ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸೋದ್ಯಮದ ‘ಹಬ್‌’ ಹಂಪಿ: ಹಂಪಿಯಲ್ಲಿ ಪ್ರವಾಸಿಗರ ಕಲರವ

ಉದ್ಯಮ ಚೇತರಿಕೆಯಿಂದ ಮರಳಿದ ಖುಷಿ; ಚುರುಕಾದ ವಹಿವಾಟು
Last Updated 27 ಸೆಪ್ಟೆಂಬರ್ 2021, 8:18 IST
ಅಕ್ಷರ ಗಾತ್ರ

ಹೊಸಪೇಟೆ: ವಿಶ್ವ ಪ್ರಸಿದ್ಧ ಹಂಪಿ ಈಗ ಪ್ರವಾಸೋದ್ಯಮದ ‘ಹಬ್‌’ ಆಗಿ ಬದಲಾಗುತ್ತಿದೆ.

ಹೊಸಪೇಟೆ ಅಂದರೆ ಹಂಪಿಯಷ್ಟೇ ಎಂಬ ಭಾವನೆ ಈ ಹಿಂದೆ ಪ್ರವಾಸಿಗರಲ್ಲಿ ಇತ್ತು. ಅಬ್ಬಬ್ಬಾ ಅಂದರೆ ಹಂಪಿ ನೋಡಲು ಬಂದವರು ತುಂಗಭದ್ರಾ ಜಲಾಶಯ ಕೂಡ ನೋಡಿಕೊಂಡು ಹೋಗುತ್ತಿದ್ದರು. ಆದರೆ, ಇತ್ತೀಚಿನ ಕೆಲವು ವರ್ಷಗಳಿಂದ ಹಂಪಿ ಸುತ್ತಮುತ್ತಲೂ ಆಗುತ್ತಿರುವ ಬೆಳವಣಿಗೆಗಳಿಂದ ಅದರ ಚಹರೆ ಬದಲಾಗಿದೆ.

ಹಂಪಿ ಸನಿಹದಲ್ಲೇ ಇರುವ ಕಮಲಾಪುರದ ಬಿಳಿಕಲ್‌ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನ ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿದೆ. ಹುಲಿ, ಸಿಂಹ, ಜಿಂಕೆ ಸಫಾರಿ ಜೊತೆಗೆ ಮೃಗಾಲಯದಲ್ಲಿ ವಿವಿಧ ಪ್ರಾಣಿಗಳನ್ನು ನೋಡಬಹುದು. ಈಗ ಉದ್ಯಾನದ ಎದುರಲ್ಲೇ ಇರುವ ದರೋಜಿ ಕರಡಿಧಾಮದಲ್ಲಿ ಇತ್ತೀಚೆಗೆ ಜಂಗಲ್‌ ಸಫಾರಿ ಆರಂಭಿಸಲಾಗಿದೆ. ಸಂಪೂರ್ಣ ಕುರುಚಲು ಕಾಡಿನಲ್ಲೇ ಎರಡು ಗಂಟೆಗಳ ಸಫಾರಿ ವಿಭಿನ್ನ ಅನುಭವ ಕಟ್ಟಿಕೊಡುತ್ತದೆ.

ಚಿರತೆ, ಕರಡಿ, ಮುಂಗುಸಿ, ಮುಳ್ಳುಹಂದಿ, ಕಾಡುಹಂದಿ, ನವಿಲು, ಮೊಲ ಸೇರಿದಂತೆ 150ಕ್ಕೂ ಹೆಚ್ಚು ಜಾತಿಯ ಪಕ್ಷಿಗಳನ್ನು ನೋಡಬಹುದು. ಇನ್ನು, ಹಂಪಿಯಿಂದ ಸ್ವಲ್ಪವೇ ದೂರದಲ್ಲಿರುವ ಅಂಜನಾದ್ರಿ ಪರ್ವತ ಧಾರ್ಮಿಕ ಕ್ಷೇತ್ರವಾಗಿ ಬೆಳೆದಿದೆ. ಹಂಪಿಯ ತೆನಾಲಿ ರಾಮ ಮಂಟಪ, ಮಾತಂಗ ಪರ್ವತ, ಮಾಲ್ಯವಂತ ಸೇರಿದಂತೆ ಹಲವು ಬೆಟ್ಟ ಗುಡ್ಡಗಳಲ್ಲಿ ಚಾರಣ ಕೂಡ ಮಾಡಬಹುದು.

ಬೆಟ್ಟ ಗುಡ್ಡಗಳ ನಡುವೆ ತುಂಗಭದ್ರಾ ನದಿ ಹರಿಯುತ್ತದೆ. ನದಿ ಹರಿದು ಹೋಗುವ ಪ್ರದೇಶವನ್ನು ನೀರು ನಾಯಿ ಪ್ರದೇಶವೆಂದು ಘೋಷಿಸಲಾಗಿದೆ. ಇದಲ್ಲದೇ ಅನೇಕ ಜಲಚರಗಳಿವೆ. ಹವ್ಯಾಸಿ, ವೃತ್ತಿಪರ ಛಾಯಾಗ್ರಾಹಕರಿಗೆ ಹಂಪಿ, ನದಿ ಪ್ರದೇಶ ಛಾಯಾಗ್ರಹಣಕ್ಕೆ ಹೇಳಿ ಮಾಡಿಸಿದ ತಾಣದಂತಿದೆ.

ಹಂಪಿ, ಕಮಲಾಪುರ, ನದಿ ದಂಡೆಯ ಎರಡೂ ಭಾಗಗಳು, ಭತ್ತದ ಗದ್ದೆಗಳ ನಡುವೆ ಅನೇಕ ಹೋಂ ಸ್ಟೇ, ರೆಸಾರ್ಟ್‌ಗಳು ತಲೆ ಎತ್ತಿವೆ. ಹಂಪಿ ಸುತ್ತಮುತ್ತಲಿನ ಇಡೀ ಪ್ರದೇಶ ನಿಸರ್ಗದಿಂದ ಕೂಡಿದೆ. ನಗರ ಪ್ರದೇಶದ ವಾಸಿಗಳು ಸಂಚಾರ ದಟ್ಟಣೆ, ಹೆಚ್ಚಿನ ಕೆಲಸದ ಒತ್ತಡದಲ್ಲೇ ಬಹುತೇಕ ಸಮಯ ಕಳೆಯುತ್ತಾರೆ. ಅದನ್ನೆಲ್ಲ ಮರೆತು ಹೊರಬರಲು ಹಂಪಿ ಹೇಳಿ ಮಾಡಿಸಿದ ಸ್ಥಳ. ಪ್ರವಾಸಿ ತಾಣಗಳ ‘ಹಬ್‌’ ಆಗಿ ಹಂಪಿ ಬದಲಾಗುತ್ತಿರುವುದರಿಂದ ಹೆಚ್ಚಿನ ಉದ್ಯೋಗ ಅವಕಾಶಗಳ ಸೃಷ್ಟಿಗೆ ಕಾರಣವಾಗಿದೆ. ಹಂಪಿ, ಕಡ್ಡಿರಾಂಪುರ, ಕಮಲಾಪುರದ ಅನೇಕ ಯುವಕರಿಗೆ ಉದ್ಯೋಗಗಳು ಅರಸಿಕೊಂಡು ಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT