ರಾಜ್ಯದಲ್ಲಿ ಸರ್ಕಾರ ಇದೆಯೇ?: ಕೇಂದ್ರ ಸಚಿವ ರಮೇಶ್‌ ಜಿಗಜಿಣಗಿ

7
ಬಳ್ಳಾರಿ ಲೋಕಸಭೆ ಉಪಚುನಾವಣೆ ಪೂರ್ವಸಿದ್ಧತಾ ಸಭೆ

ರಾಜ್ಯದಲ್ಲಿ ಸರ್ಕಾರ ಇದೆಯೇ?: ಕೇಂದ್ರ ಸಚಿವ ರಮೇಶ್‌ ಜಿಗಜಿಣಗಿ

Published:
Updated:
Deccan Herald

ಹೊಸಪೇಟೆ: ‘ರಾಜ್ಯದಲ್ಲಿ ನಿಜವಾಗಲೂ ಸರ್ಕಾರ ಇದೆಯೇ?’

ಹೀಗೆ ಪ್ರಶ್ನಿಸಿದವರು ಕೇಂದ್ರ ನಗರ ನೀರು ಮತ್ತು ಒಳಚರಂಡಿ ಖಾತೆ ರಾಜ್ಯ ಸಚಿವ ರಮೇಶ್‌ ಜಿಗಜಿಣಗಿ. ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ ಬಳ್ಳಾರಿ ಲೋಕಸಭೆ ಉಪಚುನಾವಣೆ ಬಿಜೆಪಿ ಪೂರ್ವಸಿದ್ಧತಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದ ಹಲವೆಡೆ ಭೀಕರ ಬರವಿದ್ದರೂ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸ್ಪಂದಿಸುತ್ತಿಲ್ಲ. ಒಮ್ಮೆ ಕೂಡ ಬರಪೀಡಿತ ಪ್ರದೇಶಗಳಿಗೆ ತೆರಳಿ ಪರಿಶೀಲನೆ ಮಾಡಿಲ್ಲ. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಇಂತಹುದೇ ಪರಿಸ್ಥಿತಿ ಸೃಷ್ಟಿಯಾಗಿತ್ತು. ಯಾವ ಸಚಿವರು ಕೂಡ ಕ್ಷೇತ್ರ ಬಿಟ್ಟು ಬೆಂಗಳೂರಿಗೆ ಬರಬಾರದು. ಅಲ್ಲೇ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸೂಚಿಸಿದ್ದರು. ಆದರೆ, ಈಗಿನ ಸರ್ಕಾರ ಸೂಕ್ಷ್ಮತೆಯನ್ನೇ ಕಳೆದುಕೊಂಡಿದೆ’ ಎಂದು ಟೀಕಿಸಿದರು.

‘ದೇಶದಲ್ಲಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಬಳ್ಳಾರಿ ಜಿಲ್ಲೆಯಲ್ಲೂ ಅದನ್ನು ಕಾಣಬಹುದು. ಈ ವಿಷಯವನ್ನು ಜನರಿಗೆ ತಿಳಿಸಬೇಕು. ಈ ಚುನಾವಣೆ ಇಡೀ ದೇಶಕ್ಕೆ ದಿಕ್ಸೂಚಿಯಾಗಿದೆ. ಕಾರ್ಯಕರ್ತರು ನಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು. ನಾನು ನಿಮ್ಮೊಂದಿಗೆ ಪ್ರಚಾರಕ್ಕೆ ಬರುತ್ತೇನೆ’ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ ಮಾತನಾಡಿ, ‘ಬಳ್ಳಾರಿ, ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದು ಶತಃಸಿದ್ಧ. ಮಂಡ್ಯದಲ್ಲಿ ಈ ಸಲ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ರಾಮನಗರದಲ್ಲಿ ಆಶ್ಚರ್ಯಕರ ಫಲಿತಾಂಶ ಬರಬಹುದು. ಜಮಖಂಡಿಯಲ್ಲಿ 20 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಬಿಜೆಪಿ ಗೆಲುವು ಸಾಧಿಸಲಿದೆ’ ಎಂದು ಭವಿಷ್ಯ ನುಡಿದರು.

‘ಈ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಮೂಲಕ 2019ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುನ್ನುಡಿ ಬರೆಯುವವರು. ನರೇಂದ್ರ ಮೋದಿಯವರು ಮತ್ತೆ ದೇಶದ ಪ್ರಧಾನಿಯಾಗುವರು’ ಎಂದರು.

’ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 44 ಸ್ಥಾನಗಳಲ್ಲಿ ಜಯಿಸಿತ್ತು. ಬರುವ ಚುನಾವಣೆಯಲ್ಲಿ ಅದಕ್ಕಿಂತ ಕಡಿಮೆ ಸ್ಥಾನಗಳನ್ನು ಗೆಲ್ಲಲಿದೆ. ಮಹಾಘಟ್‌ಬಂಧನ್‌ ಮಹಾ ಸಮಸ್ಯೆಯಾಗಿದೆ ಎಂದು ಜೆ.ಡಿ.ಎಸ್‌. ವರಿಷ್ಠ ಎಚ್‌.ಡಿ. ದೇವೇಗೌಡರೇ ಹೇಳಿದ್ದಾರೆ. ಮಾಯವತಿ, ಅಖಿಲೇಶ್‌ ಯಾದವ್‌ ಅವರು ಕಾಂಗ್ರೆಸ್‌ ಜತೆ ಕೈಜೋಡಿಸಲು ನಿರಾಕರಿಸಿದ್ದಾರೆ. ಇದು ಕಾಂಗ್ರೆಸ್‌ನ ದಯನೀಯ ಸ್ಥಿತಿ ತೋರಿಸುತ್ತದೆ’ ಎಂದು ವ್ಯಂಗ್ಯವಾಡಿದರು.

ಶಾಸಕ ಬಿ. ಶ್ರೀರಾಮುಲು ಮಾತನಾಡಿ, ‘ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ. ಬಳ್ಳಾರಿಯ ಕಾಂಗ್ರೆಸ್‌ ಶಾಸಕರು ಸಿದ್ದರಾಮಯ್ಯನವರು ಕರೆದ ಸಭೆಗೆ ಹೋಗುತ್ತಾರೆ. ಆದರೆ, ಡಿ.ಕೆ. ಶಿವಕುಮಾರ ಅವರು ಕರೆದರೆ ಹೋಗುವುದಿಲ್ಲ. ಶಿವಕುಮಾರ ಅವರಿಗೆ ಕನಕಪುರದಲ್ಲಿ ರಾಜಕಾರಣ ಮಾಡಲು ಆಗುತ್ತಿಲ್ಲ. ಈಗ ಬಳ್ಳಾರಿಯಲ್ಲಿ ಮಾಡಲು ಹೊರಟಿದ್ದಾರೆ’ ಎಂದರು.

‘ಜಿಲ್ಲೆಯಲ್ಲಿ ಆರು ಜನ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ, ಸಮ್ಮಿಶ್ರ ಸರ್ಕಾರದಲ್ಲಿ ಒಬ್ಬರಿಗೂ ಸಚಿವ ಸ್ಥಾನ ನೀಡಿಲ್ಲ. ಇಲ್ಲಿ ಯಾರೂ ನಾಯಕರು ಇಲ್ಲವೇ? ಕನಕಪುರದ ಡಿ.ಕೆ. ಶಿವಕುಮಾರ ಅವರಿಗೆ ಸಚಿವ ಸ್ಥಾನ ನೀಡಿ, ಜಿಲ್ಲೆಯ ಉಸ್ತುವಾರಿ ವಹಿಸಲಾಗಿದೆ. ಹೀಗಿರುವಾಗ ಕಾಂಗ್ರೆಸ್‌ ಯಾವ ನೈತಿಕತೆಯಿಂದ ಚುನಾವಣೆಯಲ್ಲಿ ಮತ ಕೇಳುತ್ತದೆ’ ಎಂದು ಶಾಸಕ ವಿ. ಸೋಮಣ್ಣ ಪ್ರಶ್ನಿಸಿದರು.

ಶಾಸಕ ರಾಮಣ್ಣ ಲಮಾಣಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ, ಬಿಜೆಪಿ ಅಭ್ಯರ್ಥಿ ಜೆ. ಶಾಂತಾ, ಮುಖಂಡರಾದ ಗುರುಲಿಂಗನಗೌಡ, ವಿರೂಪಾಕ್ಷ ಗೌಡ, ಮಹಿಪಾಲ್‌, ಹನುಮಂತಪ್ಪ, ಫಕೀರಪ್ಪ, ಚಂದ್ರ ನಾಯ್ಕ, ಮೃತ್ಯುಂಜಯ ಜಿನಗಾ, ರಾಣಿ ಸಂಯುಕ್ತಾ, ಅನಂತ ಸ್ವಾಮಿ, ಪರಶುರಾಮ ಗುದ್ಲಿ, ಕಿಶೋರ ಪತ್ತಿಕೊಂಡ, ಶಂಕರ್‌ ಮೇಟಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !