ಗುರುವಾರ , ನವೆಂಬರ್ 21, 2019
20 °C

ಸೇವಾ ಭದ್ರತೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರ ಅನಿರ್ದಿಷ್ಟಾವಧಿ ಧರಣಿ

Published:
Updated:
Prajavani

ಹೊಸಪೇಟೆ: ಸೇವಾ ಭದ್ರತೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದವರು ಸೋಮವಾರ ನಗರದಲ್ಲಿ ತರಗತಿಗಳನ್ನು ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ನಗರದ ಪ್ರಮುಖ ಮಾರ್ಗಗಳಲ್ಲಿ ರ್‍ಯಾಲಿ ನಡೆಸಿದ ಪ್ರಾಧ್ಯಾಪಕರು, ಬಳಿಕ ತಹಶೀಲ್ದಾರ್‌ ಕಚೇರಿಗೆ ತೆರಳಿ ಡಿ.ಜಿ. ಹೆಗಡೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.

’ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಎರಡು ದಶಕಗಳಿಂದ ಅತಿಥಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದೇವೆ. ಆದರೆ, ಇದುವರೆಗೆ ಸೇವಾ ಭದ್ರತೆ ಒದಗಿಸಿಲ್ಲ. ಸಕಾಲಕ್ಕೆ ಸಂಬಳ ಕೊಡುವುದಿಲ್ಲ. ಕನಿಷ್ಠ ಸಂಬಳ ಕೂಡ ನಿಗದಿಪಡಿಸಿಲ್ಲ. ಇದರಿಂದ ಅತಿಥಿ ಉಪನ್ಯಾಸಕರು ಹಾಗೂ ಅವರ ಅವಲಂಬಿತರು ಅತಂತ್ರರಾಗಿದ್ದಾರೆ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

‘ಹಿಂದಿನ ಸರ್ಕಾರ ಅತಿಥಿ ಉಪನ್ಯಾಸಕರಿಗೆ ಮಾಸಿಕ ₹25,000 ಸಂಬಳ ಕೊಡುವ ಭರವಸೆ ನೀಡಿತ್ತು. ಅದು ಭರವಸೆಯಾಗಿಯೇ ಉಳಿದಿದೆ. ವರ್ಷದಲ್ಲಿ ಒಂಬತ್ತು ತಿಂಗಳ ಸಂಬಳವಷ್ಟೇ ನೀಡಲಾಗುತ್ತಿದ್ದು, ಅದು ಕೂಡ ಎರಡ್ಮೂರು ಕಂತುಗಳಲ್ಲಿ ನೀಡಲಾಗುತ್ತಿದೆ’ ಎಂದು ಗೋಳು ತೋಡಿಕೊಂಡಿದ್ದಾರೆ.

‘ಪ್ರಸಕ್ತ ಸಾಲಿನ ಮೊದಲನೇ ತಿಂಗಳಿನಿಂದ ಅನ್ವಯವಾಗುವಂತೆ ₹5,000 ವೇತನ ಹೆಚ್ಚಿಸಬೇಕು. ಬರುವ ದಿನಗಳಲ್ಲಿ ಯು.ಜಿ.ಸಿ. ನಿಯಮದ ಪ್ರಕಾರ ಸಂಬಳ ಕೊಡಬೇಕು. ಪದವಿ ಕಾಲೇಜುಗಳ ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರಿಗೆ ಮೊದಲ ಆದ್ಯತೆ ಕೊಡಬೇಕು’ ಎಂದು ಆಗ್ರಹಿಸಿದ್ದಾರೆ.

‘ಜಿಲ್ಲೆಯ ಅನೇಕ ತಾಲ್ಲೂಕುಗಳಲ್ಲಿ 2016–17ನೇ ಸಾಲಿನ ಸಂಬಳ ಬಾಕಿ ಪಾವತಿಸಿಲ್ಲ. ಹರಿಯಾಣ ರಾಜ್ಯದಲ್ಲಿ ಅಲ್ಲಿನ ಅತಿಥಿ ಉಪನ್ಯಾಸಕರಿಗೆ ಸರ್ಕಾರ ₹57,700 ಸಂಬಳ ಕೊಡುತ್ತಿದೆ. ಯು.ಜಿ.ಸಿ. ನಿಯಮಾವಳಿಗಿಂತ ಹೆಚ್ಚುವರಿ ಕೆಲಸ ತೆಗೆದುಕೊಳ್ಳುತ್ತಿದ್ದರೂ ಅದಕ್ಕೆ ತಕ್ಕಂತೆ ವೇತನ ಕೊಡದೇ ತಾರತಮ್ಯ ಮಾಡಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.

ಸಂಘದ ತಾಲ್ಲೂಕು ಅಧ್ಯಕ್ಷ ಆರ್‌.ಬಿ. ಕುಮಾರ, ಜಂಟಿ ಕಾರ್ಯದರ್ಶಿಗಳಾದ ಅಕ್ಕಿ ಮಲ್ಲಿಕಾರ್ಜುನ, ದೀಪಕ್‌ ನವಲೆ, ಉಪಾಧ್ಯಕ್ಷ ಷಣ್ಮುಖಪ್ಪ, ಸಂಚಾಲಕ ಚನ್ನಪ್ಪ, ಅತಿಥಿ ಉಪನ್ಯಾಸಕರಾದ ವಿಜಯಕುಮಾರ, ಟಿ. ಬಸವರಾಜ, ಮಂಜುನಾಥ, ಉಜ್ಜಪ್ಪ, ಗಿರಿಜಾ, ಕುಸುಮಾ ಇದ್ದರು.

ಪ್ರತಿಕ್ರಿಯಿಸಿ (+)