ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಳಿಂಬೆ ಬೆಳೆಗೆ ಮೀನಿನ ಔಷಧ!

Last Updated 27 ಮೇ 2019, 19:45 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ದುಂಡಾಣು ಮಚ್ಚೆರೋಗದಿಂದ ಬೇಸತ್ತು ಹೋಗಿದ್ದ ತಾಲ್ಲೂಕಿನ ಮಾಲವಿ ಗ್ರಾಮದ ರೈತ ನರೇಗಲ್ಲು ಸುರೇಶ್‌ ಅವರು ಮೀನಿನ ಔಷಧ ತಯಾರಿಸಿ, ಅದರಿಂದ ಉತ್ಕೃಷ್ಟವಾದ ದಾಳಿಂಬೆ ಬೆಳೆದು ಯಶಸ್ಸಿನ ಹಾದಿಯಲ್ಲಿ ಮುನ್ನಡೆದಿದ್ದಾರೆ.

ಸುರೇಶ್‌ ಅವರು ಈ ಹಿಂದೆ ಮೆಕ್ಕೆಜೋಳ, ಜೋಳ ಬೆಳೆಯುತ್ತಿದ್ದರು. ಆದರೆ, ಅವರ ಸ್ಥಿತಿಗತಿಯಲ್ಲಿ ಯಾವುದೇ ವ್ಯತ್ಯಾಸ ಉಂಟಾಗಲಿಲ್ಲ. ಹಾಗಾಗಿ ಸ್ನೇಹಿತನ ಸಲಹೆ ಮೇರೆಗೆ ದಾಳಿಂಬೆ ಕಡೆಗೆ ಮುಖ ಮಾಡಿದರು. ದುಂಡಾಣು ಮಚ್ಚೆ ರೋಗದಿಂದ ಕೈ ಸುಟ್ಟುಕೊಂಡರು. ಹಾಕಿದ ಬಂಡವಾಳವೂ ಕೈ ಸೇರಲಿಲ್ಲ.ಜಿಲ್ಲಾ ಕೃಷಿ ವಿಸ್ತಾರಕರ ಸಲಹೆ ಪಡೆದು ತೋಟದ ಮನೆಯಲ್ಲಿ ಕಡಿಮೆ ವೆಚ್ಚದಲ್ಲಿ ಮೀನಿನ ಔಷಧ ತಯಾರಿಸಿದರು. ಅದನ್ನು ಸಿಂಪಡಿಸಲು ಆರಂಭಿಸಿದ ಬಳಿಕ ಉತ್ತಮ ಇಳುವರಿ ಬರುತ್ತಿದೆ. ರೋಗದ ಕಾಟವೂ ಇಲ್ಲ.

ಔಷಧಿ ತಯಾರಿಸುವ ವಿಧಾನ:

200 ಲೀಟರ್ ಮೀನಿನ ಔಷಧ ತಯಾರಿಸಲು 30 ಕೆ.ಜಿ. ಮೀನು, 10 ಕೆ.ಜಿ. ಸೆಗಣಿ, 30 ಲೀಟರ್ ಗೋ ಮೂತ್ರ, 5 ಕೆ.ಜಿ. ಪಪ್ಪಾಯಿ ಹಣ್ಣು, 5 ಕೆ.ಜಿ. ಬಾಳೆಹಣ್ಣು, 30 ಲೀಟರ್ ಮಜ್ಜಿಗೆ, 21 ಲೀಟರ್ ಕೇರೆನ್ ಹೆಲ್ತಿಕೊ ಉತ್ಪನ್ನ ಮತ್ತು 60 ಲೀಟರ್ ನೀರಿನೊಂದಿಗೆ ಮಿಶ್ರಣ ಮಾಡಿ ಒಂದು ಪ್ಲಾಸ್ಟಿಕ್ ಡ್ರಮ್‍ನಲ್ಲಿ ಹಾಕಿಡಬೇಕು. 90 ದಿನಗಳು ಕೊಳೆಯುವಂತೆ ಮಾಡಬೇಕು. ಆಗ ಅತ್ಯುತ್ತಮ ಗುಣಮಟ್ಟದ ಔಷಧ ಸಿದ್ಧವಾಗುತ್ತದೆ.ಒಟ್ಟು ₹25 ಸಾವಿರ ವೆಚ್ಚ ತಗಲುತ್ತದೆ.

ಮೂರು ಕಾಲು ಎಕರೆ ಜಮೀನಿನಲ್ಲಿ 1,100 ದಾಳಿಂಬೆ ಗಿಡಗಳನ್ನು ಬೆಳೆಸಿದ್ದಾರೆ. ‘ಒಂದು ಎಕರೆಗೆ 4 ಲೀಟರ್ ದ್ರಾವಣವನ್ನು ಡ್ರಿಪ್ ಮೂಲಕ ಕೊಡಬೇಕು. ಫಲ ಕೊಡುವವರೆಗೂ ಅದರ ಔಷಧೀಯ ಗುಣ ಬೆಳೆಯಲ್ಲಿ ಇರುತ್ತದೆ. ಭೂಮಿಗೆ ನೀಡಿದರೆ ಅದರ ಫಲವತ್ತತೆ ಹೆಚ್ಚಾಗುತ್ತದೆ’ ಎನ್ನುತ್ತಾರೆ ಜಿಲ್ಲಾ ಕೃಷಿ ವಿಸ್ತಾರಕ ಎಸ್.ಹನುಮಂತಪ್ಪ ಕೊಟ್ಟೂರು.

‘ರಸಾಯನಿಕ ಸಿಂಪಡಿಸಿದಾಗ ಆರು ಟನ್ ದಾಳಿಂಬೆ ಇಳುವರಿ ಬಂದಿತ್ತು. ಮೀನಿನ ಔಷಧ ಬಳಕೆಯಿಂದ 28 ಟನ್‌ ಇಳುವರಿ ಬಂದಿದೆ. ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹55 ಬೆಲೆ ಸಿಕ್ಕಿದೆ’ ಎಂದು ಸುರೇಶ್‌ ಖುಷಿಯಿಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT