ಶನಿವಾರ, ಸೆಪ್ಟೆಂಬರ್ 25, 2021
26 °C
ಅನುದಾನ ನೀಡದೆ ಪಕ್ಷಪಾತ: ಪರಮೇಶ್ವರನಾಯ್ಕ

ಸರ್ಕಾರದಿಂದ ಸೇಡಿನ ರಾಜಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೂವಿನಹಡಗಲಿ: ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಅನುದಾನ ನೀಡದೇ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಆರೋಪಿಸಿದರು.

ತಾಲ್ಲೂಕಿನ ಹಿರೇಮಲ್ಲನಕೆರೆ ಗ್ರಾಮದಲ್ಲಿ ಶನಿವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ₹ 40 ಲಕ್ಷ ವೆಚ್ಚದ ಗೋದಾಮು ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಎರಡು ವರ್ಷದಿಂದ ಕೆಕೆಆರ್‌ಡಿಬಿ ಹಾಗೂ ಜಿಲ್ಲಾ ಖನಿಜ ಪ್ರತಿಷ್ಠಾನ ಅನುದಾನ ಹೊರತುಪಡಿಸಿ ಕ್ಷೇತ್ರಕ್ಕೆ ಯಾವ ಅನುದಾನವೂ ಬಂದಿಲ್ಲ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಸರ್ಕಾರ ಉದ್ದೇಶಪೂರ್ವವಾಗಿ ಅನುದಾನ ನೀಡುತ್ತಿಲ್ಲ. ಅಭಿವೃದ್ಧಿಯಲ್ಲಿ ಪಕ್ಷಪಾತ ಮಾಡುತ್ತಿರುವ ಬಿಜೆಪಿಯವರಿಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು ಎಂದು ಹೇಳಿದರು.

‘ರೈತಪರ ಎಂದು ಹೇಳುತ್ತಲೇ ಕೇಂದ್ರ, ರಾಜ್ಯ ಸರ್ಕಾರಗಳು ರೈತರನ್ನು ಶೋಷಣೆ ಮಾಡುತ್ತಿವೆ. ಸಕಾಲದಲ್ಲಿ ಬೀಜ, ಗೊಬ್ಬರ ನೀಡದೇ ಅಲೆದಾಡುವಂತೆ ಮಾಡಿವೆ. ಕೃಷಿ ಉತ್ಪನ್ನಗಳ ಬೆಲೆ ಕುಸಿದಿದ್ದರೆ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ರೈತರು, ಬಡವರ ಸ್ಥಿತಿಯನ್ನು ಸರ್ಕಾರ ಶೋಚನೀಯವಾಗಿಸಿದೆ ಎಂದು ಟೀಕಿಸಿದರು.

ಇಲ್ಲಿನ ಸಹಕಾರ ಸಂಘವು ₹ 18 ಕೋಟಿ ಕೃಷಿ ಸಾಲ ನೀಡಿ ರೈತರಿಗೆ ನೆರವಾಗಿದೆ. ರೈತರು ಸಕಾಲದಲ್ಲಿ ಸಾಲ ಮರುಪಾವತಿಸಿ ಸಹಕಾರಿಯ ಬೆಳವಣಿಗೆಗೆ ಸಹಕರಿಸಬೇಕು. ಹಿರೇಮಲ್ಲನಕೆರೆ ಮತ್ತು ಮೋರಿಗೇರಿಯಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ತಲಾ ₹ 50 ಲಕ್ಷ ಮಂಜೂರಾಗಿದೆ ಎಂದು ತಿಳಿಸಿದರು.

ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಹನುಮಂತಪ್ಪ ಮಾತನಾಡಿ, ಸಹಕಾರಿ ಸ್ಥಾಪನೆಯಾಗಿ ನಾಲ್ಕು ದಶಕ ಕಳೆದರೂ ಒಮ್ಮೆಯೂ ಚುನಾವಣೆ ನಡೆದಿಲ್ಲ. ಅವಿರೋಧ ಆಯ್ಕೆ ಮೂಲಕ ಸದಸ್ಯರು ಸಹಕಾರಿಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಹೇಳಿದರು.

ಸಹಕಾರಿಯ ಅಧ್ಯಕ್ಷ ಎಂ.ದಿವಾಕರ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷ ವಾರದ ಗೌಸ್ ಮೊಹಿದ್ದೀನ್, ಗ್ರಾ.ಪಂ. ಅಧ್ಯಕ್ಷರಾದ ಶಿವಾನಂದ, ವನಜಾಕ್ಷಮ್ಮ, ಖೇಮಣಿಬಾಯಿ, ಮುಖಂಡರಾದ ಅಟವಾಳಗಿ ಕೊಟ್ರೇಶ, ಎಲ್.ಚಂದ್ರನಾಯ್ಕ, ಜಿ.ವಸಂತ, ಬೀರಪ್ಪ, ಸಹಕಾರಿಯ ಮುಖ್ಯ ಕಾರ್ಯನಿರ್ವಾಹಕ ರಾಮಣ್ಣ, ಭರಮಲಿಂಗಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು