ತೂಗುಯ್ಯಾಲೆಯಲ್ಲಿ ಹಂಪಿ ಉತ್ಸವ

7
ಜಿಲ್ಲಾ ಆಡಳಿತ ಸಿದ್ಧವಿದ್ದರೂ ಸರ್ಕಾರದಿಂದ ಸಿಗದ ಹಸಿರು ನಿಶಾನೆ

ತೂಗುಯ್ಯಾಲೆಯಲ್ಲಿ ಹಂಪಿ ಉತ್ಸವ

Published:
Updated:
Prajavani

ಹೊಸಪೇಟೆ: ಒಂದಿಲ್ಲೊಂದು ಕಾರಣದಿಂದ ಮುಂದೂಡುತ್ತಲೇ ಬಂದಿರುವ ‘ಹಂಪಿ ಉತ್ಸವ’ ಈ ತಿಂಗಳು ಕೂಡ ನಡೆಯುವುದು ಅನುಮಾನವಾಗಿದೆ.

ಪ್ರತಿ ವರ್ಷದ ನ. 3ರಿಂದ 5ರ ವರೆಗೆ ಹಂಪಿ ಉತ್ಸವ ಆಚರಿಸಲಾಗುತ್ತದೆ. ಬರದ ನೆಪವೊಡ್ಡಿ ಸರ್ಕಾರ 2018ರ ನವೆಂಬರ್‌ನಲ್ಲಿ ಉತ್ಸವ ಆಚರಿಸದಿರಲು ತೀರ್ಮಾನಿಸಿತ್ತು. ಆದರೆ, ಸ್ಥಳೀಯರು ಹಾಗೂ ಕಲಾವಿದರ ಒತ್ತಡಕ್ಕೆ ಮಣಿದು ಸರಳವಾಗಿಯಾದರೂ ಎರಡು ದಿನಗಳ ಕಾಲ ಉತ್ಸವ ಆಚರಿಸಲಾಗುವುದು ಎಂಬ ನಿರ್ಧಾರಕ್ಕೆ ಬಂತು.

ಉತ್ಸವಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆಡಳಿತ ಫೆ. 16, 17 ದಿನಾಂಕವನ್ನು ಸರ್ಕಾರಕ್ಕೆ ಸಲಹೆ ಮಾಡಿ ಎರಡು ವಾರಗಳಾಗುತ್ತ ಬಂದಿದೆ. ಫೆಬ್ರುವರಿ ಮೊದಲ ವಾರ ಮುಗಿಯುತ್ತ ಬಂದಿದೆ. ಆದರೆ, ಈ ನಿಟ್ಟಿನಲ್ಲಿ ಯಾವುದೇ ಪ್ರಗತಿ ಕಂಡು ಬಂದಿಲ್ಲ.

ಈ ಹಿಂದಿನಂತೆ ಒಂಬತ್ತು ವೇದಿಕೆಗಳ ಬದಲು ನಾಲ್ಕರಿಂದ ಐದು ವೇದಿಕೆಗಳಲ್ಲಿ ಉತ್ಸವ ಆಚರಿಸಲಾಗುವುದು ಎಂದು ಜಿಲ್ಲಾ ಆಡಳಿತ ತಿಳಿಸಿದೆ. ಹೀಗಿದ್ದರೂ ಸಿದ್ಧತೆಗೆ 15ರಿಂದ 20 ದಿನ ಕಾಲಾವಕಾಶ ಬೇಕು. ಹಾಗಾಗಿ ಫೆ. 16, 17ರಂದು ಉತ್ಸವ ಬಹುತೇಕ ನಡೆಯುವುದಿಲ್ಲ ಎಂದೇ ಹೇಳಬಹುದು. ಈ ವಿಷಯವನ್ನು ಜಿಲ್ಲಾ ಆಡಳಿತವೇ ಒಪ್ಪಿಕೊಂಡಿದೆ. 

ಮೇಲಿಂದ ಸರ್ಕಾರ ಬಜೆಟ್‌ ಮಂಡನೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವುದರಿಂದ ಉತ್ಸವದತ್ತ ಗಮನ ಹರಿಸುವುದು ಅನುಮಾನ ಎನ್ನಲಾಗಿದೆ. ಫೆಬ್ರುವರಿ ಕೊನೆಯ ವಾರ ಅಥವಾ ಮಾರ್ಚ್‌ ಮೊದಲ ವಾರದಲ್ಲಿ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದ್ದು, ನೀತಿ ಸಂಹಿತೆ ಜಾರಿಗೆ ಬಂದರೆ ಉತ್ಸವ ನಡೆಯದು.

ಈ ಕುರಿತು ಜಿಲ್ಲಾಧಿಕಾರಿ ರಾಮಪ್ರಸಾದ್‌ ಮನೋಹರ್‌ ಅವರನ್ನು ಸಂಪರ್ಕಿಸಿದಾಗ, ‘ಪ್ರವಾಸೋದ್ಯಮ ಇಲಾಖೆ ₹60 ಲಕ್ಷ ಕೊಟ್ಟಿದೆ. ಹೆಚ್ಚಿನ ಅನುದಾನ ಕೋರಿ ಹಣಕಾಸು ಇಲಾಖೆಗೆ ಕೋರಿಕೆ ಸಲ್ಲಿಸಿದ್ದೇವೆ. ಸದ್ಯ, ರಾಜ್ಯ ಸರ್ಕಾರವು ಬಜೆಟ್‌ ಮಂಡಿಸುವ ಸಿದ್ಧತೆಯಲ್ಲಿ ತೊಡಗಿದೆ. ಅದಾದ ನಂತರ ಹಣ ಬಿಡುಗಡೆಯಾಗಬಹುದು’ ಎಂದು ತಿಳಿಸಿದರು.

‘ಫೆ. 16, 17ಕ್ಕೆ ಉತ್ಸವ ಆಚರಿಸುವ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಿದ್ದೆವು. ಇನ್ನು ಒಪ್ಪಿಗೆ ಸಿಕ್ಕಿಲ್ಲ. ಆದರೆ, ನಮ್ಮ ಕಡೆಯಿಂದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ನನ್ನ ಪ್ರಕಾರ, ಇನ್ನು ಕೆಲವು ದಿನ ಮುಂದೆ ಹೋದರೆ ಒಳ್ಳೆಯದು ಅನಿಸುತ್ತಿದೆ. ಸದ್ಯ ಚಳಿ ಬಹಳ ಇದೆ. ಹೀಗಿದ್ದರೆ ಜನ ಬರುವುದು ಕಷ್ಟವಾಗುತ್ತದೆ. ಹೆಸರಿಗೆ ಮಾತ್ರ ಉತ್ಸವ ಆಗಬಾರದು. ಜನ ಅದರಲ್ಲಿ ಪಾಲ್ಗೊಳ್ಳಬೇಕು’ ಎಂದು ಹೇಳಿದರು.

‘ಈಗಿನ ಪರಿಸ್ಥಿತಿ ನೋಡಿದರೆ ಇನ್ನು ಕೆಲವು ದಿನ ಮುಂದಕ್ಕೆ ಹೋಗಬಹುದು. ಆದರೆ, ಮಾರ್ಚ್‌ ಮೊದಲ ವಾರದ ಒಳಗಾದರೂ ಮಾಡುತ್ತೇವೆ’ ಎಂದು ಭರವಸೆ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !