ಮಂಗಳವಾರ, ನವೆಂಬರ್ 19, 2019
29 °C

ಮದ್ಯ ಮಾರಾಟ ಕೇಂದ್ರದಿಂದ ದೇವರ ಹೆಸರು ಮುಕ್ತ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Published:
Updated:
prajavani

ಹೊಸಪೇಟೆ: ‘ರಾಜ್ಯದಲ್ಲಿನ ಎಲ್ಲಾ ಮದ್ಯ ಮಾರಾಟ ಕೇಂದ್ರಗಳಿಂದ ದೇವರ ಹೆಸರು ಮುಕ್ತಗೊಳಿಸಲು ಶೀಘ್ರದಲ್ಲೇ ಸುತ್ತೋಲೆ ಹೊರಡಿಸಲಾಗುವುದು’ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಬುಧವಾರ ಸಂಜೆ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮದ್ಯದ ಮಳಿಗೆಗಳಿಗೆ ದೇವರ ಹೆಸರುಗಳನ್ನು ಇಟ್ಟಿರುವುದನ್ನು ತೆಗೆದು ಹಾಕಬೇಕೆಂದು ಕೆಲವರು ಮನವಿ ಮಾಡಿದ್ದರು. ಅದಕ್ಕೆ ಪೂರಕವಾಗಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅಬಕಾರಿ ಹಾಗೂ ಕಾನೂನು ಇಲಾಖೆಯೊಂದಿಗೆ ಚರ್ಚಿಸಿದ ಬಳಿಕ ಸುತ್ತೋಲೆ ಹೊರಡಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.

‘ನೀರಾ ಇಳಿಸಲು ಕೆಲವರು ಮನವಿ ಮಾಡಿಕೊಂಡಿದ್ದಾರೆ. ರೈತರಿಗೆ, ಬಡವರಿಗೆ ಅನುಕೂಲವಾಗುವಂತೆ ನೀರಾಕ್ಕೆ ಅನುಮತಿ ಕೊಡುವುದರ ಬಗ್ಗೆ ಪರಿಶೀಲಿಸಿ, ಸೂಕ್ತ ಯೋಜನೆ ರೂಪಿಸಲಾಗುವುದು’ ಎಂದು ಹೇಳಿದರು.

‘ಹಂಪಿ ಸೇರಿದಂತೆ ಕೆಲವು ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರಬೇಕೆಂಬ ಸಲಹೆ ಇದೆ. ಆಯಾ ಜಿಲ್ಲೆಯ ಸ್ಥಿತಿಗತಿ, ಭಕ್ತಾದಿಗಳ ಭಾವನೆಗೆ ಧಕ್ಕೆ ಬರದ ರೀತಿಯಲ್ಲಿ, ಗೊಂದಲ ಇಲ್ಲದೇ ಜಾರಿಗೆ ತರುವುದರ ಬಗ್ಗೆ ಚಿಂತನೆ ನಡೆದಿದೆ’ ಎಂದರು. 

ಸರ್ಕಾರಕ್ಕೆ ಮುಜುಗರವಿಲ್ಲ: ‘ಟಿಪ್ಪು ಜಯಂತಿ ಆಚರಿಸಬಹುದು ಎಂದು ಹೈಕೋರ್ಟ್‌ ನೀಡಿರುವ ಆದೇಶದಿಂದ ಸರ್ಕಾರಕ್ಕೆ ಯಾವುದೇ ರೀತಿಯ ಮುಜುಗರವಾಗಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಜಯಂತಿ ರದ್ದುಗೊಳಿಸುವುದಾಗಿ ಹೇಳಿದ್ದೆವು. ಅದರಂತೆ ತೀರ್ಮಾನ ತೆಗೆದುಕೊಂಡಿದ್ದೇವೆ. ಹಿಂದಿನ ಸರ್ಕಾರ ಜಯಂತಿ ಮಾಡಿದಾಗ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು. ಅಂತಹ ಅನಾಹುತಗಳು ಆಗಬಾರದು. ಯಾರಾದರೂ ವೈಯಕ್ತಿಕವಾಗಿ ಜಯಂತಿ ಆಚರಿಸುವುದಾದರೆ ಅಭ್ಯಂತರವಿಲ್ಲ. ಆದರೆ, ಸರ್ಕಾರದಿಂದ ಆಚರಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪ್ರತಿಕ್ರಿಯಿಸಿ (+)