ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದಿಂದ ಭಗತ್‌ಸಿಂಗ್‌ ಕನಸು ನಾಶ: ಬಿಸಾಟಿ ಮಹೇಶ್‌ ಆರೋಪ

Last Updated 27 ಸೆಪ್ಟೆಂಬರ್ 2020, 12:10 IST
ಅಕ್ಷರ ಗಾತ್ರ

ಹೊಸಪೇಟೆ: ‘ಸಾಮ್ರಾಜ್ಯಷಾಹಿ, ಭೂಮಾಲೀಕರಿಂದ ಮುಕ್ತವಾದ ನವಸಮಾಜ ನಿರ್ಮಾಣವಾಗಬೇಕೆಂಬ ಕ್ರಾಂತಿಕಾರಿ ಭಗತ್‌ ಸಿಂಗ್‌ ಅವರ ಕನಸನ್ನು ನಮ್ಮನ್ನಾಳುತ್ತಿರುವ ಸರ್ಕಾರಗಳೇ ನಾಶ ಮಾಡುತ್ತಿವೆ’ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್‌ (ಡಿವೈಎಫ್‌ಐ) ರಾಜ್ಯ ಘಟಕದ ಉಪಾಧ್ಯಕ್ಷ ಬಿಸಾಟಿ ಮಹೇಶ್‌ ಆರೋಪಿಸಿದರು.

ಫೆಡರೇಶನ್‌ನಿಂದ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಹುತಾತ್ಮ ಭಗತ್‌ಸಿಂಗ್‌ ಅವರ 114ನೇ ಜನ್ಮದಿನವನ್ನು ಉದ್ಘಾಟಿಸಿ ಮಾತನಾಡಿದರು.

‘ಬ್ರಿಟೀಷ್‌ ಈಸ್ಟ್‌ ಇಂಡಿಯಾ ಕಂಪೆನಿ ಯಾವ ರೀತಿ ಜನರ ಮೇಲೆ ದೌರ್ಜನ್ಯ ಎಸಗಿ ಇಲ್ಲಿನ ಸಂಪನ್ಮೂಲವನ್ನು ಕೊಳ್ಳೆ ಹೊಡೆದುಕೊಂಡು ಹೋಗಿತ್ತೋ ಅದೇ ರೀತಿಯಲ್ಲಿ ಇಂದಿನ ಸರ್ಕಾರ ಬಂಡವಾಳಷಾಹಿಗಳಿಗೆ ಮಣೆ ಹಾಕಿ ಅವರಿಗೆ ಎಲ್ಲ ರೀತಿಯ ನೆರವು ನೀಡುತ್ತಿದೆ. ಯಾವ ಭಗತ್‌ ಸಿಂಗ್‌ ಬ್ರಿಟಿಷರ ವಿರುದ್ಧ, ಅವರ ನೀತಿಗಳ ವಿರುದ್ಧ ಹೋರಾಡಿದ್ದರೋ ಅದೇ ರೀತಿ ಇಂದಿನ ಯುವಜನರು ಸರ್ಕಾರದ ವಿರುದ್ಧ ಸಿಡಿದೇಳಬೇಕಿದೆ. ದೇಶದ ಸಾರ್ವಭೌಮತೆ, ಐಕ್ಯತೆ, ಸಮಗ್ರತೆ, ಸೌಹಾರ್ದತೆ ಕಾಪಾಡಲು ಕಂಕಣಬದ್ಧರಾಗಬೇಕು’ ಎಂದು ಹೇಳಿದರು.

ದಲಿತ ಹಕ್ಕುಗಳ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಮರಡಿ ಜಂಬಯ್ಯ ನಾಯಕ, ‘ದೇಶದ ಯುವಜನರನ್ನು ದಾರಿ ತಪ್ಪಿಸಲು ಸಿನಿಮಾ ನಟರು, ಉದ್ಯಮಿಗಳು, ರಾಜಕೀಯ ಪುಡಾರಿಗಳನ್ನು ಆದರ್ಶವಾಗಿ ಬಿಂಬಿಸಲಾಗುತ್ತಿದೆ. ಈ ದೇಶ ಅನೇಕ ಕ್ರಾಂತಿಕಾರಿಗಳ, ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದಿಂದ ಕಟ್ಟಲಾಗಿದೆ. ಅವರು ಯುವಜನತೆಯ ನಿಜವಾದ ಆದರ್ಶ’ ಎಂದು ತಿಳಿಸಿದರು.

‘ಯುವಕರು ಮೌನ ತೊರೆದು ಧ್ವನಿ ಎತ್ತಬೇಕು. ಜನವಿರೋಧಿ ನೀತಿಗಳನ್ನು ತಡೆಯಲು ಮುಂದೆ ಬರಬೇಕು. ಭಗತ್‌ಸಿಂಗ್‌ ಅವರ ಆದರ್ಶದ ಹಾದಿಯಲ್ಲಿ ಮುನ್ನಡೆಯಬೇಕು’ ಎಂದರು.

ಸಮುದಾಯ ಸಂಘಟನೆಯ ಎ.ಕರುಣಾನಿಧಿ ಕ್ರಾಂತಿಗೀತೆ ಹಾಡಿದರು. ಡಿವೈಎಫ್ಐ ಜಿಲ್ಲಾ ಅಧ್ಯಕ್ಷ ವಿ. ಸ್ವಾಮಿ, ತಾಲ್ಲೂಕು ಅಧ್ಯಕ್ಷ ಈ.ಮಂಜುನಾಥ, ತಾಲ್ಲೂಕು ಕಾರ್ಯದರ್ಶಿ ಕಲ್ಯಾಣಯ್ಯ, ಸಾಂಸ್ಕೃತಿಕ ಕಾರ್ಯದರ್ಶಿ ಕೆ.ರಮೇಶ್, ಬಂಡೆ ತಿರುಕಪ್ಪ, ಪವನ್‍ಕುಮಾರ್, ಕಿನ್ನಾಳ್ ಹನುಮಂತ, ಬಿ.ಟಿ.ಸೂರ್ಯಕಿರಣ್, ವಿಜಯ್, ಬಿಸಾಟಿ ತಾಯಪ್ಪ ನಾಯಕ, ಬಿ.ರಾಜು, ಸಿದ್ದಲಿಂಗಪ್ಪ, ಹನುಮ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT