ಸೋಮವಾರ, ಸೆಪ್ಟೆಂಬರ್ 23, 2019
24 °C

ಹಚ್ಚೊಳ್ಳಿ: ದಶಕ ಕಳೆದರೂ ನೆರೆ ಸಂತ್ರಸ್ತರಿಗೆ ಸೂರಿಲ್ಲ!

Published:
Updated:
Prajavani

ಸಿರುಗುಪ್ಪ : ತಾಲ್ಲೂಕಿನ ಗಡಿ ಭಾಗದ ಹಚ್ಚೊಳ್ಳಿ ಗ್ರಾಮವು 2009 ರಲ್ಲಿ ತುಂಗಭದ್ರಾ ನದಿಯ ನೆರೆ ಹಾವಳಿಗೆ ತುತ್ತಾಗಿ ದಶಕ ಕಳೆದರೂ, ಪುನರ್ವಸತಿ ಕೇಂದ್ರದಲ್ಲಿ ಮನೆಗಳು ಪೂರ್ಣಗೊಳ್ಳದೇ ಸಂತ್ರಸ್ತರಿಗೆ ಸೂರಿಲ್ಲದಂತಾಗಿದೆ.

ಪಂಚಾಯ್ತಿ ಕೇಂದ್ರವಾದ ಗ್ರಾಮದ ಹೊರವಲಯದ ನವಗ್ರಾಮದಲ್ಲಿ ಮನೆಗಳನ್ನು ನಿರ್ಮಿಸಲು ₹107.71 ಎಕರೆ ಜಮೀನನ್ನು ಸರ್ಕಾರ ಖರೀದಿಸಿ, 1,388 ನಿವೇಶನಗಳನ್ನು ಸಿದ್ಧಪಡಿಸಿತ್ತು. ಅಂದಿನ ಗಣಿ ಉದ್ಯಮಿ ಅನಿಲ್‌ ಲಾಡ್‌ ಅವರ ಆರ್ಥಿಕ ನೆರವಿನೊಂದಿಗೆ 1,200 ಮನೆಗಳನ್ನು ನಿರ್ಮಿಸುವ ಯೋಜನೆ ನನೆಗುದಿಗೆ ಬಿದ್ದಿದೆ.

ಕೆಲವು ಮನೆಗಳು ಪೂರ್ಣಗೊಂಡರೂ ಹಂಚಿಕೆಯಾಗದೇ ಪಾಳು ಬಿದ್ದಿವೆ. ಶಾಲೆ ಮತ್ತು ರಂಗಮಂದಿರ, ಸಮುದಾಯ ಭವನ ಮತ್ತು ಕುಡಿಯುವ ನೀರಿನ ಕೆರೆ ಕಾಮಗಾರಿ ಕಳಪೆಯಾಗಿ ಬಳಕೆಗೆ ಮುನ್ನವೇ ಶಿಥಿಲವಾಗಿವೆ. ಎಲ್ಲೆಡೆ ಬಳ್ಳಾರಿ ಜಾಲಿ ಬೆಳೆದಿದೆ.

ಮೊದಲ ಹಂತದಲ್ಲಿ 500 ಮನೆಗಳ ನಿರ್ಮಾಣ ಕಾರ್ಯ ಮುಗಿಯುವ ಹಂತದಲ್ಲಿದ್ದಾಗ ಲಾಡ್‌ ಅವರು ನಿರಾಸಕ್ತಿ ತೋರಿದ ಕಾರಣಕ್ಕೆ ಸರ್ಕಾರವೇ 2 ನೇ ಹಂತದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮನೆಗಳನ್ನು ನಿರ್ಮಿಸಲು ಮುಂದಾಗಿತ್ತು. ಮಂದಗತಿಯ ಕಾಮಗಾರಿಯಿಂದ ಮನೆಗಳು ನಿರ್ಮಾಣಗೊಳ್ಳಲಿಲ್ಲ. ಗ್ರಾಮ ಪಂಚಾಯ್ತಿ ವತಿಯಿಂದ ಗ್ರಾಮಕ್ಕೆ ಮೂಲಸೌಲಭ್ಯ ಒದಗಿಸಲು ಸರ್ಕಾರ ಅನುದಾನವನ್ನೂ ಬಿಡುಗಡೆ ಮಾಡಿತ್ತು. 

ಪ್ರವಾಹಕ್ಕೆ ಬಲಿಯಾದ ಗ್ರಾಮದ ನೂರಾರು ಮನೆಗಳ ಮಂದಿ ಬದುಕು ಕೊಚ್ಚಿಹೋದ ಸ್ಥಳದಲ್ಲೇ ಅರೆಬರೆ ಸೂರು ಕಟ್ಟಿಕೊಂಡು ಜೀವನ ದೂಡುತ್ತಿದ್ದಾರೆ. ವಿಪರ್ಯಾಸವೆಂದರೆ, ಕಂದಾಯ ಇಲಾಖೆ ಇಲ್ಲಿಯವರೆಗೆ ಫಲಾನುಭವಿಗಳನ್ನು ಆಯ್ಕೆ ಮಾಡಿ ಹಕ್ಕುಪತ್ರವನ್ನೇ ನೀಡಿಲ್ಲ.

Post Comments (+)