ಮೂರ್ತಿ ಚಿಕ್ಕದು, ಕೀರ್ತಿ ದೊಡ್ಡದು

ಶುಕ್ರವಾರ, ಏಪ್ರಿಲ್ 26, 2019
35 °C
ಕಿರಿದಾದ ವಯಸ್ಸಿನಲ್ಲಿ ಹಿರಿದಾದ ಸಾಧನೆ ಮಾಡುತ್ತಿರುವ ಸಾನಿಯಾ ಹಶ್ಮಿ

ಮೂರ್ತಿ ಚಿಕ್ಕದು, ಕೀರ್ತಿ ದೊಡ್ಡದು

Published:
Updated:
Prajavani

ಹಗರಿಬೊಮ್ಮನಹಳ್ಳಿ: ಕಿರಿದಾದ ವಯಸ್ಸಿನಲ್ಲಿ ಕರಾಟೆಯಲ್ಲಿ ಹಿರಿದಾದ ಸಾಧನೆ ಮಾಡುತ್ತಿದ್ದಾಳೆ ಪಟ್ಟಣದ ಪುಟ್ಟ ಪೋರಿ ಎಂ. ಸಾನಿಯಾ ಹಶ್ಮಿ.

ಇಲ್ಲಿನ ಎಂ.ವೈ. ಘೋರ್ಪಡೆ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಾನಿಯಾ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ಮುಡಿಗೇರಿಸಿಕೊಂಡಿದ್ದಾಳೆ. ಈಗ ಸಾಗರದಾಚೆಗೂ ತನ್ನ ಕೀರ್ತಿ ಹರಡಲು ಸಿದ್ಧಳಾಗಿದ್ದಾಳೆ.

ಮೇ 3ರಿಂದ 5ರ ವರೆಗೆ ಮಲೇಶಿಯಾದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವರು. ಅಲ್ಲಿ ಪದಕ ಗೆದ್ದೇ ಬರಬೇಕೆಂಬ ಹಟಕ್ಕೆ ಬಿದ್ದಿರುವ ಆಕೆ, ಈಗಿನಿಂದಲೇ ಬೆವರು ಹರಿಸುತ್ತಿದ್ದಾಳೆ.

ಸಾನಿಯಾ ತಂದೆ ಮೊಹಮ್ಮದ್‌ ಸುಬಾನಿ ವೃತ್ತಿಯಿಂದ ಶಿಕ್ಷಕರಾಗಿದ್ದಾರೆ. ಮಗಳಿಗೆ ಎಲ್ಲ ರೀತಿಯ ಬೆಂಬಲ ಕೊಡುವ ಮೂಲಕ ಆಕೆಯ ಬೆಳವಣಿಗೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ಪ್ರತಿದಿನ ಬೆಳಗಿನ ಜಾವ ಆರು ಗಂಟೆಗೆ ಈ ಪೋರಿ ಕೆಚ್ಚಿನಬಂಡಿ ರಸ್ತೆಯಲ್ಲಿ ಎರಡೂವರೆ ಕಿಲೋ ಮೀಟರ್ ದೂರವನ್ನು ಏಕಾಂಗಿಯಾಗಿ ಜಾಗಿಂಗ್ ಮಾಡುವುದರೊಂದಿಗೆ ದೈಹಿಕ ಕಸರತ್ತು ಆರಂಭಿಸುತ್ತಾರೆ. ನಂತರ ಒಂದು ಗಂಟೆ ಶೋಟಾಕಾನ್ ಸಂಸ್ಥೆಯ ತರಬೇತಿ ಶಿಬಿರದಲ್ಲಿ ಭಾಗವಹಿಸುತ್ತಾಳೆ.

ಈಗಾಗಲೇ ಎರಡು ಕರಾಟೆ ಬೆಲ್ಟ್‌ಗಳಿಗೆ ಪಾತ್ರಳಾಗಿರುವ ಸಾನಿಯಾ ಮೂರನೇ ಬೆಲ್ಟ್‌ಗಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಳೆ. ಶೋಟಾಕಾನ್‌ ಸಂಸ್ಥೆಯ ಮುತ್ಕೂರು ಸುಭಾಷ್ ಅವರಿಂದ ತರಬೇತಿ ಪಡೆಯುತ್ತಲೇ ಜನವರಿ 5ರಂದು ಸಿಂಧನೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಓಪನ್ ಚಾಂಪಿಯನ್‍ಷಿಪ್‍ನ ಕುಮತಿ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದಾಳೆ.

ಫೆಬ್ರುವರಿಯಲ್ಲಿ ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲೂ ತನ್ನ ಕೈಚಳಕ ತೋರಿಸಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ. ತೋರಣಗಲ್‍ನ ಜಿಂದಾಲ್‍ನಲ್ಲಿ ಪ್ರತಿ ತಿಂಗಳು ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಗಮನಾರ್ಹ ಸಾಧನೆ ಮಾಡುತ್ತಿದ್ದಾಳೆ. ಹೀಗೆ ಕರಾಟೆಯಲ್ಲಿ ಒಂದರ ಮೇಲೊಂದು ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿರುವ ಈ ಪ್ರತಿಭೆಗೆ ಕಿರಿಯ ವಯಸ್ಸಿನಲ್ಲೇ ಮಲೇಶಿಯಾದಲ್ಲಿ ನಡೆಯಲಿರುವ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುವ ಸದಾವಕಾಶ ಸಿಕ್ಕಿದೆ.

ಈಕೆಯ ಸಾಧನೆಯನ್ನು ಗುರುತಿಸಿ ಈಚೆಗೆ ರಾಜ್ಯ ಮಕ್ಕಳ ಅಕಾಡೆಮಿ ಗೌರವಿಸಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !