ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕೇತದಲ್ಲೇ ಉಳಿದ ಗಾಂಧೀಜಿ: ವಿಷಾದ

ಅರಿವಿಗೆ ನಿಲುಕದ ಗಾಂಧೀ ಅಪ್ರಸ್ತುತ ಆದರ್ಶವೇ: ಸಂವಾದ
Last Updated 20 ಅಕ್ಟೋಬರ್ 2018, 9:16 IST
ಅಕ್ಷರ ಗಾತ್ರ

ಬಳ್ಳಾರಿ: ‘ಎಲ್ಲ ತಲೆಮಾರುಗಳ ಆದರ್ಶವಾಗಬೇಕಾದ ಮಹಾತ್ಮ ಗಾಂಧೀಜಿ ಈಗ ಸಂಕೇತಗಳಲ್ಲಿ ಮಾತ್ರ ಉಳಿದಿದ್ದಾರೆ’ ಎಂದು ಲೋಹಿಯಾ ಪ್ರಕಾಶನದ ಸಿ.ಚನ್ನಬಸವಣ್ಣ ವಿಷಾದಿಸಿದರು.

ನಗರದ ಕೊಟ್ಟೂರುಸ್ವಾಮಿ ಬಿಇಡಿ ಕಾಲೇಜಿನಲ್ಲಿ ಸಮಾಜಮುಖಿ ಪತ್ರಿಕೆಯು ಶನಿವಾರ ‘ಅರಿವಿಗೆ ನಿಲುಕದ ಗಾಂಧಿ: ಅಪ್ರಸ್ತುತ್ ಆದರ್ಶವೇ?’ ಕುರಿತು ಏರ್ಪಡಿಸಿದ್ದ ಸಂವಾದವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಸತ್ಯ, ಅಹಿಂಸೆ, ಸ್ವಚ್ಛತೆ, ಸರಳತೆ, ಶಾಂತಿ, ದೇಸಿ, ಸವಿನಯ ಕಾನೂನು ಭಂಗದಂಥ ಮೌಲ್ಯಗಳನ್ನೇ ಜೀವಿಸಿದ ಗಾಂಧೀಜಿಯನ್ನು ಈಗ ಅವೆಲ್ಲಕ್ಕೂ ಸಂಕೇತವನ್ನಾಗಿಸಲಾಗಿದೆ.ಆ ಮೌಲ್ಯಗಳ ಪಾಲನೆಯಲ್ಲಿ ಮಾತ್ರ ನಾವು ಗಾಂಧಿಯಿಂದ ದೂರವಿದ್ದೇವೆ’ ಎಂದರು.

‘ಸ್ವಚ್ಛ ಭಾರತ ಕಾರ್ಯಕ್ರಮಕ್ಕೆ ಗಾಂಧೀಜಿಯವರ ಕನ್ನಡಕವನ್ನೇ ಲಾಂಛನ ಮಾಡಲಾಗಿದೆ. ಇಂಥ ದೇಶದಲ್ಲೇ ಮ್ಯಾನ್‌ಹೋಲ್‌ಗಳಿಗೆ ಇಳಿದು ಕಾರ್ಮಿಕರು ಸ್ವಚ್ಛತೆ ಕಾರ್ಯ ನಡೆಸುವ ಅಮಾನವೀಯ ಘಟನೆಗಳೂ ನಡೆಯುತ್ತಿವೆ’ ಎಂದು ವಿಷಾದಿಸಿದರು.

‘ಸಂಪೂರ್ಣ ಸ್ವಚ್ಛತಾ ಆಂದೋಲನದಲ್ಲಿ ಬಳ್ಳಾರಿ ಜಿಲ್ಲೆ ಗುರಿ ಮುಟ್ಟಿದೆ ಎಂದು ಜಿಲ್ಲಾಡಳಿತ ಘೋಷಿಸಿದೆ. ಈ ನಡುವೆಯೇ, ನಗರ ಪ್ರದೇಶದಲ್ಲಿ ಬಯಲು ಬಹಿರ್ದೆಸೆ ಇನ್ನೂ ಜೀವಂತವಾಗಿದೆ. ನಾನು ದಿನವೂ ವಾಯುವಿಹಾರಕ್ಕೆ ತೆರಳುವ ಕಪ್ಪಗಲ್ಲು ರಸ್ತೆಯ ಕಾಲುವೆ ಸುತ್ತಮುತ್ತ ಮಹಿಳೆಯರು ಸೆರಗನ್ನು ತಲೆ ಮೇಲೆ ಹಾಕಿಕೊಂಡು ಬಹಿರ್ದೆಸೆಗೆ ಕೂತ ದೃಶ್ಯಗಳು ಕಂಡುಬರುತ್ತವೆ’ ಎಂದು ಹೇಳಿದರು.

‘ಗಾಂಧೀಜಿಯನ್ನು ಅರ್ಥಮಾಡಿಕೊಳ್ಳುವುದು ಕಷ್ಟ ಎಂದು ನಮ್ಮಷ್ಟಕ್ಕೆ ನಾವೇ ನಿರ್ಧರಿಸಿ ಸಂಕೀರ್ಣಗೊಳಿಸಿಬಿಟ್ಟಿದ್ದೇವೆ. ಆದರೆ ಗಾಂಧೀಜಿ ಸರಳಾತಿಸರಳ ಜೀವಿಯಾಗಿದ್ದರು. ಅವರ ಜೀವನದ ಆದರ್ಶನಗಳನ್ನು ಪಾಲಿಸಲು ಆಗದ ಪರಿಸ್ಥಿತಿಯಲ್ಲಿ ಅವರು ಅಪ್ರಸ್ತುತ ಎಂಬ ಚರ್ಚೆ ನಡೆದಿದೆ. ಆದರೆ ಇಂದಿಗೂ ಎಂದೆಂದಿಗೂ ಗಾಂಧೀಜಿ ಪ್ರಸ್ತುತರಾಗಿಯೇ ಇರುತ್ತಾರೆ’ ಎಂದು ಪ್ರತಿಪಾದಿಸಿದರು.

ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿ ಸಂಚಾಲಕ ಸಿರಿಗೇರಿ ಪನ್ನರಾಜ್‌ ಅಧ್ಯಕ್ಷತೆ ವಹಿಸಿದ್ದರು. ಸಮಾಜಮುಖಿ ಓದುಗರ ಬಳಗದ ಡಾ.ಅರವಿಂದ ಪಟೇಲ್‌, ಅಬ್ದುಲ್‌ ಹೈ ಹಾಗೂ ಮುಖಂಡ ವಿಕ್ರಂ ಹಿರೇಮಠ ವೇದಿಕೆಯಲ್ಲಿದ್ದರು.

ಓದುಗರ ಬಳಗ, ಸಮಾಜ ವಿಜ್ಞಾನ ವೇದಿಕೆ, ಅರಿವು, ಕಾವ್ಯಮನೆ ಪ್ರಕಾಶನದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಂತರ ಸಂವಾದ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT