ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿಗೆ ಮೆರುಗು ತಂದ 4 ಗಂಟೆ ಉತ್ಸವ

ಬಣ್ಣದ ಬೆಳಕಿನಲ್ಲಿ ಮಿಂದೆದ್ದ ಸ್ಮಾರಕಗಳು; ಶೋಭಾಯಾತ್ರೆ, ಆರತಿಗೆ ಸೀಮಿತ
Last Updated 12 ನವೆಂಬರ್ 2020, 19:26 IST
ಅಕ್ಷರ ಗಾತ್ರ

ಹಂಪಿ (ಹೊಸಪೇಟೆ ತಾಲ್ಲೂಕು): ಈ ಸಲದ ‘ಹಂಪಿ ಉತ್ಸವ’ ನಾಲ್ಕು ಗಂಟೆಗಳಿಗೆ ಸೀಮಿತವಾದರೂ ವಿಶ್ವ ಪ್ರಸಿದ್ಧ ಹಂಪಿಗೆ ವಿಶೇಷ ಮೆರುಗು ತಂದುಕೊಟ್ಟಿದೆ.

ಹಂಪಿಯ ಇಡೀ ಪರಿಸರ ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿದೆ. ಮದುವೆ ಮನೆಯಂತೆ ವಿಶೇಷ ರೀತಿಯಲ್ಲಿ ಅಲಂಕರಿಸಲಾಗಿದೆ. ನಗರದಿಂದ ಹಂಪಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬಿದ್ದಿದ್ದ ತಗ್ಗು, ಗುಂಡಿಗಳನ್ನು ಮುಚ್ಚಲಾಗಿದೆ. ರಸ್ತೆಯ ಎರಡೂ ಬದಿಯಲ್ಲಿ ಬೆಳೆದು ನಿಂತಿದ್ದ ಪೊದೆ, ಮುಳ್ಳು ಕಂಟಿ ತೆರವುಗೊಳಿಸಲಾಗಿದೆ. ಬೀದಿ ದೀಪಗಳನ್ನು ದುರಸ್ತಿಗೊಳಿಸಲಾಗಿದೆ.

ಹಂಪಿ ಪ್ರವೇಶಿಸುತ್ತಿದ್ದಂತೆ ಎದುರಾಗುವ ಸಾಸಿವೆಕಾಳು ಗಣಪ ಸ್ಮಾರಕಕ್ಕೆ ಬಣ್ಣಬಣ್ಣದ ದೀಪಗಳಿಂದ ಅಲಂಕರಿಸಲಾಗಿದೆ. ಅಲ್ಲಿಂದ ಸ್ವಲ್ಪವೇ ದೂರದಲ್ಲಿ, ಎತ್ತರದ ಪ್ರದೇಶದಲ್ಲಿರುವ ಕಡಲೆಕಾಳು ಗಣೇಶ ಸ್ಮಾರಕ ಎದುರಿನ ಮಂಟಪವೂ ಝಗಮಗಿಸುತ್ತಿದೆ. ಇನ್ನು, ರಥಬೀದಿಯಲ್ಲಿನ ಮರಗಳಿಗೆ ವಿಶೇಷ ದೀಪಾಲಂಕಾರ ಮಾಡಿದ್ದು, ಇಡೀ ಪರಿಸರಕ್ಕೆ ವಿಶೇಷ ಮೆರಗು ಬಂದಿದೆ.

ಈ ಸಲ ವಿರೂಪಾಕ್ಷೇಶ್ವರ ದೇವಸ್ಥಾನದ ಬಿಷ್ಟಪ್ಪಯ್ಯ ಗೋಪುರಕ್ಕೆ ವಿದ್ಯುದ್ದೀಪಗಳಿಂದ ಅಲಂಕರಿಸದೇ ಇರುವುದು ಭಕ್ತರಿಗೆ ಬೇಸರ ತರಿಸಿದೆ. ಅದರ ಮಗ್ಗುಲಲ್ಲಿರುವ ಮಂಟಪ ಕಂಗೊಳಿಸುತ್ತಿದೆ. ಆದರೆ, ರಥಬೀದಿಯ ಎರಡೂ ಬದಿಯಲ್ಲಿರುವ ಮಂಟಪಗಳಲ್ಲಿ ಕತ್ತಲು ಆವರಿಸಿಕೊಂಡಿದೆ. ಎದುರು ಬಸವಣ್ಣ ಮಂಟಪ ಸ್ಮಾರಕದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ.

ಇನ್ನು, ಉದ್ಘಾಟನಾ ಸಮಾರಂಭ ನಡೆಯಲಿರುವ ಉದ್ಧಾನ ವೀರಭದ್ರೇಶ್ವರ ದೇವಸ್ಥಾನದ ಬಳಿ ಕಿರಿದಾದ ವೇದಿಕೆ ನಿರ್ಮಿಸಲಾಗಿದೆ. ತುಂಗಾ ಆರತಿ ನಡೆಯಲಿರುವ ಹಂಪಿ ತುಂಗಭದ್ರಾ ನದಿ ತಟವನ್ನು ಸ್ವಚ್ಛಗೊಳಿಸಲಾಗಿದೆ. ಅಲ್ಲಿರುವ ಬಂಡೆಗಲ್ಲು, ಮೆಟ್ಟಿಲುಗಳಿಗೆ ಸುಣ್ಣ, ಬಳಿದು ಹೊಸ ರೂಪ ಕೊಡಲಾಗಿದೆ. ಕಳೆ ತೆಗೆದು ಹಾಕಲಾಗಿದ್ದು, ಇಡೀ ಪರಿಸರ ಸ್ವಚ್ಛಗೊಂಡಿದೆ.

