ಶನಿವಾರ, ಸೆಪ್ಟೆಂಬರ್ 21, 2019
24 °C

ಪರಿಸರ ಸಂರಕ್ಷಣೆಗೆ ‘ಗ್ರೀನ್‌ ಆರ್ಮಿ’

Published:
Updated:
Prajavani

ಹೊಸಪೇಟೆ: ‘ಪರಿಸರ ಸಂರಕ್ಷಣೆಯ ಉದ್ದೇಶದಿಂದ ಸಮಾನ ಮನಸ್ಕರು ಸೇರಿಕೊಂಡು ‘ಗ್ರೀನ್‌ ಆರ್ಮಿ ಅಸೋಸಿಯೇಷನ್‌’ಗೆ ಚಾಲನೆ ಕೊಡಲಾಗಿದೆ’ ಎಂದು ಸಂಘದ ರಾಜ್ಯ ಅಧ್ಯಕ್ಷ ಡಿ.ಜೆ. ಮಂಜುನಾಥ ತಿಳಿಸಿದರು.

ಇಲ್ಲಿನ ವಡಕರಾಯ ದೇವಸ್ಥಾನದ ಬಳಿ ಕರ್ನಾಟಕ ರಾಜ್ಯ ಗ್ರೀನ್ ಆರ್ಮಿ ಅಸೋಸಿಯೇಷನ್‌ನಿಂದ ಗುರುವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಈಗಿರುವಂತಹ ಗಿಡ, ಮರಗಳನ್ನು ಸಂರಕ್ಷಿಸಬೇಕು. ನಗರದ ಎಲ್ಲ ರಸ್ತೆಗಳ ಬದಿಯಲ್ಲಿ ಸಸಿಗಳನ್ನು ನೆಟ್ಟು ನೀರುಣಿಸಲಾಗುವುದು. ನಂತರ ಹಂತ ಹಂತವಾಗಿ ಪರಿಸರ ಜಾಗೃತಿ ಮೂಡಿಸಲಾಗುವುದು. ‘ನಮ್ಮ ನಡೆ ಹಸಿರು ಕರ್ನಾಟಕ ಕಡೆ’ ಎಂಬ ಘೋಷವಾಕ್ಯದೊಂದಿಗೆ ಯುವಕರ ತಂಡ ಕೆಲಸ ನಿರ್ವಹಿಸಲಿದೆ’ ಎಂದು ಹೇಳಿದರು.

‘ಪರಿಸರವನ್ನು ನಾಶ ಮಾಡುತ್ತಿರುವ ಕಾರಣ ತಾಪಮಾನದಲ್ಲಿ ಏರಿಕೆಯಾಗಿದೆ. ಶುದ್ಧ ಗಾಳಿ, ನೀರು ಸಿಗುತ್ತಿಲ್ಲ. ಈಗಲಾದರೂ ಎಚ್ಚೆತ್ತುಕೊಂಡು ಪರಿಸರ ಸಂರಕ್ಷಿಸಬೇಕು’ ಎಂದು ವಕೀಲ ಬಿ.ಸಿ. ಮಹಾಂತೇಶ್‌ ತಿಳಿಸಿದರು.

‘ಈ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆ. ಹೀಗಾಗಿ ಹೆಚ್ಚೆಚ್ಚೂ ಗಿಡ, ಮರಗಳನ್ನು ಬೆಳೆಸಬೇಕು. ಪ್ರತಿಯೊಬ್ಬರೂ ಮನೆಯ ಅಂಗಳದಲ್ಲಿ ಗಿಡ, ಮರಗಳನ್ನು ಬೆಳೆಸುವ ರೂಢಿ ಬೆಳೆಸಿಕೊಳ್ಳಬೇಕು. ನಮ್ಮ ಸುತ್ತಮುತ್ತಲಿನ ವಾತಾವರಣ ಹಸಿರಾಗುವಂತೆ ನೋಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಅಸೋಸಿಯೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಮಾರುತೇಶ, ಗೌರವ ಅಧ್ಯಕ್ಷ ಎ.ಶಾಂತಕುಮಾರ್, ಉಪಾಧ್ಯಕ್ಷರಾದ ಜೆ.ಕುಬೇರ, ರೋಹಿತ್ ನಾಯರ್, ಜಿ.ಶಂಕರ, ಸಂಘಟನಾ ಕಾರ್ಯದರ್ಶಿ ಎಚ್.ಆನಂದ, ಅರಣ್ಯ ಇಲಾಖೆ ಅಧಿಕಾರಿ ಎಲ್.ರಾಮುಲು ಇದ್ದರು.

Post Comments (+)