್ಲಂಘಿಸಿದ್ದಾರೆ ಎನ್ನಲಾದ ದೊಡ್ಡ ನಾಯಕರನ್ನು ಬಿಟ್ಟು ಸಣ್ಣಪುಟ್ಟವರ ಮೇಲೆ ದೂರು ದಾಖಲಿಸಿರುವ ಪೊಲೀಸ್‌ ಇಲಾಖೆ ನಡವಳಿಕೆ ಆಕ್ಷೇಪಾರ್ಹ.
ವೆಂಕಟೇಶ್‌ ಹೆಗಡೆ, ಕೆಪಿಸಿಸಿ ಮಾಧ್ಯಮ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT