ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶ ಉತ್ಸವಕ್ಕೆ ವಿಧ್ಯುಕ್ತ ತೆರೆ

ಐದು ದಿನಗಳಲ್ಲಿ 140ಕ್ಕೂ ಅಧಿಕ ಗಣಪನ ಮೂರ್ತಿಗಳ ವಿಸರ್ಜನೆ
Last Updated 7 ಸೆಪ್ಟೆಂಬರ್ 2019, 9:54 IST
ಅಕ್ಷರ ಗಾತ್ರ

ಹೊಸಪೇಟೆ: ಐದು ದಿನಗಳ ಗಣೇಶ ಉತ್ಸವಕ್ಕೆ ಶನಿವಾರ ಬೆಳಿಗ್ಗೆ ನಗರದಲ್ಲಿ ವಿಧ್ಯುಕ್ತ ತೆರೆ ಬಿತ್ತು.

ಐದು ದಿನಗಳ ವರೆಗೆ ಪ್ರತಿಷ್ಠಾಪಿಸಿದ್ದ ಗಣಪನ ಮೂರ್ತಿಗಳ ಭವ್ಯ ಮೆರವಣಿಗೆ ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಿಗ್ಗೆ ಎಂಟು ಗಂಟೆಯ ವರೆಗೆ ನಗರದ ಪ್ರಮುಖ ಮಾರ್ಗಗಳಲ್ಲಿ ನಡೆಯಿತು. ಬಳಿಕ ಕ್ರೇನ್‌ ಸಹಾಯದಿಂದ ಸ್ಟೇಶನ್‌ ರಸ್ತೆಯ ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಯಲ್ಲಿ (ಎಲ್‌.ಎಲ್‌.ಸಿ.) ಮೂರ್ತಿಗಳನ್ನು ಶ್ರದ್ಧಾ, ಭಕ್ತಿ ಹಾಗೂ ಸಂಭ್ರಮದಿಂದ ವಿಸರ್ಜನೆ ಮಾಡಲಾಯಿತು. ಮೂರು ದಿನಗಳ ಗಣಪನನ್ನು ಸೆ. 4ರಂದೇ ವಿಸರ್ಜಿಸಲಾಗಿತ್ತು.

ಗಣಪನ ಮೆರವಣಿಗೆಗೂ ಮುನ್ನ ಆಯಾ ಗಣೇಶ ಮಂಡಳಿಯವರು ಸಂಜೆ ಅನ್ನ ದಾಸೋಹದ ವ್ಯವಸ್ಥೆ ಮಾಡಿದ್ದರು. ಬಳಿಕ ಲಾರಿ, ಟ್ರ್ಯಾಕ್ಟರ್‌ಗಳನ್ನು ಹೂ, ತಳಿರು ತೋರಣದಿಂದ ಅಲಂಕರಿಸಿ ಅದರಲ್ಲಿ ಗಣಪನ ಮೂರ್ತಿ ಕೂರಿಸಿದರು. ಭಗವಾ ಧ್ವಜಗಳು, ಕೇಸರಿ ವರ್ಣದ ಶಾಲುಗಳನ್ನು ಧರಿಸಿದ್ದ ಗಣೇಶ ಮಂಡಳಿಯ ಕಾರ್ಯಕರ್ತರು, ಘೋಷಣೆಗಳನ್ನು ಕೂಗಿದರು. ಪಟಾಕಿ ಸಿಡಿಸಿ, ಕಿವಿಗಡಚ್ಚಿಕ್ಕುವ ಸಂಗೀತಕ್ಕೆ ಮೈಮರೆತು ಹೆಜ್ಜೆ ಹಾಕಿದರು.

ರಾತ್ರಿ ಎಂಟು ಗಂಟೆಗೆ ಆರಂಭವಾದ ಮೆರವಣಿಗೆ ಬೆಳಕು ಹರಿಯುವವರೆಗೆ ನಡೆಯಿತು. ರಾತ್ರಿಯಿಡೀ ತುಂತುರು ಮಳೆ ಸುರಿಯಿತು. ಅದನ್ನು ಲೆಕ್ಕಿಸದೆ ಕಾರ್ಯಕರ್ತರು ಭಕ್ತಿಯಿಂದ ಕುಣಿದು ಕುಪ್ಪಳಿಸಿದರು. ನಗರದ ಪ್ರಮುಖ ಮಾರ್ಗಗಳ ಮೂಲಕ ಮೆರವಣಿಗೆ ಹಾದು ಮಹಾತ್ಮ ಗಾಂಧಿ ವೃತ್ತಕ್ಕೆ ಬರುವವರೆಗೆ ತಡರಾತ್ರಿ ಮೂರು ಗಂಟೆಯಾಗಿತ್ತು. ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಜನ ತಡರಾತ್ರಿಯ ವರೆಗೆ ನಿದ್ದೆಗಟ್ಟು ರಸ್ತೆಬದಿಯ ಕಟ್ಟಡಗಳ ಬದಿ ಕುಳಿತುಕೊಂಡಿದ್ದರು. ಟೌನ್‌ ರೀಡಿಂಗ್‌ ರೂಂ ಜನರಿಂದ ಸಂಪೂರ್ಣ ಭರ್ತಿಯಾಗಿತ್ತು.

ಬೆಳಿಗ್ಗೆ ಏಳು ಗಂಟೆಗೆ ಒಂದೊಂದೆ ಗಣೇಶ ಮಂಡಳಿಯವರು ಸ್ಟೇಶನ್‌ ರಸ್ತೆಯತ್ತ ಮುಖ ಮಾಡಿದರು. ಅಲ್ಲಿ ಒಂದಾದ ನಂತರ ಒಂದು ಗಣಪನ ಮೂರ್ತಿಯನ್ನು ಕ್ರೇನಿನಿಂದ ಕಾಲುವೆಯಲ್ಲಿ ವಿಸರ್ಜನೆ ಮಾಡಲಾಯಿತು. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ನೂರಾರು ಜನ ಸೇರಿದ್ದರು. ಇದರೊಂದಿಗೆ ಉತ್ಸವ ಕೊನೆಗೊಂಡಿತು. ಐದು ದಿನಗಳಲ್ಲಿ ಒಟ್ಟು 140ಕ್ಕೂ ಹೆಚ್ಚು ಮೂರ್ತಿಗಳನ್ನು ವಿಸರ್ಜಿಸಲಾಯಿತು.

ಡಿ.ವೈ.ಎಸ್ಪಿ. ವಿ. ರಘುಕುಮಾರ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಮೆರವಣಿಗೆ ಹಾದು ಹೋಗುವ ಮಾರ್ಗದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಸೂಕ್ಷ್ಮ ಪ್ರದೇಶಗಳಲ್ಲಿ ರಾತ್ರಿಯಿಡೀ ಪೊಲೀಸರು ಗಸ್ತು ತಿರುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT