ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇವಿನ ಬೇಡಿಕೆಗೆ ತಕ್ಷಣ ಸ್ಪಂದಿಸಿ

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ. ವೆಂಕೋಬಪ್ಪ ಸೂಚನೆ
Last Updated 17 ಜೂನ್ 2019, 13:11 IST
ಅಕ್ಷರ ಗಾತ್ರ

ಹೊಸಪೇಟೆ: ’ತಾಲ್ಲೂಕಿನಲ್ಲಿ ಇದುವರೆಗೆ ಸಮರ್ಪಕವಾಗಿ ಮಳೆಯಾಗಿಲ್ಲ. ಈಗಲೂ ಅನೇಕ ಗ್ರಾಮಗಳಲ್ಲಿ ಮೇವಿಗೆ ಸಮಸ್ಯೆ ಇದೆ. ಎಲ್ಲೇ ಬೇಡಿಕೆ ಎದುರಾದರೂ ತಕ್ಷಣವೇ ಪೂರೈಸಬೇಕು‘ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ. ವೆಂಕೋಬಪ್ಪ ಸೂಚಿಸಿದರು.

ಸೋಮವಾರ ನಗರದಲ್ಲಿ ವಿವಿಧ ಇಲಾಖೆಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ’ಕೆಲವೆಡೆ ಮೇವಿಗೆ ಬೇಡಿಕೆ ಇದ್ದರೂ ಪೂರೈಕೆಯಾಗಿಲ್ಲ ಎಂಬ ದೂರುಗಳು ಬಂದಿವೆ. ಅದಕ್ಕೆ ಕೂಡಲೇ ಸ್ಪಂದಿಸಿ ಮೇವಿನ ಕೊರತೆ ನೀಗಿಸಬೇಕು. ಯಾವ ಗ್ರಾಮದಿಂದಲೂ ದೂರು ಬರದಂತೆ ನೋಡಿಕೊಳ್ಳಬೇಕು‘ ಎಂದು ತಾಕೀತು ಮಾಡಿದರು.

ಪಶು ವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಬೆಣ್ಣಿ ಬಸವರಾಜ ಪ್ರತಿಕ್ರಿಯಿಸಿ, ’ಯಾರೇ ಬೇಡಿಕೆ ಸಲ್ಲಿಸಿದರೂ ತಕ್ಷಣವೇ ನಮ್ಮ ಸಿಬ್ಬಂದಿ ಹೋಗಿ ಮೇವು ಪೂರೈಸುತ್ತಿದ್ದಾರೆ. ಇದುವರೆಗೆ ಎಲ್ಲಿಯೂ ಮೇವಿಗೆ ಸಂಬಂಧಿಸಿದಂತೆ ದೂರುಗಳು ಬಂದಿಲ್ಲ. ಯಾರಾದರೂ ನಿಮಗೆ ಕರೆ ಮಾಡಿದರೆ ನನ್ನ ಮೊಬೈಲ್‌ ಸಂಖ್ಯೆ ಕೊಡಿ. ತಕ್ಷಣವೇ ವ್ಯವಸ್ಥೆ ಮಾಡುವೆ‘ ಎಂದರು.

ಮಧ್ಯ ಪ್ರವೇಶಿಸಿ ಮಾತನಾಡಿದ ಅಧ್ಯಕ್ಷೆ ಜೋಗದ ನೀಲಮ್ಮ, ’ತಾಲ್ಲೂಕಿನ ಕಾಕುಬಾಳು, ಬೈಲುವದ್ದಿಗೇರಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಈಗಲೂ ಮೇವಿಗೆ ಸಮಸ್ಯೆ ಇದೆ. ಅನೇಕ ಜನ ಕರೆ ಮಾಡಿ ಗೋಳು ತೋಡಿಕೊಂಡಿದ್ದಾರೆ. ಅಲ್ಲಿಗೆ ಭೇಟಿ ನೀಡಿ ಖುದ್ದಾಗಿ ಸಮಸ್ಯೆ ತಿಳಿದುಕೊಳ್ಳಬೇಕು‘ ಎಂದು ಸೂಚಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಷಣ್ಮುಖಪ್ಪ, ’ಸರ್ಕಾರದ ಯಾವ ಯೋಜನೆಗಳ ಬಗ್ಗೆಯೂ ಪಶು ಇಲಾಖೆಯವರು ಸರಿಯಾದ ಮಾಹಿತಿ ಕೊಡುವುದಿಲ್ಲ. ಯೋಜನೆ ಅನುಷ್ಠಾನಗೊಳಿಸುವ ಹಂತದಲ್ಲಿ ಸಭೆಯ ಗಮನಕ್ಕೆ ತರುತ್ತೀರಿ. ಇದು ಸರಿಯಾದುದಲ್ಲ‘ ಎಂದು ಆಕ್ಷೇಪ ಎತ್ತಿದರು.

ಅದಕ್ಕೆ ಬಸವರಾಜ ಬೆಣ್ಣಿ, ’ಸಂಚಾರಿ, ಅರೆಸಂಚಾರಿ ಕುರಿಗಾಹಿಗಳಿಗೆ ಟೆಂಟ್‌, ರಬ್ಬರ್‌ ಮ್ಯಾಟ್‌, ಸೋಲಾರ್‌ ಟಾರ್ಚ್‌ ಹಂಚಿಕೆ ಮಾಡುವ ವಿಷಯವನ್ನು ಎಲ್ಲ ಕುರಿಗಾಹಿ ಸಂಘಕ್ಕೆ ಪತ್ರ ಬರೆದು ತಿಳಿಸಲಾಗಿದೆ. ಯಾವುದೂ ಸಹ ಮುಚ್ಚಿ ಮಾಡುತ್ತಿಲ್ಲ. ಜಿಲ್ಲೆಯಲ್ಲಿ ಒಟ್ಟು 250 ಫಲಾನುಭವಿಗಳ ಆಯ್ಕೆ ಮಾಡಬೇಕಿದೆ. ಅದರಲ್ಲಿ ಹೊಸಪೇಟೆ ತಾಲ್ಲೂಕಿನಲ್ಲಿ 24 ಜನರನ್ನು ಆಯ್ಕೆ ಮಾಡಲಾಗುತ್ತದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೇತೃತ್ವದ ಸಮಿತಿ ಫಲಾನುಭವಿಗಳ ಆಯ್ಕೆ ಮಾಡಲಿದೆ‘ ಎಂದು ಮಾಹಿತಿ ನೀಡಿದರು.

ಮರಿಯಮ್ಮನಹಳ್ಳಿಯಲ್ಲಿ ಆರೋಗ್ಯ ಉಪಕೇಂದ್ರ:

’ತಾಲ್ಲೂಕಿನ ಮರಿಯಮ್ಮನಹಳ್ಳಿಯಲ್ಲಿ ಆರೋಗ್ಯ ಉಪಕೇಂದ್ರ ಸ್ಥಾಪನೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ‘ ಎಂದು ತಾಲ್ಲೂಕು ವೈದ್ಯಾಧಿಕಾರಿ ಭಾಸ್ಕರ್‌ ತಿಳಿಸಿದರು.

’ಮರಿಯಮ್ಮನಹಳ್ಳಿ ಜನಸಂಖ್ಯೆ ಹೆಚ್ಚಾಗಿದೆ. ಉಪಕೇಂದ್ರ ಸ್ಥಾಪಿಸುವುದು ಅತ್ಯಗತ್ಯ. ಅದಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಕೊಡಲಾಗಿದೆ. ಅದೇ ರೀತಿ ತಾಲ್ಲೂಕಿನ ಕಲ್ಲಹಳ್ಳಿ ಆರೋಗ್ಯ ಕೇಂದ್ರ ನವೀಕರಣ ಮಾಡಲಾಗುವುದು. ಸಂಚಾರಿ ವಾಹನದ ಮೂಲಕ ಗ್ರಾಮಗಳಲ್ಲಿ ಜನರಿಗೆ ಚಿಕಿತ್ಸೆ ಕೊಡಲಾಗುತ್ತಿದೆ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT