ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಮಾಲಿ ಯುವಕನ ಹುಬ್ಬೇರಿಸುವ ಸಾಧನೆ

ತುತ್ತು ಅನ್ನಕ್ಕೂ ಪರದಾಡುತ್ತಿದ್ದ ವಲಿ ಬಾಷಾ ಈಗ ಹೆಸರಾಂತ ಪವರ್‌ ಲಿಫ್ಟರ್‌
Last Updated 16 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಹೊಸಪೇಟೆ: ಚಾಲಕ, ಹಮಾಲಿ ಕೆಲಸ ಮಾಡುತ್ತಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದವರು ತಾಲ್ಲೂಕಿನ ಹೊಸಮಲಪನಗುಡಿಯ ಪವರ್‌ ಲಿಫ್ಟರ್‌ ವಲಿ ಬಾಷಾ.

ವಲಿ ಬಾಷಾ ಅವರಲ್ಲಿನ ಅದ್ಯಮ ಉತ್ಸಾಹ, ಛಲ ಎಲ್ಲ ಕಷ್ಟ ಕಾರ್ಪಣ್ಯಗಳನ್ನು ಮೀರಿ ಬೆಳೆಯುವಂತೆ ಮಾಡಿದೆ. ಕೆಲಸ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವುದೇ ಒಂದು ಕಾಲದಲ್ಲಿ ಅವರಿಗೆ ಕಷ್ಟವಾಗಿತ್ತು. ಅದನ್ನು ಸವಾಲಾಗಿ ಸ್ವೀಕರಿಸಿ, ಚಾಲಕ ವೃತ್ತಿ ಹಾಗೂ ಹಮಾಲಿ ಕೆಲಸದಿಂದ ಮನೆ ನಡೆಸಿಕೊಂಡು ಹೋಗುತ್ತಿದ್ದರು. ಅಳಿದುಳಿದ ಹಣದಲ್ಲಿ ಪವರ್‌ ಲಿಫ್ಟಿಂಗ್‌ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆಗ ಅವರು ಪಟ್ಟ ಕಷ್ಟ ಈಗ ಅವರು ಎತ್ತರಕ್ಕೆ ಬೆಳೆಯುವಂತೆ ಮಾಡಿದೆ. ಅವರ ಶ್ರಮ ಕೈ ಹಿಡಿದಿದೆ.

ವಲಿ ಬಾಷಾ ಅವರ ತಂದೆ ಹುಸೇನ್‌ ಸಾಬ್‌ ಅವರು ಹಳ್ಳಿಗಾಡಿನಲ್ಲಿ ನಡೆಯುತ್ತಿದ್ದ ಕುಸ್ತಿ ಪಂದ್ಯದಲ್ಲಿ ಪಾಲ್ಗೊಳ್ಳುತ್ತಿದ್ದರು. ಅವರಿಂದ ಪ್ರೇರಣೆ ಪಡೆದ ವಲಿ ಬಾಷಾ ಕೂಡ ಕುಸ್ತಿ ಆಡುತ್ತಿದ್ದರು. 2001ರಲ್ಲಿ ಹೋಟೆಲ್‌ನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುವಾಗ ನಗರದ ಟೌನ್‌ ರೀಡಿಂಗ್‌ ರೂಂನಲ್ಲಿ ಪವರ್‌ ಲಿಫ್ಟಿಂಗ್‌ ಸ್ಪರ್ಧೆ ನಡೆಯುತ್ತಿರುವುದು ಬಾಷಾ ಕಣ್ಣಿಗೆ ಬಿದ್ದಿತ್ತು.

ತಾನು ಕೂಡ ಅವರಂತೆ ಆಗಬೇಕೆಂದು ನಿರ್ಧರಿಸಿ, ಮರುದಿನದಿಂದಲೇ ಅದಕ್ಕೆ ಸಂಬಂಧಿಸಿದವರನ್ನು ಸಂಪರ್ಕಿಸಿ ತಯಾರಿ ಶುರು ಮಾಡಿದರು. ಆರು ವರ್ಷಗಳ ನಂತರ ಜಿಲ್ಲೆಯ ಕೂಡ್ಲಿಗಿಯಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಪವರ್‌ ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಭಾಗವಹಿಸಿದ ಬಾಷಾ ಅವರಿಗೆ ಪ್ರಶಸ್ತಿ ಬರಲಿಲ್ಲ. ಮೊದಲ ಯತ್ನದಲ್ಲೇ ನಿರಾಸೆ ಅನುಭವಿಸಬೇಕಾಯಿತು.

ಆದರೆ, ಅದರಿಂದ ಎದೆಗುಂದಲಿಲ್ಲ. 2011ರಲ್ಲಿ ಮರಿಯಮ್ಮನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಬೆಂಚ್‌ ಪ್ರೆಸ್‌ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ, ಪ್ರಶಸ್ತಿ ಬಾಚಿಕೊಂಡರು. ಅಲ್ಲಿಂದ ಶುರುವಾದ ಅವರ ಗೆಲುವಿನ ನಾಗಾಲೋಟ ಈಗಲೂ ಮುಂದುವರಿದಿದೆ. ಇತ್ತೀಚೆಗೆ ದುಬೈನಲ್ಲಿ ನಡೆದ ಏಷಿಯನ್‌ ಪವರ್‌ ಲಿಫ್ಟಿಂಗ್‌ ಬೆಂಚ್‌ ಪ್ರೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗಳಿಸಿ ಎಲ್ಲರೂ ಹುಬ್ಬೇರಿಸುವಂತಹ ಸಾಧನೆ ಮಾಡಿದ್ದಾರೆ.

ಹರಿಯಾಣ, ಮೈಸೂರು, ದಾವಣಗೆರೆ, ಬೆಂಗಳೂರುಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪದಕ ಗೆದ್ದಿದ್ದಾರೆ. 2015ರಲ್ಲಿ ದಾವಣಗೆರೆಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಜಯಿಸಿ, ಗಮನ ಸೆಳೆದಿದ್ದಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಯಾವುದೇ ಸ್ಪರ್ಧೆಯಿರಲಿ, ಅದರಲ್ಲಿ ಬಾಷಾ ಪಾಲ್ಗೊಂಡರೆ ಪದಕ ಖಚಿತ ಎನ್ನುವಷ್ಟರ ಮಟ್ಟಿಗೆ ಅವರು ಪಳಗಿದ್ದಾರೆ. ಒಂದು ಕಾಲದಲ್ಲಿ ಆಟದ ತಯಾರಿಗೆ ಹಣ ಸಂಗ್ರಹಿಸಲು ಒದ್ದಾಡುತ್ತಿದ್ದ ಬಾಷಾ ಅವರಿಗೆ ಈಗ ಆ ಸಮಸ್ಯೆ ದೂರವಾಗಿದೆ.

‘ಆರಂಭದಲ್ಲಿ ಹಗಲೆಲ್ಲ ಆಟೊ ಓಡಿಸಿ, ಸಂಜೆ ಜಿಮ್‌ನಲ್ಲಿ ಕಸರತ್ತು ಮಾಡುತ್ತಿದ್ದೆ. ಆದರೂ ದುಡ್ಡಿಗೆ ಸಮಸ್ಯೆಯಾಗುತ್ತಿತ್ತು. ಆಟೊದಲ್ಲಿ ಎಲ್ಲಿಗಾದರೂ ಸರಕು ಸಾಮಾನು ತೆಗೆದುಕೊಂಡು ಹೋದರೆ ನಾನೇ ಹಮಾಲಿ ಕೆಲಸ ಮಾಡುತ್ತಿದ್ದೆ. ಆ ಹಣ ನನ್ನ ಪವರ್‌ ಲಿಫ್ಟಿಂಗ್‌ ಅಭ್ಯಾಸಕ್ಕೆ ವಿನಿಯೋಗಿಸಿಕೊಳ್ಳುತ್ತಿದ್ದೆ. ಆದರೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ನಂತರ ‘ವಿ.ಕೆ. ಫೀಡ್ಸ್‌’ನ ಮಲ್ಲಿಕಾರ್ಜುನ ಎಂಬುವರು ಎರಡು ವರ್ಷಗಳಿಂದ ಮೊಟ್ಟೆ, ಚಿಕನ್‌ ಉಚಿತವಾಗಿ ಕೊಡುತ್ತಿದ್ದಾರೆ’ ಎಂದು ಬಾಷಾ ಹೇಳಿದರು.

‘ಮಾಧ್ಯಮಗಳಲ್ಲಿ ಬಂದ ವರದಿ ನೋಡಿ ಅನೇಕ ಜನರು ₹500, ₹1,000 ಹೀಗೆ ಅವರಿಗೆ ತೋಚಿದಂತೆ ಕೈಲಾದ ಸಹಾಯ ಮಾಡಿದರು. ಈಗ ಬೆಂಗಳೂರಿನ ಐ.ಎಂ.ಎ. ಜ್ಯೂವೆಲರ್ಸ್‌ನವರು ನನ್ನ ಎಲ್ಲ ರೀತಿಯ ಖರ್ಚು ಭರಿಸುತ್ತಿದ್ದಾರೆ. ಎಲ್ಲೇ ಸ್ಪರ್ಧೆ ನಡೆಯಲಿ ಅಲ್ಲಿಗೆ ಹೋಗಿ ಬರುವುದು ಸೇರಿದಂತೆ ಎಲ್ಲ ಖರ್ಚು ಭರಿಸಲು ಸ್ವಯಂಪ್ರೇರಿತರಾಗಿ ಒಪ್ಪಿಕೊಂಡಿದ್ದಾರೆ. ಇದರಿಂದಾಗಿ ಈಗ ಆಟದ ಕಡೆಗೆ ಸಂಪೂರ್ಣ ಚಿತ್ತ ಹರಿಸಲು ಸಾಧ್ಯವಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT