ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಡದಲ್ಲೇ ಅರಳಿ ಬಾಡುತ್ತಿದೆ ಮಲ್ಲಿಗೆ ಹೂ, ಮಲ್ಲಿಗೆ ಬೆಳೆಗಾರರಿಗೆ ದೊಡ್ಡ ಪೆಟ್ಟು

Last Updated 1 ಏಪ್ರಿಲ್ 2020, 14:19 IST
ಅಕ್ಷರ ಗಾತ್ರ

ಹೂವಿನಹಡಗಲಿ: ಕೊರೊನಾ ಸೋಂಕು ತಡೆಗಾಗಿ ಸರ್ಕಾರ ಲಾಕ್‌ಡೌನ್‌ ಘೋಷಿಸಿರುವ ಹಿನ್ನೆಲೆಯಲ್ಲಿ ಇಲ್ಲಿನ ಪಾರಂಪರಿಕ ಮಲ್ಲಿಗೆ ಕೃಷಿಗೆ ದೊಡ್ಡ ಪೆಟ್ಟು ಬಿದ್ದಿದೆ.

ತಾಲ್ಲೂಕಿನಲ್ಲಿ ಅಂದಾಜು 400 ಎಕರೆ ಪ್ರದೇಶದಲ್ಲಿ ಮಲ್ಲಿಗೆ ಬೆಳೆಯಲಾಗಿದೆ. ಇಲ್ಲಿನ ಮಲ್ಲಿಗೆ ಕೃಷಿ ಬಹುತೇಕ ಅಂತರ್ ಜಿಲ್ಲಾ ಮಾರುಕಟ್ಟೆಯನ್ನು ಅವಲಂಬಿಸಿದೆ. ಮಾರ್ಚ್‌ನಿಂದ ಸೆಪ್ಟೆಂಬರ್‌ವರೆಗೆ ಪ್ರತಿದಿನವೂ 10-15 ಕ್ವಿಂಟಲ್ ಮಲ್ಲಿಗೆ ಮೊಗ್ಗು ದಾವಣಗೆರೆ, ಶಿವಮೊಗ್ಗ, ಹಾವೇರಿ, ಗದಗ, ಹುಬ್ಬಳ್ಳಿಯ ಹೂ ಮಾರುಕಟ್ಟೆಗೆ ರವಾನೆಯಾಗುತ್ತದೆ.

ಮಾ. 24 ರಿಂದ ಲಾಕ್ ಡೌನ್ ಜಾರಿ ಆಗಿರುವುದರಿಂದ ವಾಹನಗಳ ಸಂಚಾರ, ಮಾರುಕಟ್ಟೆಗಳು ಸಂಪೂರ್ಣ ಬಂದ್ ಆಗಿವೆ. ಸಾಗಣೆಗೆ ನಿರ್ಬಂಧ ಇರುವುದರಿಂದ ರೈತರು ಮಲ್ಲಿಗೆ ಮೊಗ್ಗು ಬಿಡಿಸದೇ ಹಾಗೇ ಬಿಟ್ಟಿದ್ದಾರೆ. ಇದರಿಂದ ಹೂ ಗಿಡದಲ್ಲೇ ಅರಳಿ, ಬಾಡುತ್ತಿದೆ. ಕೋವಿಡ್ ಪಿಡುಗಿಗೆ ಮಲ್ಲಿಗೆ ಬೆಳೆಗಾರರು ನಲುಗಿದ್ದಾರೆ.

ಮಲ್ಲಿಗೆ ಕೃಷಿಯ ಮೇಲೆ ಬರೀ ಬೆಳೆಗಾರರಲ್ಲದೇ ನಾಲ್ಕು ವರ್ಗದ ಜನರು ಅವಲಂಬಿತರಾಗಿದ್ದಾರೆ. ಮೊಗ್ಗು ಕೀಳುವ ಕೂಲಿ ಕಾರ್ಮಿಕರು, ವ್ಯಾಪಾರಿಗಳು, ಹೂ ಕಟ್ಟುವವರು, ಗೂಡ್ಸ್ ವಾಹನ ಓಡಿಸುವವರ ಬದುಕಿಗೆ ಈ ಕೃಷಿ ಆಸರೆಯಾಗಿದೆ. ಕೊರೊನಾ ಭೀತಿಯಿಂದ ಮಾರುಕಟ್ಟೆ ಬಂದ್ ಆಗಿರುವುದರಿಂದ ರೈತರು, ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ.

ವಿಶೇಷ ಪರಿಮಳ ಸೂಸುವ ‘ಹಡಗಲಿ ಮಲ್ಲಿಗೆ’ ಭೌಗೋಳಿಕ ವೈಶಿಷ್ಟ್ಯತೆಯೊಂದಿಗೆ ರಾಷ್ಟ್ರೀಯ ಮಾನ್ಯತೆ ಪಡೆದಿದೆ. ಇತ್ತೀಚಿನ ವರ್ಷಗಳಲ್ಲಿ ಮಲ್ಲಿಗೆ ಬೆಳೆಗಾರರು ಒಂದಿಲ್ಲೊಂದು ಸಂಕಷ್ಟ ಎದುರಿಸುತ್ತಲ್ಲೇ ಬಂದಿದ್ದಾರೆ. ಹಿಂದಿನ ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಸ್ಥಿರ ಬೆಲೆ ದೊರೆಯದೇ ನಷ್ಟ ಅನುಭವಿಸಿದ್ದರು. ಈ ಬಾರಿ ಮಲ್ಲಿಗೆ ಋತು ಆರಂಭದಲ್ಲೇ ಪ್ರತಿ ಕೆ.ಜಿಗೆ 300 ರಿಂದ 400 ರೂವರೆಗೆ ಬೆಲೆ ಸಿಕ್ಕಿದ್ದರಿಂದ ರೈತರ ಮೊಗದಲ್ಲಿ ಸಂತಸ ಮೂಡಿತ್ತು. ಆದರೆ, ಕೊರೊನಾ ಮಹಾಮಾರಿ ಮಲ್ಲಿಗೆ ಬೆಳೆಗಾರರ ಕನಸನ್ನು ನುಚ್ಚುನೂರು ಮಾಡಿದೆ.

‘ಪ್ರತಿವರ್ಷ ಈ ದಿನಗಳಲ್ಲಿ ತಾಲ್ಲೂಕಿನ ಮಲ್ಲಿಗೆ ಬೆಳೆಗಾರರಿಗೆ ವಾರಕ್ಕೆ 5 ರಿಂದ 10 ಲಕ್ಷ ರೂ. ಬಡವಾಡೆ ಆಗುತ್ತಿತ್ತು. ಲಾಕ್ ಡೌನ್ ನಿಂದಾಗಿ ಹೊಲದಲ್ಲಿ ಫಸಲು ಬಿಟ್ಟಿದ್ದರೂ ಅದನ್ನು ಬಿಡಿಸಿ ಮಾರುಕಟ್ಟೆಗೆ ಕಳಿಸಲು ಸಾಧ್ಯವಾಗುತ್ತಿಲ್ಲ’ ಎಂದು ಮಲ್ಲಿಗೆ ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.

***
ನಾನಾ ಸಮಸ್ಯೆಗಳ ನಡುವೆ ರೈತರು ಪಾರಂಪರಿಕ ಮಲ್ಲಿಗೆ ಕೃಷಿ ಉಳಿಸಿಕೊಂಡು ಬಂದಿದ್ದಾರೆ. ಲಾಕ್ ಡೌನ್ ನಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು, ಸರ್ಕಾರ ಪರಿಹಾರ ನೀಡಬೇಕು.

- ಹನಕನಹಳ್ಳಿ ಹಾಲೇಶ, ಅಧ್ಯಕ್ಷ, ಮಲ್ಲಿಗೆ ಬೆಳೆಗಾರರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT