ಭಾನುವಾರ, ಸೆಪ್ಟೆಂಬರ್ 22, 2019
28 °C

ವಿನೋಬ, ಗಾಂಧಿ, ಜೆ.ಪಿ. ಸರ್ವೋದಯಕ್ಕೆ ಒತ್ತು

Published:
Updated:
Prajavani

ಹೊಸಪೇಟೆ: ‘ವಿನೋಬ ಭಾವೆ, ಮಹಾತ್ಮ ಗಾಂಧೀಜಿ ಹಾಗೂ ಜಯಪ್ರಕಾಶ ನಾರಾಯಣ (ಜೆ.ಪಿ.) ಅವರು ಸರ್ವೋದಯಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದರು’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದ ಮುಖ್ಯಸ್ಥ ಕೆ. ರವೀಂದ್ರನಾಥ ತಿಳಿಸಿದರು.

ಲೋಕನಾಯಕ ಜಯಪ್ರಕಾಶ್‌ ಟ್ರಸ್ಟ್‌ನಿಂದ ಬುಧವಾರ ನಗರದ ಜೆ.ಪಿ. ಭವನದಲ್ಲಿ ಹಮ್ಮಿಕೊಂಡಿದ್ದ ಸಂತ ವಿನೋಬ ಭಾವೆ ಜಯಂತಿ, ಮಹಾತ್ಮ ಗಾಂಧಿ ಚಿಂತನ ಮಾಲೆ ಉದ್ಘಾಟಿಸಿ ಅವರು ಮಾತನಾಡಿದರು.

‘ಗ್ರಾಮಗಳು ಉದ್ಧಾರವಾದರೆ ಇಡೀ ರಾಷ್ಟ್ರ ಉದ್ಧಾರವಾಗುತ್ತದೆ ಎಂದು ಮೂವರು ಮಹಾನುಭಾವರು ಅನೇಕ ವರ್ಷಗಳ ಹಿಂದೆಯೇ ಹೇಳಿದ್ದರು. ಅದರಲ್ಲೂ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆ ಬಹಳ ಅದ್ಭುತವಾದುದು. ಒಂದು ಗ್ರಾಮದಲ್ಲಿ ಸುಸಜ್ಜಿತವಾದ ಪಾಠ ಶಾಲೆ, ನಾಟ್ಯ ಶಾಲೆ ಮತ್ತು ಸಭಾ ಮಂದಿರ ಇರಬೇಕು. ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ಕೊಡಬೇಕು ಎಂದು ಗಾಂಧೀಜಿ ಪ್ರತಿಪಾದಿಸಿದ್ದರು’ ಎಂದು ನೆನಪಿಸಿದರು.

‘ಎಲ್ಲರಿಗೂ ಶುದ್ಧ ಕುಡಿಯುವ ನೀರು ಕೊಡಬೇಕು ಎಂದು ಇಂದು ನಾವು ಮಾತನಾಡುತ್ತೇವೆ. ಆದರೆ, ಗಾಂಧೀಜಿಯವರು ಅಂದೇ ಹೇಳಿದ್ದರು. ಕೆರೆ, ಬಾವಿಗಳ ನಿಯಂತ್ರಣ ಹಳ್ಳಿಯವರ ಕೈಯಲ್ಲಿ ಇರಬೇಕು. ಹಳ್ಳಿಗಳಲ್ಲಿ ಜಾತಿ, ಮತ, ಭೇದ ಇರಬಾರದು. ಅಸ್ಪೃಶ್ಯತೆ ಆಚರಣೆಯಲ್ಲಿ ಇರಬಾರದು. ಸಹಕಾರ ತತ್ವಕ್ಕೆ ಹೆಚ್ಚಿನ ಒತ್ತು ಕೊಡುವಂತೆ ತಿಳಿಸಿದ್ದರು. ಅಷ್ಟೇ ಅಲ್ಲ, ಅವರ ಸಿದ್ಧಾಂತಗಳನ್ನು ಕೃಷಿಕರು, ಹಳ್ಳಿಗರ ಮೇಲೆ ಪ್ರಯೋಗ ಮಾಡಿದ್ದರು’ ಎಂದು ತಿಳಿಸಿದರು. 

‘ಭಾರತ ಹಳ್ಳಿಗಳು, ಕೃಷಿ ಪ್ರಧಾನವಾದ ದೇಶ. ಹೀಗಾಗಿಯೇ ಗ್ರಾಮ ಸ್ವರಾಜ್ಯಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದರು. ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸತ್ಯಾಗ್ರಹ ಮಾಡಬೇಕು. ಅದು ಅಹಿಂಸೆಯ ಸಾಧನವಾಗಬೇಕು ಎಂದು ಹೇಳಿದ್ದರು. ಅಂತಹ ಆದರ್ಶ ವಿಚಾರಗಳ ಹಾದಿಯಲ್ಲಿ ನಾವೆಲ್ಲ ನಡೆಯಬೇಕಿದೆ’ ಎಂದರು. 

ಹಿರಿಯ ಸಾಹಿತಿ ಮೃತ್ಯುಂಜಯ ರುಮಾಲೆ ಮಾತನಾಡಿ, ‘ಮಹಾತ್ಮ ಗಾಂಧೀಜಿಯವರು ಒಮ್ಮೆ ನಗರಕ್ಕೆ ಭೇಟಿ ನೀಡಿದ್ದರು. ಅದು ಚರಿತ್ರೆಯಲ್ಲಿ ದಾಖಲಾಗಿದೆ. ಆ ಸಂಗತಿ ನಾವೆಲ್ಲರೂ ಹೆಮ್ಮೆ ಪಡಬೇಕಾದದ್ದು’ ಎಂದು ಹೇಳಿದರು. 

 

ಜೆ.ಪಿ. ಭವನದ ನಾರಾಯಣ ಭಟ್ಟ, ಎಂಜಿನಿಯರ್‌ ಕಟ್ಟಾ ಅಖಿಲ್‌, ಯು. ರಾಘವೇಂದ್ರ ರಾವ್‌ ಇದ್ದರು.

 

Post Comments (+)