ಬೆರಗಾದ ಪ್ರವಾಸಿಗರು:

ಹಂಪಿಯ ಪ್ರಮುಖ ಸ್ಮಾರಕಗಳು ವಿದ್ಯುತ್‌ ದೀಪಗಳಿಂದ ಅಲಂಕಾರಗೊಂಡು ಗಮನ ಸೆಳೆಯುತ್ತಿವೆ. ಆದರೆ, ಕೋವಿಡ್‌ ಕಾರಣಕ್ಕಾಗಿ ಸಾಂಕೇತಿಕವಾಗಿ ಉತ್ಸವ ಆಚರಿಸುತ್ತಿರುವುದರಿಂದ ಉತ್ಸವದ ಹಿಂದಿನ ದಿನವೂ ಸ್ಥಳೀಯರು ಹಂಪಿಯತ್ತ ಸುಳಿದಿಲ್ಲ. ಆದರೆ, ಪ್ರವಾಸೋದ್ಯಮ ಚೇತರಿಕೆ ಕಂಡಿದೆ. ನಿತ್ಯವೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹಂಪಿಗೆ ಬಂದು ಹೋಗುತ್ತಿದ್ದಾರೆ.

ಸಂಜೆ ವೇಳೆ ಬಣ್ಣದ ಬೆಳಕಿನಲ್ಲಿ ಮಿಂದೆದ್ದಿರುವ ಸ್ಮಾರಕಗಳನ್ನು ನೋಡಿ ಪ್ರವಾಸಿಗರು ಬೆರಗಾಗುತ್ತಿದ್ದಾರೆ. ಸುಂದರ ಚಿತ್ರಗಳನ್ನು ಸೆರೆಹಿಡಿಯಲು, ಕಣ್ತುಂಬಿಕೊಳ್ಳಲು ರಾತ್ರಿ ತನಕ ಸಮಯ ಕಳೆಯುತ್ತಿದ್ದಾರೆ.

ವ್ಯಾಪಾರಿಗಳಿಗೆ ನಿರಾಸೆ:

‘ಹಂಪಿ ಉತ್ಸವ’ ಇದೆ ಎಂದರೆ ಸ್ಥಳೀಯ ವ್ಯಾಪಾರಿಗಳು ಸಂಭ್ರಮ ಪಡುತ್ತಾರೆ. ಲಕ್ಷಾಂತರ ಜನ ಸೇರುವುದರಿಂದ ವಾರದಲ್ಲಿ ಸಾವಿರಾರು ರೂಪಾಯಿ ವ್ಯಾಪಾರ ಮಾಡುತ್ತಾರೆ. ಆದರೆ, ಸಾಂಕೇತಿಕ ಉತ್ಸವ ಅವರಿಗೆ ನಿರಾಸೆ ಮೂಡಿಸಿದೆ.

ಕೋವಿಡ್‌ನಿಂದ ಐದಾರೂ ತಿಂಗಳು ವ್ಯಾಪಾರವಿಲ್ಲದೆ ವ್ಯಾಪಾರಿಗಳು ನಷ್ಟ ಅನುಭವಿಸಿದ್ದಾರೆ. ಈಗಷ್ಟೇ ಪ್ರವಾಸಿಗರು ಬರುವುದು ಆರಂಭಿಸಿದ್ದಾರೆ. ವರ್ಷಕ್ಕೊಮ್ಮೆ ನಡೆಯುವ ಉತ್ಸವವೂ ಹೆಸರಿಗಷ್ಟೇ ಮಾಡುತ್ತಿರುವುದರಿಂದ ಅವರಲ್ಲಿ ಸಹಜವಾಗಿಯೇ ಸಂಭ್ರಮ ಮರೆಯಾಗಿದೆ.

ಉತ್ಸವದಲ್ಲಿ ಏನಿದೆ?

ಶುಕ್ರವಾರ (ನ.13) ಸಂಜೆ 4ಕ್ಕೆ ಹಂಪಿ ಉದ್ಧಾನ ವೀರಭದ್ರೇಶ್ವರ ದೇವಸ್ಥಾನದ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಉತ್ಸವ ಉದ್ಘಾಟಿಸುವರು. ಹಂಪಿ ವಿದ್ಯಾರಣ್ಯ ಭಾರತಿ ಸ್ವಾಮೀಜಿ, ಹಂಪಿ ಹೇಮಕೂಟದ ಸಂಗನಬಸವ ಸ್ವಾಮೀಜಿ, ಗಾಯತ್ರಿ ಪೀಠದ ದಯಾನಂದಪುರಿ ಸ್ವಾಮೀಜಿ, ವಿಜಯನಗರ ಸಾಮ್ರಾಜ್ಯದ ರಾಜವಂಶಸ್ಥ ಆನೆಗೊಂದಿಯ ಕೃಷ್ಣದೇವರಾಯ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಳ್ಳುವರು.

ಸಂಜೆ 4.30ಕ್ಕೆ ವಿವಿಧ ಜಾನಪದ ಕಲಾ ತಂಡಗಳಿಂದ ಶೋಭಾಯಾತ್ರೆ ನಡೆಯಲಿದೆ. ಸಂಜೆ 6ಕ್ಕೆ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಲಿದೆ. 7ಕ್ಕೆ ತುಂಗಾ ಆರತಿ ಜರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT