ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಶಿರಾ ಸಾಮಾನ್ಯ ಸಭೆ: ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಕ್ಕೆ ನಗರಸಭೆ ಕಾರ್ಯಾಲಯ ದುರ್ಬಳಕೆ; ಆರೋಪ
Last Updated 23 ಮಾರ್ಚ್ 2018, 12:47 IST
ಅಕ್ಷರ ಗಾತ್ರ

ಶಿರಾ: ‘ನಗರಸಭೆ ಕಾರ್ಯಾಲಯದಲ್ಲಿ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಇತರೇ ಪಕ್ಷದ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಅವಕಾಶ ನೀಡಿದಂತೆ ನಮಗೂ ಆವಕಾಶ ನೀಡಿ, ಇಲ್ಲದಿದ್ದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಿ’ ಎಂದು ಸದಸ್ಯ ಆರ್.ಉಗ್ರೇಶ್ ಆಗ್ರಹಿಸಿದರು.

ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಅಮಾನುಲ್ಲಾ ಖಾನ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ‘ಕಾನೂನು ಸಚಿವರೇ ಕಾನೂನು ದುರುಪಯೋಗ ಮಾಡಿಕೊಳ್ಳುವ ಮೂಲಕ ಸರ್ಕಾರಿ ಕಚೇರಿಯನ್ನು ಪಕ್ಷದ ಕಚೇರಿಯನ್ನಾಗಿ ಮಾಡಿಕೊಳ್ಳಲು ಹೊರಟಿರುವುದು ನಾಚಿಕೆಗೇಡಿನ ವಿಚಾರವಾಗಿದೆ’ ಎಂದರು. ಇದಕ್ಕೆ ಸದಸ್ಯರಾದ ಅಂಜಿನಪ್ಪ, ಪುಟ್ಟರಾಜು, ಮಂಜುನಾಥ್ ಧ್ವನಿಗೂಡಿಸಿದರು.

ನಗರಸಭೆ ಅಧ್ಯಕ್ಷ ಅಮಾನುಲ್ಲಾ ಖಾನ್, ಇಲ್ಲಿ ಯಾವುದೇ ಸೇರ್ಪಡೆ ಕಾರ್ಯಕ್ರಮ ನಡೆದಿಲ್ಲ. ಸಚಿವರು ಹಕ್ಕುಪತ್ರ ವಿತರಣೆಗೆ ನಗರಸಭೆಗೆ ಬಂದಿದ್ದ ಸಮಯದಲ್ಲಿ ಕಾರ್ಯಕರ್ತರು ಬಂದು ಹಾರ ಹಾಕಿದ್ದಾರೆ ಎಂದು ಸಮಜಾಯಿಸಿ ನೀಡಲು ಹೋದಾಗ ಜೆಡಿಎಸ್ ಸದಸ್ಯರು ಕುಪಿತರಾಗಿ ಪೋಟೋಗಳನ್ನು ಪ್ರದರ್ಶಿಸಿ ಇಲ್ಲಿ ಯಾರು ಯಾರಿಗೆ ಹಾರ ಹಾಕಿದ್ದಾರೆ ಎಂದು ಪ್ರಶ್ನಿಸಿದರು.

ಈ ಬಗ್ಗೆ ಪತ್ರಿಕೆಗಳಲ್ಲಿ ಬಂದಿರುವ ವರದಿ ಸುಳ್ಳೇ, ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದ್ದರು ಸಹ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಸೇರ್ಪಡೆ ಕಾರ್ಯಕ್ರಮ ನಡೆದಿರುವುದಕ್ಕೆ ಬೇಕಿದ್ದರೆ ಸಿಸಿ ಟಿವಿ ಕ್ಯಾಮೆರಾ ತೆಗೆದು ಪರಿಶೀಲನೆ ನಡೆಸಿ ಎಂದು ಪಟ್ಟು ಹಿಡಿದರು.

ಮಧ್ಯೆ ಪ್ರವೇಶಿಸಿ ಮಾತನಾಡಿದ ಪೌರಾಯುಕ್ತ ಗಂಗಣ್ಣ ಈ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ಇಲ್ಲಿ ಯಾವುದೇ ಪಕ್ಷದ ಕಾರ್ಯಕ್ರಮ ನಡೆಸಲು ಅವಕಾಶ ಇಲ್ಲ ಮುಂದೆ ಈ ರೀತಿಯಾಗದಂತೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.

‘ನಗರಸಭೆಯಲ್ಲಿ ತಾವು ಮಹಿಳೆ ಎನ್ನುವ ಕಾರಣಕ್ಕೆ ಬೆಲೆ ನೀಡುತ್ತಿಲ್ಲ. ಉಪಾಧ್ಯಕ್ಷೆಯಾಗಿದ್ದರು ಸಹ ತಮ್ಮ ವಾರ್ಡ್‌ನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಕೊಳವೆ ಬಾವಿ ಕೊರೆಸಿ 3 ವರ್ಷವಾದರೂ ಸಹ ಇನ್ನು ಬಿಲ್ ನೀಡಿಲ್ಲ. ಈ ಬಗ್ಗೆ ಅಧ್ಯಕ್ಷರು ಮತ್ತು ಅಧಿಕಾರಿಗಳು ಹಾರಿಕೆಯ ಉತ್ತರ ನೀಡುತ್ತಿದ್ದಾರೆ’ ಎಂದರು.

‘ಗುತ್ತಿಗೆದಾರರು ನಮ್ಮ ಮನೆ ಬರುತ್ತಿದ್ದಾರೆ. ತಮ್ಮ ಮಾತಿಗೆ ಯಾವುದೇ ರೀತಿ ಬೆಲೆ ಇಲ್ಲ ಎಂದ ಮೇಲೆ ಉಪಾಧ್ಯಕ್ಷರಾಗಿ ಮುಂದುವರಿಯುವುದರಲ್ಲಿ ಯಾವುದೇ ಆರ್ಥ ಇಲ್ಲ ಎಂದು ಉಪಾಧ್ಯಕ್ಷೆ
ಶೋಭಾ ಮಾರುತೇಶ್ ಸದಸ್ಯರ ಜೊತೆಯಲ್ಲಿ ಕುಳಿತುಕೊಳ್ಳಲು ಮುಂದಾದ ಸಮಯದಲ್ಲಿ ಎಲ್ಲ ಸದಸ್ಯರು ಉಪಾಧ್ಯಕ್ಷೆಯನ್ನು ಬೆಂಬಲಿಸಿ ಇವರಿಗೆ ಬೆಲೆ ನೀಡದ ನೀವು ಸದಸ್ಯರಿಗೆ ಯಾವ ರೀತಿ ಬೆಲೆ ನೀಡುತ್ತೀರಿ ಎಂದು ಅಧ್ಯಕ್ಷರು ಮತ್ತು ಅಧಿಕಾರಿಗಳನ್ನು ಸದಸ್ಯರಾದ ಆರ್.ಉಗ್ರೇಶ್, ಶ್ರೀನಿವಾಸಗುಪ್ತ, ರಾಜಣ್ಣ, ಮಂಜುನಾಥ್, ಇಸ್ಮಾಯಿಲ್ ಬೇಗ್, ನಟರಾಜು ಮತ್ತಿತರರು ತರಾಟೆಗೆ ತೆಗೆದುಕೊಂಡರು.

ಇನ್ನು ವಾರದೊಳಗೆ ಬಿಲ್ ನೀಡಲಾಗುವುದು. ನಗರೋತ್ಥಾನ ಯೋಜನೆಯಲ್ಲಿ ವಾರ್ಡ್‌ನಲ್ಲಿ ಕಾಮಗಾರಿಗಳನ್ನು ಕೈಗೊಳ್ಳುವುದಾಗಿ ನೀಡಿದ ಭರವಸೆ ನಂತರ ಉಪಾಧ್ಯಕ್ಷೆ ಶೋಭಾ ಮಾರುತೇಶ್ ಉಪಾಧ್ಯಕ್ಷರ ಕುರ್ಚಿಯಲ್ಲಿ ಕುಳಿತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT