ಗುರುವಾರ , ಆಗಸ್ಟ್ 11, 2022
21 °C
ಸ್ವಯಂಪ್ರೇರಣೆಯಿಂದ ಬಂದ್‌ಗೆ ಬೆಂಬಲ ಸೂಚಿಸಿದ ಸಾರ್ವಜನಿಕರು

ಹೊಸಪೇಟೆಯಲ್ಲಿ ಬಂದ್‌ಗೆ ಉತ್ತಮ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಕೃಷಿಗೆ ಸಂಬಂಧಿಸಿದ ಮೂರು ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ದೇಶದ ವಿವಿಧ ರೈತ ಸಂಘಟನೆಗಳು ಕರೆ ಕೊಟ್ಟಿದ್ದ ಭಾರತ ಬಂದ್‌ಗೆ ಮಂಗಳವಾರ ನಗರದಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು.

ನಗರದಲ್ಲಿ ಮಂಗಳವಾರ ಬಹುತೇಕ ಮಳಿಗೆ, ಹೋಟೆಲ್‌ಗಳವರು ಬಾಗಿಲು ತೆರೆಯದೇ ಬಂದ್‌ಗೆ ಬೆಂಬಲ ಸೂಚಿಸಿದರು. ಅಲ್ಲಲ್ಲಿ ತೆರೆದಿದ್ದ ಕೆಲ ಮಳಿಗೆಗಳನ್ನು ಪ್ರತಿಭಟನಾಕಾರರು ಮುಚ್ಚಿಸಿದರು. ಸಾರಿಗೆ ಸಂಸ್ಥೆಯ ಬಸ್ಸುಗಳು ಎಂದಿನಂತೆ ಸಂಚರಿಸುತ್ತಿದ್ದವು. ಪ್ರತಿಭಟನಾಕಾರರು ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದ ನಂತರ ಸಂಚಾರ ಸ್ಥಗಿತಗೊಂಡಿತು. ಪರ ಊರುಗಳಿಗೆ ತೆರಳಬೇಕಿದ್ದವರು ನಿಲ್ದಾಣದಲ್ಲೇ ಕಾದು ಕುಳಿತಿದ್ದರು. ಬೆರಳೆಣಿಕೆಯಷ್ಟು ಆಟೊಗಳು ರಸ್ತೆಗಿಳಿದಿದ್ದವು. ರೈಲುಗಳ ಸಂಚಾರಕ್ಕೆ ಯಾವುದೇ ತೊಡಕು ಉಂಟಾಗಲಿಲ್ಲ.

ಬೆಳಿಗ್ಗೆ ನಗರದ ಸೋಗಿ ಮಾರುಕಟ್ಟೆ, ಎಪಿಎಂಸಿಯಲ್ಲಿ ಎಂದಿನಂತೆ ವಹಿವಾಟು ನಡೆಯಿತು. ಬೆಳಿಗ್ಗೆ 9ರ ನಂತರ ವಹಿವಾಟು ಸ್ಥಗಿತಗೊಂಡಿತು. ಬಂದ್‌ನಿಂದ ಹೆಚ್ಚಿನ ಜನ ಹೊರಬರಲಿಲ್ಲ. ಬಹುತೇಕ ರಸ್ತೆಗಳು ನಿರ್ಜನವಾಗಿದ್ದವು. ಎಂದಿನಂತೆ ದಿನಪತ್ರಿಕೆ, ಹಾಲು ಪೂರೈಕೆಯಾಯಿತು. ಮೆಡಿಕಲ್‌, ಆಸ್ಪತ್ರೆ, ಆಂಬುಲೆನ್ಸ್‌, ಪೆಟ್ರೋಲ್‌ ಬಂಕ್‌ ಸೇರಿದಂತೆ ಇತರೆ ತುರ್ತು ಸೇವೆಗಳಿದ್ದವು. ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ ಅಳವಡಿಸಿ, ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು. ಬಂದ್‌ ಶಾಂತಿಯುತವಾಗಿದ್ದರೂ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.

ನಗರದ ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನದ ಬಳಿ ಸೇರಿದ ಪ್ರತಿಭಟನಾಕಾರರು ಅಲ್ಲಿಂದ ಪ್ರಮುಖ ಮಾರ್ಗಗಳ ಮೂಲಕ ರೋಟರಿ ವೃತ್ತದ ವರೆಗೆ ರ್‍ಯಾಲಿ ನಡೆಸಿದರು. ರ್‍ಯಾಲಿಯುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಷಾ, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಮುಕೇಶ್‌ ಅಂಬಾನಿ, ಅದಾನಿ ವಿರುದ್ಧ ಘೋಷಣೆ ಕೂಗಿದರು. ನಂತರ ಅವರ ಭಾವಚಿತ್ರಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಡಾ.ಬಿ.ಆರ್‌. ಅಂಬೇಡ್ಕರ್‌ ಸಂಘ, ದಲಿತ ಹಕ್ಕುಗಳ ಸಮಿತಿ, ಡಿವೈಎಫ್‌ಐ, ಎಸ್‌ಎಫ್‌ಐ, ಸಿಐಟಿಯು, ದೇವದಾಸಿಯರ ಸಂಘ, ತಾಲ್ಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷ, ವಿಜಯನಗರ ಆಟೊ ಚಾಲಕರ ಸಂಘ, ಆಟೊ ಯೂನಿಯನ್‌ ಬಂದ್‌ಗೆ ಬೆಂಬಲ ಸೂಚಿಸಿ ಅದರ ಮುಖಂಡರು ಪಾಲ್ಗೊಂಡಿದ್ದರು. ಬಿಎಸ್‌ಎನ್‌ಎಲ್‌ ನೌಕರರು, ಬ್ಯಾಂಕ್‌ ಯೂನಿಯನ್‌ನವರು ಬಂದ್‌ಗೆ ನೈತಿಕ ಬೆಂಬಲ ಸೂಚಿಸಿದ್ದರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್‌ ಮಾತನಾಡಿ, ‘ರೈತರು ನಡೆಸುತ್ತಿರುವ ಹೋರಾಟಕ್ಕೆ ಜಗತ್ತಿನ ವಿವಿಧ ದೇಶಗಳಲ್ಲಿ ನೆಲೆಸಿರುವ ಭಾರತೀಯರು, ಅಲ್ಲಿನವರು ಬೆಂಬಲ ಸೂಚಿಸಿದ್ದಾರೆ. ಆದರೆ, ನಮ್ಮ ಪ್ರಧಾನಿ ಅನ್ನದಾತರ ನೋವಿಗೆ ಸ್ಪಂದಿಸುತ್ತಿಲ್ಲ. ಬದಲಾಗಿ ರೈತರನ್ನು ಹತ್ತಿಕ್ಕಲು ಅವರ ವಿರುದ್ಧ ಯೋಧರನ್ನು ಬಳಸುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ’ ಎಂದು ಟೀಕಿಸಿದರು.

‘ಕೇಂದ್ರ ಬಿಜೆಪಿ ಸರ್ಕಾರ ರೈತರ ಪರವಲ್ಲ, ಕಾರ್ಪೊರೇಟ್‌ ಪರವಾದ ಸರ್ಕಾರ ಎನ್ನುವುದನ್ನು ತೋರಿಸಿಕೊಟ್ಟಿದೆ. ರೈತರ ಹಿತ ಬಲಿಕೊಟ್ಟು ಕಾರ್ಪೊರೇಟ್‌ ಕಂಪನಿಗಳಿಗೆ ಅನುಕೂಲವಾಗುವ ಕಾಯ್ದೆಗಳನ್ನು ತಂದು, ರೈತರಿಗೆ ಮರಣ ಶಾಸನ ಬರೆದಿದೆ. ಕೃಷಿ ಕಾಯ್ದೆಗಳನ್ನು ಹಿಂಪಡೆಯುವವರೆಗೆ ಹೋರಾಟ ಮುಂದುವರೆಯಲಿದೆ’ ಎಂದು ತಿಳಿಸಿದರು.

ಕಾಂಗ್ರೆಸ್‌ ಮುಖಂಡ ದೀಪಕ್‌ ಸಿಂಗ್‌ ಮಾತನಾಡಿ, ‘ವಾಸ್ತವದಲ್ಲಿ ಹೇಳಬೇಕೆಂದರೆ ಹೊಸಪೇಟೆಯಲ್ಲಿ ರೈತರೇ ಇಲ್ಲ. ಒಂದುವೇಳೆ ಇದ್ದಿದ್ದರೆ ಇಷ್ಟೆಲ್ಲ ನಡೆಯುತ್ತಿದ್ದರೂ ಸುಮ್ಮನಿರುತ್ತಿರಲಿಲ್ಲ. ಐಎಸ್‌ಆರ್‌ ಕಾರ್ಖಾನೆ ಮುಚ್ಚಿ ಏಳು ವರ್ಷಗಳಾಗಿವೆ. ಒಬ್ಬ ರೈತರು ಅದರ ವಿರುದ್ಧ ಧ್ವನಿ ಎತ್ತಿಲ್ಲ’ ಎಂದು ಟೀಕಿಸಿದರು.

‘ಕಂಡಕ್ಟರ್‌ ಆಗಿದ್ದವರು ಕೋಟ್ಯಧಿಪತಿ’

ಹೊಸಪೇಟೆ: ‘ಈ ದೇಶದಲ್ಲಿ ಇಬ್ಬರು ಬಸ್‌ ಕಂಡಕ್ಟರ್‌ಗಳು ಕೋಟ್ಯಧಿಪತಿಗಳಾಗಿದ್ದಾರೆ. ಒಬ್ಬರು ನಟ ರಜನಿಕಾಂತ್‌, ಇನ್ನೊಬ್ಬರು ಅರಣ್ಯ ಸಚಿವ ಆನಂದ್‌ ಸಿಂಗ್. ಇವರಿಬ್ಬರೂ ಈ ಹಿಂದೆ ಬಸ್‌ ಕಂಡಕ್ಟರ್‌ಗಳಾಗಿದ್ದವರು. ಸಿಂಗ್‌ ಅವರು ಹಂಪಿ ವಿರೂಪಾಕ್ಷನ ದಯೆಯಿಂದ ಕೋಟ್ಯಧಿಪತಿ ಆಗಿರಬಹುದು ಅಂದುಕೊಂಡಿದ್ದೆ. ಆದರೆ, ನಿವೃತ್ತ ಲೋಕಾಯುಕ್ತ ಸಂತೋಷ್‌ ಹೆಗಡೆ ಅವರ ಪುಸ್ತಕ ಓದಿದ ನಂತರ ಅವರು ಹೇಗೆ ಕೋಟ್ಯಧಿಪತಿಯಾದರು ಎನ್ನುವುದು ಗೊತ್ತಾಯಿತು’ ಎಂದು ದಲಿತ ಹಕ್ಕುಗಳ ಸಮಿತಿ ಮುಖಂಡ ಮರಡಿ ಜಂಬಯ್ಯ ನಾಯಕ ವ್ಯಂಗ್ಯವಾಡಿದರು.

‘ನಾಲ್ಕು ಸಲ ಶಾಸಕರಾಗಿ ಆಯ್ಕೆಯಾಗಿರುವ ಆನಂದ್‌ ಸಿಂಗ್‌ ಅವರು ಇತ್ತೀಚೆಗೆ ಬಡ ಹೆಣ್ಣು ಮಕ್ಕಳಿಗೆ ಸೀರೆ ಹಂಚಿ ಅವರನ್ನು ಹಂಗಿಸುವ ಕೆಲಸ ಮಾಡಿದ್ದಾರೆ. ನೀವು ಶ್ರೀಮಂತ ಎನ್ನುವುದು ಗೊತ್ತು. ಆದರೆ, ಈ ರೀತಿ ಬಡವರಿಗೆ ಅವಮಾನಿಸುವುದು ಸರಿಯಲ್ಲ. ಸ್ಥಳೀಯ ರೈತರು ಹೋರಾಟ ನಡೆಸುತ್ತಿದ್ದರು. ನಮ್ಮ ‘ಚಕ್ರವರ್ತಿ’ ಯಡಿಯೂರಪ್ಪ ಬೆನ್ನಿಗೆ ನಿಂತಿರುವುದು ದುರದೃಷ್ಟಕರ’ ಎಂದು ಹೇಳಿದರು.

‘ತುಘಲಕ್‌ ಆಡಳಿತ’

‘ತುಘಲಕ್‌ ಆಡಳಿತದ ಬಗ್ಗೆ ಓದಿ ತಿಳಿದುಕೊಂಡಿದ್ದೆವು. ಆದರೆ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಂದ ಮೇಲೆ ಅದನ್ನು ನೋಡುತ್ತಿದ್ದೇವೆ’ ಎಂದು ಡಾ.ಬಿ.ಆರ್‌. ಅಂಬೇಡ್ಕರ್‌ ಸಂಘದ ಅಧ್ಯಕ್ಷ ಎಂ.ಸಿ. ವೀರಸ್ವಾಮಿ ಹೇಳಿದರು.

‘ಈ ದೇಶದ ರೈತರು ಬಹಳ ಕಷ್ಟದಲ್ಲಿದ್ದಾರೆ. ಎರಡು ವಾರಗಳಿಂದ ರೈತರು ವಿಪರೀತ ಚಳಿಯಲ್ಲಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಕಷ್ಟ ಸುಖ ಆಲಿಸುವ ಬದಲು ಕೇಂದ್ರ ಗೃಹ ಸಚಿವ ಸೇರಿದಂತೆ ಬಿಜೆಪಿಯ ಪ್ರಮುಖ ಮುಖಂಡರು ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ಪ್ರಚಾರದಲ್ಲಿ ಮಗ್ನರಾಗಿದ್ದರು. ಇದು ಅವರ ಆಡಳಿತದ ವೈಖರಿ ತೋರಿಸಿಕೊಡುತ್ತದೆ’ ಎಂದರು.

***

ದೇಶಕ್ಕೆ ಅನ್ನ ಕೊಡುವ ರೈತರಿಗೆ ಹೇಡಿಗಳೆಂದು ಅಪಮಾನಿಸಿರುವ ಕೃಷಿ ಸಚಿವ ಬಿ.ಸಿ. ಪಾಟೀಲರು ₹40 ಕೋಟಿ ಪಡೆದು ಬಿಜೆಪಿಗೆ ಪಕ್ಷಾಂತರ ಆದ ನೀವು ಹೇಡಿ.
–ಜೆ. ಕಾರ್ತಿಕ್‌, ರಾಜ್ಯ ಪ್ರಧಾನ ಕಾರ್ಯದರ್ಶಿ, ರೈತ ಸಂಘ

***

ರೈತರು, ಕಾರ್ಮಿಕರು ಈ ದೇಶದ ಎರಡು ಕಣ್ಣುಗಳಿದ್ದಂತೆ. ಆದರೆ, ಕೇಂದ್ರ ಸರ್ಕಾರ ಆ ಎರಡೂ ಕಣ್ಣುಗಳನ್ನು ತೆಗೆಯಲು ಹೊರಟಿರುವುದು ಸರಿಯಲ್ಲ.
–ಭಾಸ್ಕರ್‌ ರೆಡ್ಡಿ, ಜಿಲ್ಲಾ ಅಧ್ಯಕ್ಷ, ಸಿಐಟಿಯು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು