ಬುಧವಾರ, ಡಿಸೆಂಬರ್ 11, 2019
27 °C

ಸರಳ ಹಂಪಿ ಉತ್ಸವ ಅಗತ್ಯ: ಉಗ್ರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಸರಳವಾಗಿ ಹಂಪಿ ಉತ್ಸವ‌ವನ್ನು ನಡೆಸುವಂತೆ ರಾಜ್ಯ ಸರ್ಕಾರದ ಗಮನ ಸೆಳೆಯುವೆ ಎಂದು ಸಂಸದ ವಿ.ಎಸ್.ಉಗ್ರಪ್ಪ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನರ ಭಾವನೆಗಳಿಗೆ ಸ್ಪಂದಿಸಬೇಕು ಎಂದು ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಗಮನ ಸೆಳೆದಿರುವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.‌ ಸರ್ಕಾರವೂ ಸ್ಪಂದಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತದ ನಿರ್ಧಾರಕ್ಕೆ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಉತ್ಸವಕ್ಕಾಗಿ ಭಿಕ್ಷೆ ಬೇಡಿ‌ ಸರ್ಕಾರಕ್ಕೆ ಹಣ ನೀಡುವುದಾಗಿ ಬಿಜೆಪಿ‌ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿಕೆ‌ ನೀಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂಥ ಹೇಳಿಕೆ ನೀಡಬಾರದು ಎಂದರು.

ಇದನ್ನೂ ಓದಿ: ಹಂಪಿ ಉತ್ಸವಕ್ಕೆ ಹಣವಿಲ್ಲದಿದ್ದರೆ ಭಿಕ್ಷೆ ಬೇಡಿ ಕೊಡುತ್ತೇವೆ: ಸೋಮಶೇಖರ ರೆಡ್ಡಿ

ವಿಧಾನ ಪರಿಷತ್‌ ಸ್ಥಾನಕ್ಕೆ ಬಳ್ಳಾರಿ ಅಭ್ಯರ್ಥಿ 

ತಮ್ಮ ರಾಜೀನಾಮೆಯಿಂದ ತೆರವಾಗಿರುವ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಅಭ್ಯರ್ಥಿಯನ್ನು ಜಿಲ್ಲೆಯಿಂದಲೇ ಆಯ್ಕೆ ಮಾಡಬೇಕು. ಇಬ್ಬರು ಶಾಸಕರಿಗೆ ಸಚಿವ ಸ್ಥಾನ ಕೊಡಬೇಕು. ನಿಗಮ ಮಂಡಳಿಗಳಲ್ಲೂ ಜಿಲ್ಲೆಯ ಮೂವರಿಗೆ ಅವಕಾಶ ಕಲ್ಪಿಸಬೇಕು ಎಂದು ಪಕ್ಷದ‌ ವರಿಷ್ಠರಿಗೆ‌ ಮನವಿ ಮಾಡಿರುವೆ ಎಂದರು.

ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ‌ ಜಿಲ್ಲೆಯ ಒಂದು ಡಜನ್ ಮಂದಿ ನನ್ನೊಂದಿಗೆ ಚರ್ಚಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಎಲ್ಲ ಹಂತದ‌ ಮುಖಂಡರಲ್ಲೂ ಉತ್ತಮ ಸಾಮರಸ್ಯವಿದೆ. ಶಾಸಕರಲ್ಲಿ ಗುಂಪುಗಾರಿಕೆ, ಯಾವ ಮುಖಂಡರ ಮೇಲೂ ಯಾರಿಗೂ ಅಸಮಾಧಾನ ಇಲ್ಲ. ಇದೆ ಎಂಬುದು ಎದುರಾಳಿ‌ ಪಕ್ಷಗಳು ಹುಟ್ಟು ಹಾಕಿರುವ ಊಹಾಪೋಹ ಎಂದರು.

ಕೇಂದ್ರಕ್ಕೆ ಶ್ರೀರಾಮ ಬೇಕೋ, ರೈತ ಬೇಕೋ

ದೆಹಲಿಯಲ್ಲಿ ರೈತರ‌ ಮುತ್ತಿಗೆ, ಶ್ರೀರಾಮ ಮಂದಿರ ವಿವಾದದ ನಡುವೆ ಕೇಂದ್ರ ಸರ್ಕಾರವು ತನಗೆ ರೈತರು ಬೇಕೋ, ಶ್ರೀರಾಮ ಬೇಕೋ ಎಂಬುದನ್ನು ನಿರ್ಧರಿಸಬೇಕು ಎಂದು ಪ್ರತಿಪಾದಿಸಿದರು.

ರೈತರು ಮತ್ತು ಸೈನಿಕರ ರಕ್ಷಣೆ ಮಾಡುವುದಾಗಿ 2014ರಲ್ಲಿ ಪ್ರಧಾನಿ ಮೋದಿ ಭರವಸೆ ನೀಡಿದ್ದರು. ಆದರೆ ಎಂ.ಎಸ್.ಸ್ವಾಮಿನಾಥನ್ ವರದಿಯ‌ನ್ನು ಜಾರಿಗೊಳಿಸಲು ಆಗಲ್ಲ ಎಂದು ಕೇಂದ್ರ ಸರ್ಕಾರ‌ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸುವುದು ವಿಪರ್ಯಾಸ ಎಂದರು.
ಸರ್ಕಾರಕ್ಕೆ ರಾಮನ ಬಗ್ಗೆ ಬದ್ಧತೆ ಇಲ್ಲ. ಇದ್ದರೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸಾಲ ‌ಮನ್ನಾ ಮಾಡಲಿ ಎಂದು ಪ್ರತಿಪಾದಿಸಿದರು.
ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ‌ಸರ್ಕಾರ ಸಂಸತ್ತಿನ ವಿಶೇಷ ಅಧಿವೇಶನವನ್ನು ನಡೆಸಲಿ ಎಂದು ಒತ್ತಾಯಿಸಿದರು. ಶ್ರೀರಾಮ ಜನ್ಮಭೂಮಿ ‌ವಿವಾದ ಇತ್ಯರ್ಥವಾಗಬಾರದು ಎಂದು ಪ್ರಧಾನಿ ಮೋದಿಯವರೇ ಸುಪ್ರೀಂ ಕೋರ್ಟ್ ಮೇಲೆ‌ ಒತ್ತಡ ಹೇರುವುದು ನಾಚಿಕೆಗೇಡು ಎಂದರು.

ರಾಮಮಂದಿರ ನಿರ್ಮಾಣಕ್ಕೆ‌ ನನ್ನ ವಿರೋಧವಿಲ್ಲ. ತೀರ್ಪಿನಲ್ಲಿ‌ ಅವಕಾಶ ದೊರಕಿದರೆ ನಿರ್ಮಾಣವಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು