ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿಯಲ್ಲಿ ಊಟ ಬಲು ದುಬಾರಿ!

Last Updated 24 ಜುಲೈ 2019, 19:45 IST
ಅಕ್ಷರ ಗಾತ್ರ

ಹೊಸಪೇಟೆ: ತಾಲ್ಲೂಕಿನ ಹಂಪಿ ಪರಿಸರದಲ್ಲಿನ ಹೋಟೆಲ್‌ಗಳು ಊಟಕ್ಕೆ ದುಬಾರಿ ಬೆಲೆ ನಿಗದಿಪಡಿಸಿರುವ ಕಾರಣ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಲಿಂಗಾಯತ ಖಾನಾವಳಿಗಳಲ್ಲಿ ಒಂದು ಊಟಕ್ಕೆ ₹60ರಿಂದ ₹70 ಬೆಲೆ ನಿಗದಿಪಡಿಸಲಾಗಿದೆ. ಹೋಟೆಲ್‌ಗಳಲ್ಲಿ ದಕ್ಷಿಣದ ಒಂದು ಊಟಕ್ಕೆ ₹120ರಿಂದ ₹140ರ ವರೆಗೆ ಇದೆ. ಹವಾನಿಯಂತ್ರಿತ ಹೋಟೆಲ್‌ಗಳಿದ್ದರೆ ಒಂದು ಊಟಕ್ಕೆ ₹20 ಹೆಚ್ಚುವರಿಯಾಗಿ ಪಡೆದುಕೊಳ್ಳುತ್ತಾರೆ. ಆದರೆ, ಹಂಪಿ ಪರಿಸರದಲ್ಲಿರುವ ಬಹುತೇಕ ಹೋಟೆಲ್‌ಗಳು ಇದಕ್ಕಿಂತ ಹೆಚ್ಚಿನ ಹಣ ಗ್ರಾಹಕರಿಂದ ಪಡೆದುಕೊಳ್ಳುತ್ತಿವೆ.

ಹಂಪಿಗೆ ನಿತ್ಯ ದೇಶ–ವಿದೇಶಗಳಿಂದ ನೂರಾರು ಜನ ಬಂದು ಹೋಗುತ್ತಾರೆ. ಇದನ್ನೇ ಕೆಲವು ಹೋಟೆಲ್‌ಗಳವರು ಬಂಡವಾಳ ಮಾಡಿಕೊಂಡು ಹೆಚ್ಚಿನ ಹಣ ಪಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪವಿದೆ. ದಿನವಿಡೀ ಸುತ್ತಾಡಿದರೂ ಹಂಪಿ ನೋಡಲು ಆಗುವುದಿಲ್ಲ. ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಹಂಪಿ ನೋಡಿದವರು ಮಧ್ಯಾಹ್ನ ಊಟಕ್ಕೆ ಹೋಗುತ್ತಾರೆ. ಹಂಪಿಯಿಂದ ಹೊಸಪೇಟೆ ನಗರ 17 ಕಿ.ಮೀ ದೂರದಲ್ಲಿರುವ ಕಾರಣ ಯಾರೊಬ್ಬರೂ ಊಟಕ್ಕಾಗಿ ಪುನಃ ನಗರಕ್ಕೆ ಬಂದು ಹೋಗುವುದಿಲ್ಲ. ಈ ವಿಚಾರವನ್ನು ಚೆನ್ನಾಗಿಯೇ ಅರಿತಿರುವ ಹೋಟೆಲ್‌ನವರು ಪ್ರವಾಸಿಗರಿಂದ ಹೆಚ್ಚಿನ ಹಣ ಪಡೆದುಕೊಳ್ಳುತ್ತಿದ್ದಾರೆ.

ಪ್ರವಾಸಿ ಮಾರ್ಗದರ್ಶಿಗಳು, ಕ್ಯಾಬ್‌ ಮತ್ತು ಆಟೊ ಚಾಲಕರಿಗೆ ಈ ಹೋಟೆಲ್‌ಗಳವರು ಕಮಿಷನ್‌ ನಿಗದಿಪಡಿಸಿದ್ದಾರೆ. ಒಬ್ಬ ಗ್ರಾಹಕನನ್ನು ಕರೆದುಕೊಂಡು ಬಂದರೆ ₹20ರಿಂದ ₹25 ಕೊಡುತ್ತಾರೆ. ಇದರಿಂದಾಗಿ ಗೈಡ್‌ಗಳು, ಚಾಲಕರು ಕಡಿಮೆ ದರದಲ್ಲಿ ಊಟ ಸಿಗುವ ಹೋಟೆಲ್‌ಗಳಿಗೆ ಕೊಂಡೊಯ್ಯುವುದರ ಬದಲಾಗಿ ದುಬಾರಿ ಬೆಲೆ ನಿಗದಿಪಡಿಸಿರುವ ಹೋಟೆಲ್‌ಗಳಿಗೆ ಕೊಂಡೊಯ್ದು ಗ್ರಾಹಕರಿಗೆ ವಂಚಿಸುತ್ತಿದ್ದಾರೆ ಎಂದು ಪ್ರವಾಸಿಗರೊಬ್ಬರು ಆರೋಪಿಸಿದರು.

‘ನಾನು ಕುಟುಂಬ ಸಮೇತ ಮೂರು ದಿನಗಳ ಹಿಂದೆ ನಗರಕ್ಕೆ ಬಂದಿದ್ದು, ಇಲ್ಲಿನ ಹವಾನಿಯಂತ್ರಿತ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದೇನೆ. ಬೆಳಿಗ್ಗೆ ಉಪಾಹಾರ ಮುಗಿಸಿಕೊಂಡು ಹಂಪಿ ನೋಡಲು ಹೋಗಿದ್ದೆವು. ಮಧ್ಯಾಹ್ನ ವಿಜಯ ವಿಠಲ ದೇವಸ್ಥಾನದ ರಸ್ತೆಯಲ್ಲಿರುವ ಹೋಟೆಲ್‌ಗೆ ಊಟಕ್ಕೆ ಹೋದರೆ ಒಂದು ದಕ್ಷಿಣದ ಊಟಕ್ಕೆ ₹250 ಎಂದು ತಿಳಿಸಿದರು. ಸಾಧಾರಣ ಊಟಕ್ಕೆ ಇಷ್ಟೊಂದು ದರವೇ ಎಂದು ಕೇಳಿದರೆ ಏನೇನೊ ಹೇಳಿದರು. ನಗರಕ್ಕೆ ಹೋದರೆ ವಿಳಂಬವಾಗುತ್ತದೆ ಎಂದು ಅನಿವಾರ್ಯವಾಗಿ ಅಲ್ಲಿಯೇ ಊಟ ಮಾಡಿದೆವು’ ಎಂದು ಬೆಂಗಳೂರಿನ ಪ್ರವಾಸಿ ರಮೇಶ ತಿಳಿಸಿದರು.

‘ಸಂಜೆ ನಗರಕ್ಕೆ ಬಂದು ರಾತ್ರಿ ಅದೇ ದಕ್ಷಿಣದ ಊಟ ಮಾಡಿದೆವು. ಒಂದು ಊಟಕ್ಕೆ ₹140 ತೆಗೆದುಕೊಂಡರು. ಹಂಪಿಯಲ್ಲಿನ ಹೋಟೆಲ್‌ಗಿಂತ ಊಟ ಚೆನ್ನಾಗಿತ್ತು. ಈ ಕುರಿತು ಹೋಟೆಲ್‌ನವರನ್ನು ಕೇಳಿದರೆ, ಹೊರಗಿನಿಂದ ಪ್ರವಾಸಿಗರು ಬರುತ್ತಾರೆ ಎನ್ನುವ ಕಾರಣಕ್ಕಾಗಿ ಹಂಪಿಯಲ್ಲಿರುವ ಬಹುತೇಕ ಹೋಟೆಲ್‌ನವರು ಈ ರೀತಿ ಮಾಡಿ, ಗ್ರಾಹಕರಿಗೆ ಮೋಸ ಮಾಡುತ್ತಿದ್ದಾರೆ ಎಂದು ಹೇಳಿದರು. ಒಂದು ಊಟಕ್ಕೆ ₹15ರಿಂದ ₹20 ಹೆಚ್ಚುವರಿಯಾಗಿ ತೆಗೆದುಕೊಂಡರೆ ಪರವಾಗಿಲ್ಲ. ಆದರೆ, ₹100ಗಿಂತ ಹೆಚ್ಚು ಪಡೆಯುತ್ತಿರುವುದು ಎಷ್ಟು ಸರಿ. ಇದಕ್ಕೆ ಹಗಲು ದರೋಡೆ ಅನ್ನಬಹುದೇನೋ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಈ ಕಡೆ ಗಮನಹರಿಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಇಡೀ ಹಂಪಿಗೆ ಕೆಟ್ಟ ಹೆಸರು ಬರುತ್ತದೆ’ ಎಂದರು.

ಈ ಕುರಿತು ಹಂಪಿಯ ಹೆಸರಾಂತ ಹೋಟೆಲ್‌ ’ಮ್ಯಾಂಗೋ ಟ್ರೀ‘ ಮಾಲೀಕ ನಾಗರಾಜ ಅವರನ್ನು ಪ್ರಶ್ನಿಸಿದಾಗ, ‘ಸುಮಾರು ವರ್ಷಗಳಿಂದ ನಾವು ಹೋಟೆಲ್‌ ನಡೆಸುತ್ತಿದ್ದೇವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಹೋಟೆಲ್‌ಗೆ ಒಳ್ಳೆಯ ಹೆಸರಿದೆ. ಸ್ಥಳೀಯರಿಗಿಂತ ವಿದೇಶಿಯರೇ ಹೆಚ್ಚಾಗಿ ಬರುತ್ತಾರೆ. ನಮ್ಮ ಹೋಟೆಲ್‌ನಲ್ಲಿ ದಕ್ಷಿಣದ ಒಂದು ಊಟಕ್ಕೆ ₹160 ಇದೆ. ತೆರಿಗೆ ಎಲ್ಲ ಸೇರಿ ಅಷ್ಟು ಪಡೆಯುತ್ತೇವೆ. ಅದಕ್ಕಿಂತ ಹೆಚ್ಚು ಪಡೆದುಕೊಂಡರೆ ವಂಚನೆಯಾಗುತ್ತದೆ. ಕೆಲವು ಹೋಟೆಲ್‌ನವರು ದುರಾಸೆಯಿಂದ ಈ ರೀತಿ ಮಾಡುತ್ತಿರುವುದು ನಿಜ. ಇದರಿಂದ ಎಲ್ಲರಿಗೂ ಕೆಟ್ಟ ಹೆಸರು ಬರುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT