ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಕ್ರಮ ನೋಡಿ ಮುಂದಿನ ಹೆಜ್ಜೆ: ಮುರುಘಾ ಶರಣರು

Last Updated 19 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಬಸವತತ್ವ ಆಧಾರಿತ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಕೇಂದ್ರಕ್ಕೆ ಶಿಫಾರಸು ಮಾಡಿರುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹ ಎಂದು ಶಿವಮೂರ್ತಿ ಮುರುಘಾ ಶರಣರು ಸಂತಸ ವ್ಯಕ್ತಪಡಿಸಿದರು.

ಶ್ರೀಮಠದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘900 ವರ್ಷಗಳಷ್ಟು ಹಳೆಯದಾದ ಈ ಚಳವಳಿ 21ನೇ ಶತಮಾನದಲ್ಲಿ ಧರ್ಮದ ರೂಪ ಪಡೆದುಕೊಂಡಿದೆ. ಐದಾರು ತಿಂಗಳಿನಿಂದ ನಡೆಯುತ್ತಿದ್ದ ಹೋರಾಟಕ್ಕೆ ಫಲ ಸಿಕ್ಕಿದೆ. ನ್ಯಾ.ನಾಗಮೋಹನ ದಾಸ್ ವರದಿಯನ್ನು ಸರ್ಕಾರ ಸ್ವೀಕರಿಸಿದೆ. ಸಚಿವರ ಸಂಪುಟ ಒಂದು ಉತ್ತಮ ನಿರ್ಧಾರ ಕೈಗೊಂಡಿದೆ’ ಎಂದು ಶ್ಲಾಘಿಸಿದರು.

‘ಲಿಂಗಾಯತ/ವೀರಶೈವ ಎಂದು ಶಿಫಾರಸಿನಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರದ ಶಿಫಾರಸಿನಲ್ಲೇ ಗೊಂದಲಗಳಿದೆ ಎಂದು ಹೇಳಲಾಗುತ್ತಿದೆಯಲ್ಲಾ’ ಎಂಬ ಪ್ರಶ್ನೆಗೆ ಉತ್ತರಿಸಿದ ಶರಣರು, ‘ಶಿಫಾರಸಿನ ಪತ್ರವನ್ನು ನೋಡಿಲ್ಲ. ಮಾಧ್ಯಮಗಳಲ್ಲಿ ಬಂದ ಸುದ್ದಿ ಆಧರಿಸಿ ಪ್ರತಿಕ್ರಿಯಿಸುತ್ತಿದ್ದೇನೆ’ ಎಂದರು.

‘ವೀರಶೈವರು – ಲಿಂಗಾಯತರು ಶತ್ರುಗಳಲ್ಲ. ಎರಡರ ನಡುವೆ ವೇದ ಮತ್ತು ವಚನ ಸಂಸ್ಕೃತಿಯ ಸೈದ್ಧಾಂತಿಕ ಭಿನ್ನಾಭಿಪ್ರಾಯವಿದೆ’ ಎಂದ ಅವರು, ‘ಈ ಶಿಫಾರಸು ಕುರಿತು ಕೇಂದ್ರ ಸರ್ಕಾರ ಏನು ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಆಧರಿಸಿ, ಮುಂದಿನ ಹೆಜ್ಜೆ ಇಡಲಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಐತಿಹಾಸಿಕ ನಿರ್ಣಯ: ವಿರೋಧ ಬೇಡ’

ಬೆಳಗಾವಿ: ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿರುವುದು ಐತಿಹಾಸಿಕ ನಿರ್ಣಯವಾಗಿದೆ ಎಂದು ಇಲ್ಲಿನ ನಾಗನೂರ ರುದ್ರಾಕ್ಷಿಮಠದ ಸಿದ್ದರಾಮ ಸ್ವಾಮೀಜಿ ಹೇಳಿದ್ದಾರೆ.

‘ಸ್ವತಂತ್ರ ಧರ್ಮವಾಗುವುದರಿಂದ ರಾಜ್ಯದ ಲಿಂಗಾಯತರು ಧಾರ್ಮಿಕ ಅಲ್ಪಸಂಖ್ಯಾತರಾಗುತ್ತಾರೆ. ಇದರಿಂದ ಸಂವಿಧಾನಬದ್ಧವಾದ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ಇಂತಹ ಐತಿಹಾಸಿಕ ನಿರ್ಣಯ ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಲ್ಲ ಸಚಿವರು ಅಭಿನಂದನಾರ್ಹರು’ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮದ ಎಲ್ಲ ಅನುಯಾಯಿಗಳು ಹಾಗೂ ಬಸವಣ್ಣನನ್ನು ಗುರು ಎಂದು ಒಪ್ಪುವ, ಬಸವ ತತ್ತ್ವಗಳನ್ನು ಪರಿಪಾಲಿಸುವ ವೀರಶೈವರು ಕೂಡ ಲಿಂಗಾಯತ ಧರ್ಮದ ಒಂದು ಪಂಗಡವಾಗಿ ಮುಂದುವರಿಯುತ್ತಾರೆ. ಅಲ್ಲದೇ, ಅವರೂ ಧಾರ್ಮಿಕ ಅಲ್ಪಸಂಖ್ಯಾತರಾಗಲಿದ್ದಾರೆ’ ಎಂದು ವಿವರಿಸಿದ್ದಾರೆ.

‘ಸಾಮರಸ್ಯಕ್ಕೆ ನಾಂದಿ ಹಾಡಿರುವ ಈ ಐತಿಹಾಸಿಕ ನಿರ್ಣಯವನ್ನು ಯಾರೂ ವಿರೋಧಿಸಬಾರದು. ಸ್ವಾರ್ಥ, ಸಂಕುಚಿತ ಮನೋಭಾವ ಬದಿಗಿಡಬೇಕು. ಎಲ್ಲರಿಗೂ ಲಾಭದಾಯಕವಾಗಿರುವ ಈ ನಿರ್ಧಾರವನ್ನು ಸರ್ವರೂ ಸ್ವಾಗತಿಸಬೇಕು. ಲಿಂಗಾಯತರ ಉಜ್ವಲ ಭವಿಷ್ಯಕ್ಕೆ ಮುನ್ನುಡಿ ಬರೆಯಲಿರುವ ಮಹತ್ವದ ನಿರ್ಣಯವನ್ನು ವಿರೋಧಿಸುವುದು ಸರಿಯಲ್ಲ. ಯಾವುದೇ ಪಕ್ಷ, ಪಂಗಡಕ್ಕೆ ಸೇರಿದವರೂ ವಿರೋಧಿಸದೆ ಸಾಮರಸ್ಯ ಕಾಯ್ದುಕೊಳ್ಳಬೇಕು’ ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಯುಗಾದಿ ಕೊಡುಗೆ ನೀಡಿದ ಸರ್ಕಾರ

ಚಿತ್ರದುರ್ಗ: ‘ನ್ಯಾ.ನಾಗಮೋಹನದಾಸ್ ಸಮಿತಿ ವರದಿ ಅನ್ವಯ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಮಾಡುವ ತೀರ್ಮಾನ ಕೈಗೊಂಡಿರುವ ರಾಜ್ಯ ಸರ್ಕಾರದ ಕ್ರಮ ಸೂಕ್ತವಾಗಿದೆ' ಎಂದು ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಪೀಠಾಧ್ಯಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

‘ದಶಕಗಳ ಹೋರಾಟಕ್ಕೆ ಸರ್ಕಾರದ ಬೆಂಬಲ ಸಿಕ್ಕಂತಾಗಿದೆ. ಈ ಹೋರಾಟದ ಹಿನ್ನೆಲೆಯಲ್ಲಿ ಶ್ರಮಿಸಿದ ಮಠಾಧೀಶರಿಗೆ, ರಾಜಕೀಯ ನೇತಾರರಿಗೆ, ಬಸವಪ್ರೇಮಿಗಳಿಗೆ ಮತ್ತು ಹೋರಾಟವನ್ನು ಬೆಂಬಲಿಸಿದ ರಾಜ್ಯ ಸರ್ಕಾರಕ್ಕೆ ಪ್ರಮುಖವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇವೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಯುಗಾದಿ ಹಬ್ಬದ ದಿನವೇ ಶಿಫಾರಸು ಕೈಗೊಂಡು ಲಿಂಗಾಯತರಿಗೆ ಹಬ್ಬದ ಕೊಡುಗೆ ಕೊಟ್ಟಂತಾಗಿದೆ. ಕೇಂದ್ರ ಸರ್ಕಾರವೂ ಈ ಶಿಫಾರಸು ಮನ್ನಿಸಿ ಸ್ವತಂತ್ರ ‘ಲಿಂಗಾಯತ’ ಧರ್ಮವನ್ನಾಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ವೀರಶೈವ ಎಂಬ ಕಳೆ ನಾಶ

ಗದಗ: ಲಿಂಗಾಯತ ಧರ್ಮದ ಜತೆಗೆ ವೀರಶೈವ ಎನ್ನುವ ಕಳೆ ಬೆಳೆದಿತ್ತು. ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡು ತಜ್ಞರ ಸಮಿತಿಯ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುವ ಮೂಲಕ, ಈ ಕಳೆಯನ್ನು ಕಿತ್ತು ಹಾಕಿದೆ. ಇದೊಂದು ಐತಿಹಾಸಿಕ ನಿರ್ಣಯ ಎಂದು ಗದಗದ ತೋಂಟದಾರ್ಯ ಮಠ ಸಿದ್ಧಲಿಂಗ ಸ್ವಾಮೀಜಿ ಪ್ರತಿಕ್ರಿಯಿಸಿದರು.

ಸರ್ಕಾರ ಮುದ್ರೆಯೊತ್ತಿದೆ: ಸಂತಸವಾಗಿದೆ

ಸಿರಿಗೆರೆ: ಬಹುಕಾಲದಿಂದ ಅಸ್ತಿತ್ವದಲ್ಲಿದ್ದ ಲಿಂಗಾಯತ ಧರ್ಮಕ್ಕೆ ಸರ್ಕಾರ ಮುದ್ರೆಯೊತ್ತಿರುವುದು ಸಂತಸ ತಂದಿದೆ ಎಂದು ಸಿರಿಗೆರೆ ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.

ಲಿಂಗಾಯತ ಎಂಬುದು ಸರ್ಕಾರಿ ಸೌಲಭ್ಯಗಳನ್ನು ಪಡೆಯಲಿಕ್ಕೆ ಮಾತ್ರ ಆದರೆ ಉಪಯೋಗವಿಲ್ಲ. ನಿಜ ಲಿಂಗಾಯತ ಆಚರಣೆ ಮಾಡುವುದಾದರೆ ಮಾತ್ರ ಉಪಯೋಗವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಚಂದ್ರದರ್ಶನಕ್ಕಾಗಿ ಬೃಹನ್ಮಠದ ಆವರಣದಲ್ಲಿ ಸೋಮವಾರ ಸಮಾವೇಶಗೊಂಡಿದ್ದ ಭಕ್ತಾದಿಗಳೊಂದಿಗೆ ಅವರು ಮಾತನಾಡಿದರು.

ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ ಹಾಕುವಂತೆ ಕೈಗೊಂಡ ನಿರ್ಣಯ ಹಾಗೂ ಲಿಂಗಾಯತ ಧರ್ಮಕ್ಕೆ 2ಎ ಪ್ರವರ್ಗದಡಿ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಿರುವುದು ಸಿದ್ಧರಾಮಯ್ಯ ಸರ್ಕಾರ ಕೈಗೊಂಡ ಎರಡು ಪ್ರಮುಖ ನಿರ್ಣಯಗಳು ಎಂದು ಹೇಳಿದರು.

ವಿರೋಧಿಸುವುದು ಯಾವ ಧರ್ಮ?

ಹುಬ್ಬಳ್ಳಿ: ‘ಲಿಂಗಾಯತ ಪ್ರತ್ಯೇಕ ಧರ್ಮದಿಂದ ನಾಲ್ಕು ಜನರಿಗೆ ಒಳ್ಳೆಯದಾಗುತ್ತದೆ. ಅದನ್ನು ಕೆಲವರು ವಿರೋಧಿಸುತ್ತಿದ್ದಾರೆ. ಒಳ್ಳೆಯದಾಗುವುದನ್ನು ವಿರೋಧಿಸುವುದು ಯಾವ ಧರ್ಮ’ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಸವರಾಜ ಹೊರಟ್ಟಿ ಪ್ರಶ್ನಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಧರ್ಮಯುದ್ಧ ಮಾಡಲು ರಂಭಾಪುರಿ ಸ್ವಾಮೀಜಿ ಸ್ವತಂತ್ರರಾಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ನ್ಯಾಯಕ್ಕಾಗಿ ಹೋರಾಟ ಮಾಡಬಹುದಾಗಿದೆ’ ಎಂದರು.

‘ಹೋರಾಟದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಅಭಿನಂದನೆ. ಅದರಲ್ಲೂ, ವಿರೋಧಿಸಿದವರಿಗೆ ಮೊದಲು ಅಭಿನಂದನೆ. ಅವರು, ವಿರೋಧಿಸದಿದ್ದರೆ ಹೋರಾಟ ಇಷ್ಟು ಗಟ್ಟಿಯಾಗುತ್ತಿರಲಿಲ್ಲ. ವಿರೋಧ ಮಾಡುವವರಿಗೆ ಇನ್ನಾದರೂ ಜನರ ಕಷ್ಟಗಳನ್ನು ಅರಿಯುವ ಬುದ್ಧಿ ಬರಲಿ’ ಎಂದು ಹೇಳಿದರು.

ಸಹಮತದಿಂದಲೇ ಒಪ್ಪಿಗೆ: ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ

ದಾವಣಗೆರೆ: ‘ಸಂಪುಟ ಸಭೆಯಲ್ಲಿ ನ್ಯಾ.ನಾಗಮೋಹನದಾಸ್‌ ವರದಿಗೆ ಸಂಬಂಧಿಸಿ ಕೈಗೊಂಡ ನಿರ್ಧಾರಕ್ಕೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಸಹಮತದಿಂದಲೇ ಒಪ್ಪಿಗೆ ಸೂಚಿಸಲಾಯಿತು’ ಎಂದು ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಪ್ರತಿಕ್ರಿಯಿಸಿದರು.

ನಗರದ ಗೃಹ ಕಚೇರಿಯಲ್ಲಿ ಸೋಮವಾರ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸರ್ಕಾರದ ನಿರ್ಧಾರದಲ್ಲಿ ವೀರಶೈವ, ಲಿಂಗಾಯತ ಎರಡೂ ಇರುವುದರಿಂದ ಯಾರೂ ಇದನ್ನು ವಿರೋಧಿಸಿಲ್ಲ. ಮುಖ್ಯವಾಗಿ ಬಸವತತ್ವ ಅನುಯಾಯಿಗಳನ್ನು ಸೇರಿಸಿಕೊಂಡಿರುವುದರಿಂದ ಇದಕ್ಕೆ ನಮ್ಮ ಒಪ್ಪಿಗೆ ಇದೆ’ ಎಂದು ಸ್ಪಷ್ಪಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT