ನ.3ರಿಂದ ವಿಜಯನಗರ ಸಾಮ್ರಾಜ್ಯದ ವೈಭವ

7
ಹಂಪಿ ಉತ್ಸವ ಸಿದ್ದತಾ ಸಭೆಯಲ್ಲಿ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಘೋಷಣೆ

ನ.3ರಿಂದ ವಿಜಯನಗರ ಸಾಮ್ರಾಜ್ಯದ ವೈಭವ

Published:
Updated:
Deccan Herald

ಬಳ್ಳಾರಿ: ‘ಪ್ರತಿ ವರ್ಷದಂತೆ ಈ ಬಾರಿಯೂ ನವೆಂಬರ್ 3, 4 ಹಾಗೂ 5ರಂದು ಹಂಪಿ ಉತ್ಸವ ನಡೆಯಲಿದೆ. ಈ ಬಾರಿ ವೇದಿಕೆಗಳ ಸಂಖ್ಯೆಯನ್ನು 5ಕ್ಕೆ ಇಳಿಸಲಾಗುವುದು. ಕಲಾವಿದರ ಆಯ್ಕೆ ಪಾರದರ್ಶಕವಾಗಿರಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಹಂಪಿ ಸಿದ್ದತಾ ಸಭೆಯಲ್ಲಿ ಮಾತನಾಡಿದ ಅವರು, ‘ಕಲೆ ಯಾರ ಆಸ್ತಿಯೂ ಅಲ್ಲ. ಪ್ರತಿಭೆ ಇದ್ದರೆ ಅವಕಾಶ ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಮಾಧ್ಯಮ ಇಂದು ತುಂಬಾ ಶಕ್ತಿಶಾಲಿಯಾಗಿದೆ. ಇತಿಹಾಸವುಳ್ಳ ಪುಣ್ಯಭೂಮಿಯಲ್ಲಿ ಕಲೆಯನ್ನು ಪ್ರದರ್ಶಿಸುವ ಅವಕಾಶ ಸಿಕ್ಕಿದೆ ಎಂದು ಖುಷಿಪಡಿ. ಕೊಟ್ಟ ಸಂಭಾವನೆ ಮುಖ್ಯವಲ್ಲ’ ಎಂದರು.

‘ವೇದಿಕೆಗಳ ಸಂಖ್ಯೆ ಕಡಿಮೆ ಮಾಡಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಮಿತಿ ರಚನೆ ಮಾಡಲಾಗುವುದು. ಕಲಾವಿದರ ಆಯ್ಕೆಯಲ್ಲಿ ರಿಹರ್ಸಲ್ ನಡೆಸಿ, ಚಿತ್ರಿಕರಣ ಮಾಡಬೇಕು. ಒಂದೂವರೆ ತಿಂಗಳೊಳಗಾಗಿ ಕಲಾವಿದರನ್ನು ಅಂತಿಮಗೊಳಿಸಬೇಕು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗೆ ಹೇಳಿದರು.

‘ಉಪ ಮುಖ್ಯಮಂತ್ರಿಯಾಗಿದ್ದ ಎಂ.ಪಿ. ಪ್ರಕಾಶ್ ಅವರು ದೇಶವೇ ಗಮನ ಸೆಳೆಯುವಂತಹ ಹಂಪಿ ಉತ್ಸವ ಆರಂಭಿಸಿದರು.  ಉತ್ಸವವನ್ನು ಯಶಸ್ವಿಯಾಗಿ ನಡೆಸುವ ಮೂಲಕ, ಅವರ ಗೌರವ ನೀಡಬೇಕು’ ಎಂದು ಕಿವಿಮಾತು ಹೇಳಿದರು.

ಜಾನಪದ ಅಕಾಡೆಮಿ ಸದಸ್ಯೆ ಮಂಜಮ್ಮ ಜೋಗತಿ ಮಾತನಾಡಿ, ‘ಕಳೆದ ಬಾರಿ ವೇದಿಕೆಗಳು ಖಾಲಿ ಇದ್ದವು. ಇದರಿಂದ ಕಲಾವಿದರಿಗೆ ಬೇಸರವಾಗುತ್ತದೆ. ಪ್ರೇಕ್ಷಕರು ಹೆಚ್ಚಾಗಿದ್ದರೆ ಹುಮ್ಮಸ್ಸಿನಿಂದ ಕಾರ್ಯಕ್ರಮ ನೀಡುತ್ತಾರೆ. ಸಮಯ ಕಡಿಮೆ ಕೊಟ್ಟರೂ ಪರವಾಗಿಲ್ಲ. ವೇದಿಕೆಗಳ ಸಂಖ್ಯೆ ಕಡಿಮೆ ಮಾಡಬೇಕು’ ಎಂದಾಗ ‘ಕಡಿಮೆ ವೇದಿಕ ನಿರ್ಮಾಣ ಮಾಡಿದರೆ ಹೆಚ್ಚು ಕಲಾವಿದರಿಗೆ ಅವಕಾಶ ಕೊಡಲು ಸಾಧ್ಯವಾಗುವುದಿಲ್ಲ’ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾದ್ ಮನೋಹರ್ ಹೇಳಿದರು.

ಸಭೆಯಲ್ಲಿ ಕೇಳಿದ್ದು...:

’ಉತ್ಸವದಲ್ಲಿ ಸ್ಥಳಿಯರನ್ನು ಕಡೆಗಣಿಸಲಾಗುತ್ತಿದೆ. ಕೇವಲ ಭಿತ್ತಿಚಿತ್ರಗಳಿಗೆ ಸೀಮಿತವಾಗಿದೆ. ಚಿತ್ರಕಲಾ ಶಿಬಿರದಲ್ಲಿ ತಾರತಮ್ಯ ಮಾಡಲಾಗುತ್ತಿದೆ’ ಎಂದು ರಫೀಕ್ ದೂರಿದರು.

‘ಉತ್ಸವದಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು’ ಎಂದು ಬೆಳಗಲ್ಲು ವೀರಣ್ಣ ಸಲಹೆ ಹೇಳಿದರು.

‘ಪ್ಲಾಸ್ಟಿಕ್ ಫ್ರೀ ಉತ್ಸವಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ವಿದ್ಯಾರ್ಥಿಯೊಬ್ಬರು ಹೇಳಿದರು. ‘ಬಯಲಾಟ ನಶಿಸಿ ಹೋಗುತ್ತಿದೆ ಅದನ್ನು ರಕ್ಷಿಸಿ’ ಎಂದು ಹಿರಿಯ ಕಲಾವಿದರೊಬ್ಬರು ಅಲವತ್ತುಕೊಂಡರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅರುಣ್ ರಂಗರಾಜನ್ ಮತ್ತು ಸಂಸದ ಸೈಯದ್ ನಾಸೀರ್ ಹುಸೇನ್, ಶಾಸಕರಾದ ಪಿ.ಟಿ. ಪರಮೇಶ್ವರ ನಾಯ್ಕ, ಸೋಮಲಿಂಗಪ್ಪ, ಗಣೇಶ, ಆನಂದ್ ಸಿಂಗ್ ಮತ್ತು ಕಲಾವಿದೆ ಸುಭದ್ರಮ್ಮ ಮನ್ಸೂರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !