ಗಾಂಧಿ ಭಾಷಣ ಆಲಿಸಿ ಸತ್ಯಾಗ್ರಹಿಯಾದ!

7

ಗಾಂಧಿ ಭಾಷಣ ಆಲಿಸಿ ಸತ್ಯಾಗ್ರಹಿಯಾದ!

Published:
Updated:
Deccan Herald

ಹೊಸಪೇಟೆ: ಅದು 1934 ಮಾ.3. ಆ ದಿನ ನಗರದ ಕನಕದಾಸ ವೃತ್ತದಲ್ಲಿ ಮಹಾತ್ಮ ಗಾಂಧೀಜಿಯವರು ಮಾಡಿದ ಭಾಷಣ ಯುವಕನೊಬ್ಬನ ಬದುಕಿನಲ್ಲಿ ದೊಡ್ಡ ಬದಲಾವಣೆ ಮಾಡಿತು. ಆ ಯುವಕ ಮನೆ–ಮಠ ಬಿಟ್ಟು ಸಂಪೂರ್ಣವಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದುಮುಕುವಂತೆ ಮಾಡಿತು. ನಂತರ ಹಲವು ಸಲ ಜೈಲು ಹಕ್ಕಿ ಆಗಬೇಕಾಯಿತು.

ಆ ಯುವಕನ ಹೆಸರು ಹಿಂಡಿ ಸಿದ್ದಪ್ಪ. ಗಾಂಧೀಜಿಯವರ ಮಾತುಗಳಿಂದ ಪ್ರಭಾವಿತನಾಗಿ ಸತ್ಯಾಗ್ರಹಿಯಾಗಿ ಬದಲಾದದ್ದನ್ನು ಸ್ವತಃ ಹಿಂಡಿ ಸಿದ್ದಪ್ಪ ಪತ್ರವೊಂದನ್ನು ಬರೆದುಕೊಂಡಿದ್ದರು. ಸಾಹಿತಿ ಮೃತ್ಯುಂಜಯ ರುಮಾಲೆ ಅವರು ಆ ಪತ್ರವನ್ನು ಅನೇಕ ವರ್ಷಗಳಿಂದ ಅವರ ಬಳಿ ಬಹಳ ಜತನದಿಂದ ಇಟ್ಟುಕೊಂಡಿದ್ದಾರೆ.

‘ಗಾಂಧೀಜಿಯವರ ಮಾತುಗಳನ್ನು ಆಲಿಸಿದ ನಂತರ ನನಗೆ ಕಾಂಗ್ರೆಸ್‌ ಸೇರಬೇಕು. ಸತ್ಯಾಗ್ರಹಿ ಆಗಬೇಕೆಂಬ ಹುಚ್ಚು ಹಿಡಿಯಿತು. ನಂತರ ಕಾಂಗ್ರೆಸ್‌ ಸದಸ್ಯನಾದೆ. ಸಕ್ರಿಯವಾಗಿ ಎಲ್ಲ ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. 1942ರಲ್ಲಿ ನಡೆದ ಚಳವಳಿಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ನನ್ನನ್ನು ಬ್ರಿಟಿಷರು ಬಂಧಿಸಿ, ತಂಜಾವೂರಿನ ಜೈಲಿನಲ್ಲಿ ಇಟ್ಟಿದ್ದರು. ಬಳಿಕ 1944 ಜ. 23ರಂದು ಬಿಡುಗಡೆಗೊಳಿಸಿದರು’ ಎಂದು ಸಿದ್ದಪ್ಪನವರು ಪತ್ರದಲ್ಲಿ ಬರೆದುಕೊಂಡಿದ್ದಾರೆ. ನಂತರ ಸಿದ್ದಪ್ಪನವರು ಏನಾದರೂ, ಎಲ್ಲಿಗೆ ಹೋದರೂ ಎಂಬ ವಿವರ ಯಾರಿಗೂ ಗೊತ್ತಿಲ್ಲ.

 

‘ಸಿದ್ದಪ್ಪನವರ ಬಗ್ಗೆ ನನಗೂ ಹೆಚ್ಚಿನ ಮಾಹಿತಿ ಇಲ್ಲ. ಆದರೆ, ಅವರು ಪತ್ರ ಬರೆದು ಇಟ್ಟಿದ್ದರು ಎಂಬ ಮಾಹಿತಿ ಸಿಕ್ಕಿತ್ತು. ಯಾರ ಬಳಿ ಆ ಪತ್ರ ಇಟ್ಟಿದ್ದರೋ ಅವರನ್ನು ಸಂಪರ್ಕಿಸಿ, ಅವರ ಮನವೊಲಿಸಿ ಪಡೆದು. ಅನೇಕ ವರ್ಷಗಳಿಂದ ಅದನ್ನು ನನ್ನ ಬಳಿ ಸುರಕ್ಷಿತವಾಗಿ ಇಟ್ಟುಕೊಂಡಿದ್ದೇನೆ. ಈ ಪತ್ರ ಗಾಂಧೀಜಿಯವರು ನಗರಕ್ಕೆ ಬಂದಿದ್ದರು ಎಂಬುದನ್ನು ಅಧಿಕೃತವಾಗಿ ದೃಢಪಡಿಸುತ್ತದೆ. ನನಗೆ ಮೊದಲಿನಿಂದಲೂ ಈ ರೀತಿಯ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸ ಇದೆ’ ಎನ್ನುತ್ತಾರೆ ಮೃತ್ಯುಂಜಯ ರುಮಾಲೆ.

‘1934 ಮಾ. 2 ಮತ್ತು 3ರಂದು ಮಹಾತ್ಮ ಗಾಂಧೀಜಿಯವರು ಇಡೀ ಬಳ್ಳಾರಿ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡಿದ್ದರು. ಸ್ವಾತಂತ್ರ್ಯ ಚಳವಳಿ, ಹರಿಜನರ ಉದ್ಧಾರದ ಕುರಿತು ಜಾಗೃತಿ ಮೂಡಿಸಿದ್ದರು. ಮೊದಲ ದಿನ ಹರಪನಹಳ್ಳಿ, ಕೊಟ್ಟೂರು, ಕೂಡ್ಲಿಗಿ, ಸಂಡೂರು ಹಾಗೂ ಬಳ್ಳಾರಿಯಲ್ಲಿ ಸಂಚರಿಸಿದ್ದರು. ಮರುದಿನ ಬಳ್ಳಾರಿಯಿಂದ ನಗರಕ್ಕೆ ರೈಲಿನಲ್ಲಿ ಬಂದು, ಅಲ್ಲಿಂದ ಈಗಿನ ಕನಕದಾಸ ವೃತ್ತದ ವರೆಗೆ ಕಾಲ್ನಡಿಗೆಯಲ್ಲಿ ಬಂದಿದ್ದರು. ನಂತರ ಅಲ್ಲಿ ಸಭೆ ಉದ್ದೇಶಿಸಿ ಮಾತನಾಡಿದ್ದರು. ಅಲ್ಲಿ ಗಾಂಧೀಜಿ ಮಾಡಿದ ಭಾಷಣ ಸಿದ್ದಪ್ಪನವರ ಬದುಕಿನಲ್ಲಿ ಬದಲಾವಣೆಗೆ ಕಾರಣವಾಯಿತು’ ಎಂದು ವಿವರಿಸಿದರು.

‘ಅದೇ ಸಭೆಯಲ್ಲಿ ನಗರದ ಪತ್ತಿಕೊಂಡ ಗುರುನಾಥಪ್ಪ ಶೆಟ್ಟಿ, ಬೆಲ್ಲದ ಚೆನ್ನಪ್ಪ, ಗಣಪತೆಪ್ಪ, ಡಾ. ನಾಗನಗೌಡ ಅವರು ಹರಿಜನ ಸೇವಾ ಸಂಘಕ್ಕೆ ₨3 ಸಾವಿರ ದೇಣಿಗೆಯಾಗಿ ನೀಡಿದ್ದರು. ದೇಣಿಗೆ ನೀಡಿದ ಛಾಯಾಚಿತ್ರ ಅನೇಕ ವರ್ಷ ಗುರುನಾಥಪ್ಪ ಶೆಟ್ಟಿ ಅವರ ಮನೆಯಲ್ಲಿತ್ತು. ನಂತರ ಅವರ ಕುಟುಂಬ ಸದಸ್ಯರು ಬೇರೆ ಬೇರೆ ಕಡೆ ಹೋದರು. ಈಗ ಆ ಛಾಯಾಚಿತ್ರ ಎಲ್ಲಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಹೇಗಾದರೂ ಮಾಡಿ ಆ ಛಾಯಾಚಿತ್ರ ಪತ್ತೆ ಹಚ್ಚಬೇಕು ಎಂದು ಸಾಕಷ್ಟು ಶ್ರಮಿಸಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ’ ಎಂದು ರುಮಾಲೆಯವರು ನೆನೆದು ಮರುಕ ಪಡುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !