ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಸ್ಮಾರಕ ಹಾನಿ; ಬಂಧನಕ್ಕೆ ಆಗ್ರಹ

ಹಂಪಿ ಉಳಿಸಿ ಆಂದೋಲನ ಸಮಿತಿ, ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
Last Updated 5 ಫೆಬ್ರುವರಿ 2019, 12:10 IST
ಅಕ್ಷರ ಗಾತ್ರ

ಹೊಸಪೇಟೆ: ಗಜಶಾಲೆ ಹಿಂಭಾಗದ ವಿಷ್ಣು ದೇಗುಲ ಮಂಟಪದ ಕಲ್ಲುಗಂಬಗಳನ್ನು ಬೀಳಿಸಿ ವಿಕೃತಿ ಮೆರೆದವರನ್ನು ಬಂಧಿಸುವಂತೆ ಆಗ್ರಹಿಸಿ ಹಂಪಿ ಉಳಿಸಿ ಆಂದೋಲನ ಸಮಿತಿ ಹಾಗೂ ಬಿಜೆಪಿ ಕಾರ್ಯಕರ್ತರು ಮಂಗಳವಾರ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಎದುರು ಪ್ರತಿಭಟನೆ ನಡೆಸಿದರು.

‘ಉಳಿಸಿ, ಉಳಿಸಿ ಹಂಪಿ ಉಳಿಸಿ’, ‘ಬಂಧಿಸಿ ಬಂಧಿಸಿ ವಿಕೃತಿ ಮೆರೆದವರ’ ಬಂಧಿಸಿ ಎಂದು ಘೋಷಣೆಗಳನ್ನು ಕೂಗಿದರು. ನಂತರ ರಥಬೀದಿಯಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದರು. ಬಳಿಕ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎ.ಎಸ್‌.ಐ.) ಹಂಪಿ ವೃತ್ತದ ಡೆಪ್ಯುಟಿ ಸೂಪರಿಟೆಂಡೆಂಟ್‌ ಹಾಗೂ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

‘ದುಷ್ಕೃತ್ಯ ಎಸಗಿರುವವರು ಎಷ್ಟೇ ಪ್ರಭಾವಶಾಲಿಯಾಗಿರಲಿ ಅವರನ್ನು ಬಂಧಿಸಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ತೋರಿದಲ್ಲಿ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು’ ಎಂದು ಮನವಿ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.

‘ಹಂಪಿಯಲ್ಲಿ ಸ್ಮಾರಕಗಳನ್ನು ಭಗ್ನಗೊಳಿಸುತ್ತಿರುವ ಪ್ರಕರಣ ಹೊಸದೇನಲ್ಲ. ಹಿಂದೆಯೂ ಇಂತಹ ಘಟನೆಗಳು ಜರುಗಿವೆ. ಕೋಟಿಲಿಂಗ ಭಗ್ನ, ಮಾಲ್ಯವಂತ ರಘುನಾಥ ಮಂದಿರದ ಗಾಳಿ ಗೋಪುರ ಧ್ವಂಸಗೊಳಿಸಲಾಗಿತ್ತು. ಈಗ ವಿಷ್ಣು ದೇಗುಲದ ಸರದಿ. ಇದು ಭದ್ರತೆಯ ವೈಫಲ್ಯ ಎತ್ತಿ ತೋರಿಸುತ್ತದೆ. ಕೂಡಲೇ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕೈಗೊಳ್ಳಬೇಕು. ಎಲ್ಲ ಸ್ಮಾರಕಗಳಿಗೂ ಭದ್ರತೆಯನ್ನು ಖಾತ್ರಿ ಪಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಸಮಿತಿ ಸಂಚಾಲಕ ಅನಿಲ್‌ ನಾಯ್ಡು, ಬಿಜೆಪಿ ಮುಖಂಡರಾದ ಗುದ್ಲಿ ಪರಶುರಾಮ, ಅನಂತ ಪದ್ಮನಾಭ, ಅನಿಲ್‌ ಜೋಷಿ, ಹನುಮಂತ, ಓಬಯ್ಯ, ರಾಮಚಂದ್ರಗೌಡ, ಕೋರಿ ಪಕೀರಪ್ಪ, ಕೇಶವ, ಶ್ರೀರಾಮುಲು, ಮಂಜುನಾಥ, ನವೀನ, ಮೌನೇಶ ಬಡಿಗೇರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT