ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಾಂಧಿ, ಅಂಬೇಡ್ಕರ್‌ ಚಿಂತನೆ ಭಿನ್ನ’

Last Updated 16 ಅಕ್ಟೋಬರ್ 2019, 18:45 IST
ಅಕ್ಷರ ಗಾತ್ರ

ಹೊಸಪೇಟೆ: ‘ಮಹಾತ್ಮ ಗಾಂಧೀಜಿ ಹಾಗೂ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಚಿಂತನೆಗಳಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಗಾಂಧೀಜಿ ಅವರ ಚಿಂತನೆಗಳಲ್ಲಿ ರಾಜಕೀಯ ಮತ್ತು ಧಾರ್ಮಿಕ ಪ್ರಜ್ಞೆ ಇದ್ದರೆ, ಅಂಬೇಡ್ಕರ್‌ ಅವರದು ಸಾಮಾಜಿಕ ಚಿಂತನೆಗಳನ್ನು ಒಳಗೊಂಡಿವೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಮುಖ್ಯಸ್ಥ ಎನ್‌. ಚಿನ್ನಸ್ವಾಮಿ ಸೋಸಲೆ ಹೇಳಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬುಧವಾರ ಗಾಂಧಿ ಹಮ್ಮಿಕೊಂಡಿದ್ದ ‘ಗಾಂಧಿ ಮತ್ತು ಅಂಬೇಡ್ಕರ್‌ ಚಿಂತನೆಗಳ ತಾತ್ವಿಕತೆ’ ಕುರಿತು ಉಪನ್ಯಾಸ ನೀಡಿದರು.

‘ಗಾಂಧೀಜಿಯವರು ಭಾತೃತ್ವದ ಆಧಾರದ ಮೇಲೆ ರಾಷ್ಟ್ರ ನಿರ್ಮಾಣದ ಕನಸು ಕಂಡರೆ, ಅಂಬೇಡ್ಕರ್‌ ಅವರು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ತತ್ವದ ಆಧಾರದ ಮೇಲೆ ದೇಶದ ಅಭಿವೃದ್ಧಿಯ ಕನಸು ಕಂಡಿದ್ದರು’ ಎಂದರು.

ಕುಲಪತಿ ಪ್ರೊ. ಸ.ಚಿ. ರಮೇಶ ಮಾತನಾಡಿ, ‘ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ ಇಬ್ಬರೂ ವಿಶ್ವ ಕಂಡ ಮಹಾನ್ ಚೇತನಗಳು. ಅವರಿಬ್ಬರ ಚಿಂತನೆಗಳು ಮಾನವ ಕಲ್ಯಾಣಕ್ಕೆ ಸಂಬಂಧಿಸಿವೆ. ಭಾರತದಲ್ಲಿ ಸಮಸಮಾಜ ನಿರ್ಮಾಣ ಮಾಡುವುದು ಅವರ ಗುರಿಯಾಗಿತ್ತು’ ಎಂದು ಹೇಳಿದರು.

‘ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿಯವರು ಅವರ ನಡುವೆ ಚಿಂತನೆ, ವಿಚಾರಗಳಲ್ಲಿ ಭಿನ್ನತೆ ಮತ್ತು ವೈರುಧ್ಯತೆಗಳು ಇದ್ದವೇ ಹೊರತು ಯಾವತ್ತು ವೈಯಕ್ತಿಕ ದ್ವೇಷ ಇರಲಿಲ್ಲ. ದೇಶದಲ್ಲಿ ಜಾತಿ ನಿರ್ಮೂಲನೆ ಮಾಡದೇ ಸಮಸಮಾಜ ನಿರ್ಮಾಣ ಅಸಾಧ್ಯ ಎಂದು ತಿಳಿದಿದ್ದ ಇಬ್ಬರು, ಅಸಮಾನತೆ, ಶೋಷಣೆ, ಅಸ್ಪೃಶ್ಯತೆ ನಿರ್ಮೂಲನೆಗೆ ಶ್ರಮಿಸಿದ್ದರು’ ಎಂದರು.

ಅಭಿವೃದ್ಧಿ ಅಧ್ಯಯನ ವಿಭಾಗದ ಮುಖ್ಯಸ್ಥ ಜನಾರ್ದನ ಮಾತನಾಡಿ, ‘ಅಂಬೇಡ್ಕರ್ ಅವರು ಭೂಮಿಯ ಸಮಾನ ಹಂಚಿಕೆ, ಬೃಹತ್ ಕೈಗಾರಿಕೆಗಳ ಸ್ಥಾಪನೆ, ಕಾರ್ಮಿಕರಿಗೆ ಸರ್ಕಾರವೇ ವಿಮೆ ಮಾಡಿಸುವ ಕುರಿತು, ಕಾಗದದ ಕರೆನ್ಸಿ ಜಾರಿಗೆ ಕುರಿತು ತಮ್ಮ ವಿಚಾರಗಳನ್ನು ಮಂಡಿಸಿದ್ದರು. ಮಹಿಳೆಯರಿಗೆ ಪುರುಷರಷ್ಟೇ ಸಮಾನ ಅವಕಾಶಗಳನ್ನು ಪ್ರಥಮ ಭಾರಿಗೆ ನೀಡಬೇಕೆಂದು ವಾದಿಸಿದ್ದರು’ ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಕರಿಯಪ್ಪ, ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಮುಖ್ಯಸ್ಥ ರಮೇಶ ನಾಯಕ, ಸಂಶೋಧನಾ ವಿದ್ಯಾರ್ಥಿನಿಯರಾದ ಶ್ವೇತಾ, ಎಸ್‌.ಪಿ. ಪೂಜಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT