ಶನಿವಾರ, ಫೆಬ್ರವರಿ 22, 2020
19 °C
ನೀರಾವರಿ ಸೌಲಭ್ಯಕ್ಕೆ ಆಗ್ರಹಿಸಿ ನ. 2ರಂದು ರೈತರ ಧರಣಿ

ನೀರು ಕೊಟ್ಟವರಿಗಷ್ಟೇ ಮತ: ರೈತ ಸಂಘ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ‘ಏತ ನೀರಾವರಿ ಯೋಜನೆ ಜಾರಿಗೆ ತರುವ ಖಚಿತ ಭರವಸೆ ಕೊಟ್ಟವರಿಗಷ್ಟೇ ಬರುವ ಉಪಚುನಾವಣೆಯಲ್ಲಿ ಬೆಂಬಲ ಸೂಚಿಸಲಾಗುವುದು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ನಂಜುಂಡಸ್ವಾಮಿ ಬಣ) ಜಿಲ್ಲಾ ಅಧ್ಯಕ್ಷ ಬಿ. ಗೋಣಿಬಸಪ್ಪ ತಿಳಿಸಿದರು.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜನಪ್ರತಿನಿಧಿಗಳ ಹುಸಿ ಭರವಸೆಗಳಿಂದ ರೈತರು ರೋಸಿ ಹೋಗಿದ್ದಾರೆ. ಹೀಗಾಗಿಯೇ ನ. 2ರಂದು ತಾಲ್ಲೂಕಿನ ಹನ್ನೊಂದು ಹಳ್ಳಿಗಳ ರೈತರೊಂದಿಗೆ ನಗರದ ತಹಶೀಲ್ದಾರ್‌ ಕಚೇರಿ ಎದುರು ದಿನವಿಡೀ ಧರಣಿ ನಡೆಸಲು ತೀರ್ಮಾನಿಸಲಾಗಿದೆ. ಧರಣಿಗೂ ಮುನ್ನ ನಗರದಲ್ಲಿ ಜಾಥಾ ನಡೆಸಲಾಗುವುದು’ ಎಂದು ಮಾಹಿತಿ ನೀಡಿದರು.

‘ತಾಲ್ಲೂಕಿನ ಇಂಗಳಗಿ, ವಡ್ಡರಹಳ್ಳಿ, ಪಿ.ಕೆ. ಹಳ್ಳಿ, ಬೈಲುವದ್ದಿಗೇರಿ, ಗುಂಡ್ಲವದ್ದಿಗೇರಿ, ಕಾಕುಬಾಳು, ಧರ್ಮಸಾಗರ, ಜಿ.ಜಿ. ಕ್ಯಾಂಪ್‌, ಕೊಟಗಿನಹಾಳು, ಗಾದಿಗನೂರು ಹಾಗೂ ಭುವನಹಳ್ಳಿ ಗ್ರಾಮಗಳಿಗೆ ನೀರಾವರಿ ಸೌಕರ್ಯ ಇಲ್ಲದ ಕಾರಣ ರೈತರ ಬದುಕು ದುಸ್ತರವಾಗಿದೆ’ ಎಂದು ಹೇಳಿದರು.

‘ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಯೋಜನೆ ತಯಾರಿಸಿ, ಅದಕ್ಕೆ ಸರ್ಕಾರದಿಂದ ಅನುಮೋದನೆ ಕೊಡಿಸುವ ಕೆಲಸ ಯಾರು ಮಾಡುತ್ತಾರೋ ಅಂತಹವರಿಗೆ ಚುನಾವಣೆಯಲ್ಲಿ ಬೆಂಬಲಿಸಲಾಗುವುದು. ಈ ಹಿಂದಿನಂತೆ ಭರವಸೆ ಕೊಟ್ಟರೆ ಕೆಲಸ ಆಗುವುದಿಲ್ಲ. ಬರುವ ದಿನಗಳಲ್ಲಿ ಚುನಾವಣೆ ಬಹಿಷ್ಕಾರಕ್ಕೂ ಚಿಂತನೆ ನಡೆಸಲಾಗುವುದು’ ಎಂದು ತಿಳಿಸಿದರು.

‘ತಾಲ್ಲೂಕಿನ ಏಕೈಕ ಸಕ್ಕರೆ ಕಾರ್ಖಾನೆ ಮುಚ್ಚಿ ನಾಲ್ಕು ವರ್ಷಗಳಾಗುತ್ತಿದೆ. ಇದರಿಂದ ಕಬ್ಬು ಬೆಳೆಗಾರರು ತೊಂದರೆ ಅನುಭವಿಸುತ್ತಿದ್ದಾರೆ. ಕಡಿಮೆ ಬೆಲೆಯಲ್ಲಿ ಅನ್ಯ ಜಿಲ್ಲೆಗಳ ಕಾರ್ಖಾನೆಗಳಿಗೆ ಕಬ್ಬು ಪೂರೈಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ತಾಂತ್ರಿಕ ಕಾರಣಗಳನ್ನು ಬಗೆಹರಿಸಿ ಸರ್ಕಾರ ಐ.ಎಸ್‌.ಆರ್‌. ಸಕ್ಕರೆ ಕಾರ್ಖಾನೆ ಆರಂಭಿಸಬೇಕು’ ಎಂದು ಹಕ್ಕೊತ್ತಾಯ ಮಾಡಿದರು.

‘ತೆಲಂಗಾಣ ಸರ್ಕಾರವು ₹80,000 ಕೋಟಿ ವೆಚ್ಚದಲ್ಲಿ ಕಾಳೇಶ್ವರಂ ನೀರಾವರಿ ಯೋಜನೆ ಜಾರಿಗೆ ತರುತ್ತಿದೆ. ಇದರಿಂದ 47 ಲಕ್ಷ ಹೆಕ್ಟೇರ್‌ ಜಮೀನಿಗೆ ನೀರು ಹರಿಸಬಹುದು. ಬರಡು ಭೂಮಿ ಹಸಿರಾಗಲಿದೆ. ಇಡೀ ಜಗತ್ತಿನಲ್ಲಿ ಅತಿದೊಡ್ಡ ಯೋಜನೆ ಇದಾಗಿದೆ. ರಾಜ್ಯದ ಮುಖ್ಯಮಂತ್ರಿಗಳು ಅಲ್ಲಿಗೆ ಭೇಟಿ ನೀಡಿ ರಾಜ್ಯದಲ್ಲೂ ಅದನ್ನು ಜಾರಿಗೆ ತರಲು ಗಂಭೀರ ಚಿಂತನೆ ನಡೆಸಬೇಕು’ ಎಂದರು.

‘ಬಿ.ಎಸ್‌.ಯಡಿಯೂರಪ್ಪನವರು ಭರವಸೆ ಕೊಟ್ಟಿರುವಂತೆ ರೈತ ಸಾಲ ಮನ್ನಾ ಮಾಡಬೇಕು. ಬ್ಯಾಂಕುಗಳಿಂದ ಮೇಲಿಂದ ಮೇಲೆ ರೈತರಿಗೆ ನೋಟಿಸ್‌ ಬರುತ್ತಿವೆ. ಇದರಿಂದ ಕಂಗಾಲಾಗಿರುವ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ಇದನ್ನು ತಡೆಯುವ ಕೆಲಸ ಮಾಡಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಸತತ ಏಳು ಗಂಟೆ ವಿದ್ಯುತ್‌ ಪೂರೈಸಬೇಕು’ ಎಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಎ. ಕುಮಾರಸ್ವಾಮಿ, ತಾಲ್ಲೂಕು ಅಧ್ಯಕ್ಷ ಗಂಟೆ ಸೋಮಶೇಖರ್‌, ಮುಖಂಡ ಎನ್‌. ಅಂಕ್ಲೇಶ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು