ಭಾನುವಾರ, ಆಗಸ್ಟ್ 25, 2019
21 °C
ಗಾಂಧಿ ಚಿತಾಭಸ್ಮವಿರುವ ಮಂಟಪ.

ಹುತಾತ್ಮರ ಸ್ಮಾರಕ ಅಭಿವೃದ್ಧಿ ವಿಳಂಬ

Published:
Updated:
Prajavani

ಕೂಡ್ಲಿಗಿ: ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ಮಹಾತ್ಮಾ ಗಾಂಧೀಜಿ ಚಿತಾ ಭಸ್ಮವುಳ್ಳ ಹುತಾತ್ಮರ ಸ್ಮಾರಕದ ಅಭಿವೃದ್ಧಿ ಆಗಸ್ಟ್ 15ಕ್ಕೆ ಮುಗಿದು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗುತ್ತದೆ ಎಂದು ನಿರೀಕ್ಷೆ ಸುಳ್ಳಾಗಿದೆ.

ಅಭಿವೃದ್ಧಿ ಕಾರ್ಯ ಕುಂಟುತ್ತಾ ಸಾಗುತ್ತಿದ್ದು, ಸುಂದರ ಪ್ರವಾಸಿ ತಾಣವಾಗಬೇಕಾಗಿದ್ದ ಸ್ಮಾರಕ ಜನರ ಭೇಟಿ ಇಲ್ಲದೆ ಭಣಗುಡುತ್ತಿದೆ. ಅಭಿವೃದ್ಧಿ ನೆಪದಲ್ಲಿ ಸ್ಮಾರಕವನ್ನು ಪದೇಪದೇ ಕಿತ್ತು ಹಾಕಲಾಗುತ್ತಿದೆ. ಸ್ಮಾರಕದ ಮೇಲಿದ್ದ ಶಿಥಿಲ ಚಾವಣೆಯನ್ನು ಕಿತ್ತು ಹಾಕಲಾಗಿದ್ದು, ಮೂಲ ಸ್ಮಾರಕ ಬಯಲಲ್ಲಿ ನಿಂತಿದೆ.

ಈ ಹಿಂದೆ ₹20 ಲಕ್ಷ ವೆಚ್ಚದಲ್ಲಿ ಗ್ರಾನೈಟ್ ಗೋಳ ಸೇರಿದಂತೆ ಸ್ಮಾರಕದ ಸುತ್ತಲು ಕಂಪೌಂಡ್, ಮೂರು ಕಬ್ಬಿಣದ ಗೇಟುಗಳ ನಿರ್ಮಾಣ ಮಾಡಲಾಗಿತ್ತು. ಗೋಡೆಗೆ ಹಾಕಿದ್ದ ಗ್ರ್ಯಾನೈಟ್ ಕಲ್ಲುಗಳು ಬಿದ್ದುಹೋಗಿವೆ.

ಸಂತೋಷ್ ಲಾಡ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಜಿಲ್ಲಾ ಖನಿಜ ನಿಧಿಯಿಂದ ಸುಮಾರು ₹2 ಕೋಟಿ ವೆಚ್ಚದಲ್ಲಿ ಮತ್ತೆ ಹೊಸ ಯೋಜನೆ ರೂಪಿಸಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದ್ದರು. ಆದರೆ ಚುನಾವಣೆಗಳ ಭರಾಟೆಯಲ್ಲಿ ವರ್ಷ ಕಳೆದರೂ ಕಾಮಗಾರಿ ಚಾಲನೆಗೊಳ್ಳದೆ ನೆನೆಗುದಿಗೆ ಬಿದ್ದಿತ್ತು. ಮೈತ್ರಿ ಸರ್ಕಾರ ಬಂದ ನಂತರವೂ ಪ್ರಗತಿ ಕಾಣಲಿಲ್ಲ. ಬೇಸರಗೊಂಡ ಗಾಂಧಿ ಸ್ಮಾರಕ ಸಮಿತಿಯ ಸದಸ್ಯರು, ಶಾಸಕ ಎನ್.ವೈ.ಗೋಪಲಕೃಷ್ಣ ಅವರನ್ನು ಭೇಟಿ ಮಾಡಿ ಸಮಸ್ಯೆಯನ್ನು ವಿವರಿಸಿದ್ದರು. ನಂತರ ಶಾಸಕರು ಮುತುವರ್ಜಿ ವಹಿಸಿದ್ದರಿಂದ ಕಾಮಗಾರಿ ಆರಂಭವಾದರೂ ತೀವ್ರ ಮಂದಗತಿಯಲ್ಲಿ ಸಾಗಿದೆ.

ಇತ್ತೀಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗಾಂಧಿ ಜಯಂತಿಯ ವೇಳೆಗೆ ಕಾಮಗಾರಿ ಮುಗಿಸಿಕೊಡುವಂತೆ ಶಾಸಕ ಗೋಪಾಲಕೃಷ್ಣ ನಿರ್ಮಿತಿ ಕೇಂದ್ರದ ಎಂಜನಿಯರ್ ವಿನೋದ್‌ ಅವರಿಗೆ ಸೂಚನೆ ನೀಡಿದ್ದಾರೆ.

‘₹1 ಕೋಟಿ ರೂಪಾಯಿ ವೆಚ್ಚದ ಯೋಜನೆ ಸಿದ್ದವಾಗಿದ್ದು, ₹50 ಲಕ್ಷ ಬಿಡುಗಡೆಯಾಗಿದೆ. ಅದರಲ್ಲಿ ಚಿತಾಭಸ್ಮದ ಪಶ್ಚಿಮ ದಿಕ್ಕಿಗೆ ನೀರಿನ ಕಾರಂಜಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ’ ಎಂದು ವಿನೋದ್ ಮಾಹಿತಿ ನೀಡಿದರು.

Post Comments (+)