ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು–ಕಾಶ್ಮೀರದ ಬಕ್ರೆವಾಲಾ ಎಂಬ ದಲಿತರು

Last Updated 13 ಏಪ್ರಿಲ್ 2018, 6:46 IST
ಅಕ್ಷರ ಗಾತ್ರ

ಜಮ್ಮು ಮತ್ತು ಕಾಶ್ಮೀರ :  ‘ಜಮ್ಮುವಿನ ಕಠುವಾ ಜಿಲ್ಲೆಯ ರಸ್ಸಾನಾದಲ್ಲಿ ನೆಲೆಸಿದ್ದ ಬಕ್ರೆವಾಲಾ ಅಲೆಮಾರಿ ಜನರನ್ನು ಅಲ್ಲಿಂದ ಓಡಿಸುವ ಉದ್ದೇಶದಿಂದ, ಆ ಸಮುದಾಯಕ್ಕೆ ಸೇರಿದ 8 ವರ್ಷದ ಬಾಲಕಿ ಮೇಲೆ ಸ್ಥಳೀಯ ಗುಂಪು ಅತ್ಯಾಚಾರ ನಡೆಸಿ, ಆಕೆಯನ್ನು ಕೊಂದಿದೆ’ ಎಂದು ಜಮ್ಮು ಮತ್ತು ಕಾಶ್ಮೀರದ ಅಪರಾಧ ವಿಭಾಗದ ಪೊಲೀಸರು ಇಲ್ಲಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

ಈ ಬಕ್ರೆವಾಲಾ ಸಮುದಾಯದ ಸ್ಥಿತಿ ಗತಿ ಕುರಿತು ದಿ ಪ್ರಿಂಟ್‌  ವರದಿ ಮಾಡಿದೆ.

ಬಕ್ರೆವಾಲಾ ಸಮುದಾಯಕ್ಕೆ ಸೇರಿದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಂದು ಹಾಕಿದ ಬಳಿಕ ಈ ಪ್ರದೇಶದಲ್ಲಿ ಕೋಮ ಘರ್ಷಣೆ ಉಂಟಾಗುವ ವಾತಾವರಣ ಸೃಷ್ಟಿಯಾಗಿದೆ. ‘ಆ ಬಾಲಕಿ ಬಕ್ರೆವಾಲಾ ಸಮುದಾಯದಲ್ಲಿ ಹುಟ್ಟಿದ್ದರಿಂದಲೇ ಕೃತ್ಯ’ ನಡೆಸಿರುವುದಾಗಿ ಆರೋಪಿಯೊಬ್ಬ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು  ತಿಳಿಸಿದ್ದಾರೆ.

ಜಮೀನು ಒತ್ತುವರಿಗೆ ಸಂಬಂಧಿದಂತೆ ಇಲ್ಲಿನ ಸ್ಥಳೀಯ ಹಿಂದೂಗಳು ಮತ್ತು ಬಕ್ರೆವಾಲಾ ಸಮುದಾಯಗಳ ನಡುವೆ ಆಗಾಗ ಜಗಳಗಳು ಆಗುತ್ತಿದ್ದವು. ಬಕ್ರೆವಾಲಾಗಳಿಗೆ ತಕ್ಕಪಾಟ ಕಲಿಸುವ ದ್ವೇಷದಿಂದಲೇ ಅತ್ಯಾಚಾರದಂತ ಕೃತ್ಯ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಬಕ್ರೆವಾಲಾ: ಜಮ್ಮು ಮತ್ತು ಕಾಶ್ಮೀರದ ದಲಿತರು’

‘ನಮ್ಮ ದೇಶದಲ್ಲಿ ದಲಿತರನ್ನು ನಡೆಸಿಕೊಳ್ಳುವ ರೀತಿಯಲ್ಲಿಯೇ ಜಮ್ಮು–ಕಾಶ್ಮೀರದಲ್ಲಿ ಬಕ್ರೆವಾಲಾ ಸಮುದಾಯದವರನ್ನು ನಡೆಸಿಕೊಳ್ಳಲಾಗುತ್ತದೆ’ ಎನ್ನುತ್ತಾರೆ ಬುಡಕಟ್ಟು ಸಮುದಾಯಗಳ ಕಲ್ಯಾಣಕ್ಕೆ ದುಡಿಯುತ್ತಿರುವ ಹೋರಾಟಗಾರ ಜಾವೇದ್‌ ರಹಿ.

‘ಬಕ್ರೆವಾಲಾ ಜನರನ್ನು ಕಾಶ್ಮೀರಿಗಳು  ಬುಡಕಟ್ಟು ಜನರೆಂದು ಮತ್ತು ಜಮ್ಮುವಿನ ಜನ ಇವರನ್ನು ಮುಸ್ಲಿಮರೆಂದು ಗುರ್ತಿಸುತ್ತಾರೆ’ ಎಂದು ರಹಿ ಹೇಳುತ್ತಾರೆ.

ಬಕ್ರೆವಾಲಾರು ಈ ರಾಜ್ಯದಲ್ಲಿ ನೆಲೆಸಿರುವ ಅಲೆಮಾರಿ ಜನಾಂಗದವರು. ಇವರು ರಾಜ್ಯದಲ್ಲಿ ನೆಲೆನಿಂತ ಜನಾಂಗಗಳ ಮೂರನೇ ಅತಿದೊಡ್ಡ ಸಮುದಾಯವನ್ನು ಪ್ರತಿನಿಧಿಸುತ್ತಾರೆ. ಇವರಲ್ಲಿ ಬಹುತೇಕರು ಸುನ್ನಿ ಮುಸ್ಲಿಮರಾಗಿದ್ದಾರೆ. 

ಒಂದು ಅಂದಾಜಿನ ಪ್ರಕಾರ ಈ ಸಮುದಾಯ ರಾಜ್ಯದ ಶೇ 12 ರಷ್ಟು ಜನಸಂಖ್ಯೆಯನ್ನು ಹೊಂದಿದೆ. ಕಣಿವೆ ಪ್ರದೇಶಗಳಾದ ಕುಪ್ವಾರ, ಸೊಪಿಯಾನಾ, ಅನಂತ್‌ನಾಗ್‌, ಪುಲ್ವಾಮಾ, ಕುಲ್‌ಗಾಮ್‌, ಬುಡ್‌ಗಾಮ್‌ ಮತ್ತು ಜಮ್ಮುವಿನ ಪೂಂಚ್‌, ರಾಜೌರಿ ಮತ್ತು ಕಠುವಾ ಪ್ರದೇಶಗಳಲ್ಲಿ ಈ ಸಮುದಾಯದವರು ನೆಲೆ ಕಂಡುಕೊಂಡಿದ್ದಾರೆ.

ಸರ್ಕಾರ ಈ ಸಮುದಾಯವನ್ನು 1991ರಲ್ಲಿಯೇ ಪರಿಶಿಷ್ಟ ಪಂಗಡಕ್ಕೆ ಸೇರಿಸಿದೆ.

ವರ್ಷದ ಅಕ್ಟೋಬರ್‌ನಿಂದ ಏಪ್ರಿಲ್‌ವರೆಗೆ ಬಯಲುಗಳಲ್ಲಿ ಬೀಡು ಬೀಡುವ ಬಕ್ರೆವಾಲಾಗಳು ಬೇಸಿಗೆಯಲ್ಲಿ ಕುರಿ, ಮೇಕೆಗಳಿಗೆ ಆಹಾರ ಹರಿಸಿ ರಾಜ್ಯದ ವಾಯುವ್ಯ ಪ್ರದೇಶಗಳಲ್ಲಿ ಅಲೆಯುತ್ತಾರೆ. 

ಏನಿವರ ವೃತ್ತಿ ?‌
ಮೇಕೆ ಮತ್ತು ಕುರಿಗಳ ಸಾಕಣೆಯ ಇವರ ಮೂಲವೃತ್ತಿ. ಇದರೊಂದಿಗೆ ಕುದುರೆ, ಎಮ್ಮೆ ಮತ್ತು ನಾಯಿಗಳನ್ನು ಇವರು ಸಾಕುವುದುಂಟು. ಇವರಲ್ಲಿ ಬಹುತೇಕರು ವಸತಿಹೀನರು ಮತ್ತು ಭೂ–ವಂಚಿತರು. ಅಲೆಮಾರಿಗಳಾಗಿ ಜೀವನ ಸಾಗಿಸುವ ಇವರಲ್ಲಿ ಕೆಲವರು ಮಾತ್ರ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮುಖ್ಯವಾಹಿನಿಯಿಂದ ದೂರ
‘ಬಕ್ರೆವಾಲಾಗಳ ಅಲೆಮಾರಿ ಜೀವನ ಶೈಲಿಯಿಂದಾಗಿ ಕಾಶ್ಮೀರಿಗಳು ಇವರಿಂದ ಅಂತರ ಕಾಯ್ದುಕೊಂಡಿದ್ದಾರೆ. ಜಮ್ಮುವಿನ ಹಿಂದೂಗಳು ಇವರನ್ನು ಮುಸ್ಲಿಮರೆಂದು ಪರಿಗಣಿಸಿ ದೂರವಿಟ್ಟಿದ್ದಾರೆ. ಬಕ್ರೆವಾಲಾಗಳು ಹೊರಗಿನವರು, ಇವರನ್ನು ಇಲ್ಲೇ ಉಳಿಯಲು ಬಿಟ್ಟರೆ, ನಮ್ಮ ಜಮೀನುಗಳನ್ನು ಆಕ್ರಮಿಸುತ್ತಾರೆ, ರಾಜಕೀಯ ಪ್ರಾತಿನಿಧ್ಯ ಕಸಿಯುತ್ತಾರೆ ಎಂಬ ಭಾವನೆ ಜಮ್ಮುವಿನ ಜನರಲ್ಲಿದೆ’ ಎನ್ನುತ್ತಾರೆ ರಹಿ.

ಇದರಿಂದಾಗಿಯೇ ಅತ್ಯಾಚಾರದ ಪ್ರಕರಣ ಕೋಮುಗಳ ಧ್ರುವಿಕರಣಕ್ಕೆ ಕಾರಣವಾಗಿದೆ. ಅತ್ಯಾಚಾರ ನಡೆದಾಗ ಕೆಲವು ಹಿಂದೂ ಸಂಘಟನೆಗಳು, ಸ್ಥಳೀಯ ನಾಯಕರು ಮತ್ತು ವಕೀಲರು ಬಹಿರಂಗವಾಗಿ ಆರೋಪಿಗಳನ್ನು ಸಮರ್ಥಿಸಿಕೊಂಡಿದ್ದರು. ಅವರ ಮೇಲೆ ಪೊಲೀಸರು ಆರೋಪಪಟ್ಟಿ ದಾಖಲಿಸದಂತೆ ತಡೆದರು.

‘ದೇಶದಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸ್ಥಿತಿಗಿಂತ ಬಕ್ರೆವಾಲಾಗಳ ಪರಿಸ್ಥಿತಿ ಭಿನ್ನವಾಗಿಲ್ಲ’ ಎಂಬುದನ್ನು ಕಾಶ್ಮೀರದಲ್ಲಿನ ಹೋರಾಟಗಾರ ಮಸೂದ್‌ ಚೌಧರಿ ಕೂಡ ಒಪ್ಪಿಕೊಳ್ಳುತ್ತಾರೆ.

‘ಜನರನ್ನು ನಡುಹಗಲಲ್ಲೇ ಹೊಡೆಯುವ, ಕೊಲ್ಲುವ ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಜಾತಿನಿಂದನೆ, ಹಲ್ಲೆಗಳಿಗೆ ಈ ಅತ್ಯಾಚಾರದ ಪ್ರಕರಣವೇ ಸಾಕ್ಷಿ’ ಎಂಬುದು ಚೌಧರಿಯವರ ಅಭಿಪ್ರಾಯ.

ಶಿಕ್ಷಣದಲ್ಲಿಯೂ ಇವರು ಹಿಂದೆ:
‘ಕಾಶ್ಮೀರದಲ್ಲಿನ 12 ಬುಡಕಟ್ಟು ಸಮುದಾಯಗಳಲ್ಲಿ ಅತ್ಯಂತ ಕಡಿಮ ಸಾಕ್ಷಾರರು ಈ ಬಕ್ರೆವಾಲಾಗಳು. 2011ರ ಜನಗಣತಿ ಪ್ರಕಾರ ಸಮುದಾಯದ ಶೇ.7.8 ಜನರು ಮಾತ್ರ ಹನ್ನೆರಡನೆ ತರಗತಿವರೆಗೂ ಕಲಿತಿದ್ದಾರೆ. ಸಮುದಾಯದ 10 ಮಹಿಳೆಯರಲ್ಲಿ 8 ಜನರು ಅನಕ್ಷರಸ್ತರು’ ಎಂದು ತಾವು ಕಲೆಹಾಕುರುವ ಅಂಕಿ–ಅಂಶಗಳನ್ನು ಮುಂದಿಡುತ್ತಾರೆ ರಹಿ. 

ಸಾಮಾಜಿಕ ಸಮಸ್ಯೆಗಳೊಂದಿಗೆ ಸೆಣಸಾಟ:
ಬಾಲ್ಯವಿವಾಹ ಮತ್ತು ವರದಕ್ಷಿಣೆಯಂತರ ಸಾಮಾಜಿಕ ಸಮಸ್ಯೆಗಳು ಈ ಸಮುದಾಯವನ್ನು ಕಾಡುತ್ತಿವೆ. ಹೆಣ್ಣು ಹಸುಗೂಸಿಗೆ ನಿಚ್ಛಿತಾರ್ಥ ಮಾಡುವ, ಬಾಲಕಿಯರನ್ನು ವೃದ್ಧರಿಗೆ ಮದುವೆ ಮಾಡಿಕೊಡುವ ಕೆಟ್ಟ ಆಚರಣೆಗಳು ಇವರಲ್ಲಿವೆ. ಸ್ವಜಾತಿಯ ವಿವಾಹಗಳೇ ಇವರಲ್ಲಿ ಹೆಚ್ಚು. 

‘ಇವರಲ್ಲಿ ಬಹುಪತ್ನಿತ್ವ ಆಚರಣೆ ಇದೆ. ಪುರುಷರು ಎರಡರಿಂದ ಏಳು ಮಹಿಳೆಯರನ್ನು ವರಿಸಿದ ಉದಾಹರಣೆಗಳಿವೆ. ಹೆಚ್ಚು ಮದುವೆಯಿಂದ ಹೆಚ್ಚು ಮಕ್ಕಳು, ದುಡಿಯುವ ಕೈಗಳು ಹೆಚ್ಚಾಗುತ್ತವೆ ಎಂಬ ಮೌಢ್ಯತೆ ಅವರಲ್ಲಿ ಮನೆಮಾಡೆದೆ’ ಎನ್ನುತ್ತಾರೆ ರಹಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT