ಶನಿವಾರ, ನವೆಂಬರ್ 23, 2019
18 °C

ಮಳೆಗೆ ಹಂಪಿ ರಸ್ತೆಗಳು ಅಯೋಮಯ

Published:
Updated:
Prajavani

ಹೊಸಪೇಟೆ: ಇತ್ತೀಚೆಗೆ ಸುರಿದ ಮಳೆಯಿಂದ ತಾಲ್ಲೂಕಿನ ಹಂಪಿ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಪ್ರವಾಸಿಗರು ಸರ್ಕಸ್‌ ಮಾಡುತ್ತ ಸ್ಮಾರಕಗಳನ್ನು ವೀಕ್ಷಿಸಲು ಹೋಗುವಂತಾಗಿದೆ.

ಹಂಪಿಯ ರಾಣಿ ಸ್ನಾನಗೃಹ, ನೆಲಸ್ತರ ಶಿವ ದೇವಾಲಯ, ಮಹಾನವಮಿ ದಿಬ್ಬ, ಆನೆಸಾಲು ಮಂಟಪ, ಉಗ್ರ ನರಸಿಂಹ, ಗೆಜ್ಜೆ ಮಂಟಪ, ಎದುರು ಬಸವಣ್ಣ ಮಂಟಪದ ಮುಂಭಾಗ ಆಳುದ್ದ ಗುಂಡಿಗಳು ನಿರ್ಮಾಣವಾಗಿದ್ದು, ಅದರಲ್ಲಿ ಅಪಾರ ಪ್ರಮಾಣದ ಮಳೆ ನೀರು ಸಂಗ್ರಹವಾಗಿದೆ.

ಕಳೆದೊಂದು ತಿಂಗಳಿಂದ ನಿರಂತರವಾಗಿ ಮಳೆ ಸುರಿದ ಕಾರಣ ರಸ್ತೆಗಳು ಹದಗೆಟ್ಟಿವೆ. ಪ್ರವಾಸಿಗರು ಅದರಲ್ಲಿಯೇ ಹೆಣಗಾಡುತ್ತ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದಾರೆ. ಮಳೆಗಾಲದಲ್ಲಿ ಹಂಪಿ ಸ್ಮಾರಕಗಳನ್ನು ಕಣ್ತುಂಬಿಕೊಳ್ಳಲೆಂದೇ ಅನೇಕರು ದೂರದ ಊರುಗಳಿಂದ ಬರುತ್ತಾರೆ.

ಕೆಲವರು ಬೈಸಿಕಲ್‌ನಲ್ಲಿ, ಮತ್ತೆ ಕೆಲವು ಜನ ಕಾಲ್ನಡಿಗೆಯಲ್ಲಿ ಸುತ್ತಾಡಿಕೊಂಡು ಬಯಲು ವಸ್ತು ಸಂಗ್ರಹಾಲಯವನ್ನು ಕಣ್ತುಂಬಿಕೊಳ್ಳುತ್ತಾರೆ. ಆದರೆ, ಸಂಪರ್ಕ ರಸ್ತೆಗಳಲ್ಲಿ ನೀರು ನಿಂತು ಕೊಚ್ಚೆಯಾಗಿರುವುದರಿಂದ ಪ್ರವಾಸಿಗರು ಹೋಗಿ ಬರಲು ತೊಂದರೆ ಅನುಭವಿಸುತ್ತಿದ್ದಾರೆ. ಈ ವಿಷಯ ಅರಿವಿಗೆ ಬಂದರೂ ಅಧಿಕಾರಿಗಳು ಮಾತ್ರ ಜಾಣ ಮೌನ ವಹಿಸಿದ್ದಾರೆ ಎಂದು ದೂರುತ್ತಾರೆ ಸ್ಥಳೀಯರು.

‘ಹಂಪಿ ವಿಶ್ವ ಪಾರಂಪರಿಕ ತಾಣ. ನಿತ್ಯ ಇಲ್ಲಿಗೆ ದೇಶ–ವಿದೇಶಗಳಿಂದ ನೂರಾರು ಜನ ಬಂದು ಹೋಗುತ್ತಾರೆ. ಅದರಲ್ಲೂ ಮಳೆಗಾಲದಲ್ಲಿ ವಾತಾವರಣ ತಂಪಾಗಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇತ್ತೀಚೆಗೆ ಸತತವಾಗಿ ಮಳೆ ಸುರಿದಿರುವುದರಿಂದ ಒಳ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಅನೇಕ ಕಡೆ ಮೊಳಕಾಲುದ್ದ ನೀರು ನಿಂತಿದೆ. ಪ್ರವಾಸಿಗರ ವಾಹನಗಳು ಸಂಚರಿಸಲು ತೊಂದರೆಯಾಗುತ್ತಿದೆ’ ಎಂದು ಹಂಪಿ ನಿವಾಸಿ ರಮೇಶ ತಿಳಿಸಿದರು.

‘ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ, ಹಂಪಿ ವಿಶ್ವ ಪಾರಂಪರಿಕ ನಿರ್ವಹಣಾ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆಗಳಿದ್ದರೂ ನಿರ್ವಹಣೆ ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತಿವೆ. ಎಲ್ಲೆಲ್ಲಿ ನೀರು ನಿಲ್ಲುತ್ತದೆಯೋ ಅಂತಹ ಕಡೆಗಳಲ್ಲಿ ಮಣ್ಣು ಸುರಿದರೆ ಸಮಸ್ಯೆ ಬಗೆಹರಿದು ಹೋಗುತ್ತದೆ. ಆದರೆ, ಯಾರೊಬ್ಬರೂ ಮುತುವರ್ಜಿ ವಹಿಸದ ಕಾರಣ ಪ್ರವಾಸಿಗರು ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ಹಂಪಿಗೆ ಕೆಟ್ಟ ಹೆಸರು ಬರುತ್ತದೆ’ ಎಂದು ಹೇಳಿದರು.

‘ಹಂಪಿಯ ಒಳ ರಸ್ತೆಗಳಲ್ಲಿ ಟಾರ್‌ ಹಾಕಲು ಆಗುವುದಿಲ್ಲ. ಆದರೆ, ಮಣ್ಣಿನ ಕಚ್ಚಾ ರಸ್ತೆಗಳನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಸಾಕು. ಅದು ಕೂಡ ಮಾಡಲು ಆಗುವುದಿಲ್ಲವೆಂದರೆ ಎರಡ್ಮೂರು ಇಲಾಖೆಗಳು ಏಕಿರಬೇಕು’ ಎಂದು ಇನ್ನೊಬ್ಬ ನಿವಾಸಿ ರಾಜು ಪ್ರಶ್ನಿಸಿದರು.

ಪ್ರತಿಕ್ರಿಯಿಸಿ (+)