ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ ಮಲಗುವ ಕೋಣೆ, ಬೆಳಿಗ್ಗೆ ಪಾಠದ ಕೊಠಡಿ: ಶೆಡ್‍ನಲ್ಲಿಯೇ ವಸತಿಶಾಲೆ

Last Updated 10 ನವೆಂಬರ್ 2019, 19:53 IST
ಅಕ್ಷರ ಗಾತ್ರ

ಹರಪನಹಳ್ಳಿ: ಇದು ರಾತ್ರಿ ವೇಳೆ ವಿದ್ಯಾರ್ಥಿಗಳು ಮಲಗುವ ಕೋಣೆ. ಬೆಳಿಗ್ಗೆ ಅದೇ ಪಾಠದ ಕೊಠಡಿ. ಅಸುರಕ್ಷಿತ ಶೆಡ್‍ನಲ್ಲಿಯೇ ನಡೆಯುತ್ತಿರುವ ಸರ್ಕಾರಿ ಇಂದಿರಾಗಾಂಧಿ ವಸತಿಶಾಲೆಯಲ್ಲಿ ಇರುವುದು ಒಂದೆರಡು ಸಮಸ್ಯೆಗಳಲ್ಲ. ಹತ್ತಾರು.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯಿಂದ 2017-18ನೇ ಶೈಕ್ಷಣಿಕ ಸಾಲಿನಲ್ಲಿ ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಆರಂಭವಾದ ವಸತಿಶಾಲೆ ಇದು. ಈಗ ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯ ಆಡಳಿತಕ್ಕೆ ಒಳಪಟ್ಟಿದೆ. ಪಟ್ಟಣದ ಉಪ್ಪಾರಗೇರಿಯ ಖಾಸಗಿ ಕಟ್ಟಡ ಮತ್ತು ಶೆಡ್‍ನಲ್ಲಿ ತರಗತಿ ನಡೆಸುವ ದುರ್ಗತಿ ಇಲ್ಲಿನ ಶಿಕ್ಷಕರದ್ದು.

ಸ್ಥಳ ಕೊರತೆಯ ನಡುವೆಯೇ ತಾಲ್ಲೂಕಿನ ನಿಚ್ಚವ್ವನಹಳ್ಳಿ ಗ್ರಾಮಕ್ಕೆ ವಸತಿ ಶಾಲೆ ಮುಂಜೂರಾಗಿತ್ತು. ಅಲ್ಲಿ ಸ್ಥಳಾವಕಾಶ ದೊರೆಯಲಿಲ್ಲ. ಹೀಗಾಗಿ ನಜೀರ್ ನಗರದ ಬಳಿಯ ಮೊರಾರ್ಜಿ ದೇಸಾಯಿ ವಸತಿಶಾಲಾ ಕೊಠಡಿಯೊಂದರಲ್ಲಿ ಚಾಲನೆ ನೀಡಲಾಗಿತ್ತು.

ಎರಡು ವರ್ಷ ಅಲ್ಲಿಯೇ ನಡೆದ ಶಾಲೆಯು 6, 7 ಮತ್ತು 8ನೇ ತರಗತಿಗೆ ತಲುಪಿತು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆ, ಶಾಲೆ ಸ್ಥಳಾಂತರಕ್ಕೆ ಒತ್ತಡ ಹೆಚ್ಚಾಯಿತು. ಕೊನೆಗೆ ಪಟ್ಟಣದಲ್ಲಿ ನೆಲೆ ಪಡೆಯಿತು.

ಅಡುಗೆ ಕೋಣೆ, ಶೌಚಾಲಯ, ಮೂರು ಪ್ರತ್ಯೇಕ ಕೋಣೆಗಳು ಈ ಶಾಲೆಯಲ್ಲಿವೆ. ಅದರಲ್ಲಿಯೇ ಕಚೇರಿ, ಬಾಲಕಿಯರ ಹಾಸ್ಟೆಲ್‌, ತರಗತಿ ಕೋಣೆಗಳೆಂದು ವಿಭಾಗ ಮಾಡಲಾಗಿದೆ. ಬಾಲಕರ ವಾಸ್ತವ್ಯಕ್ಕೆ ತಗಡಿನ ಶೆಡ್‍ ನಿರ್ಮಿಸಲಾಗಿದೆ. ಎಲ್ಲ ಕೊಠಡಿಗಳಲ್ಲಿ ವಿದ್ಯಾರ್ಥಿಗಳ ಸಾಮಗ್ರಿ ಪೆಟ್ಟಿಗೆ ಇಡಲಾಗಿದೆ. ರಾತ್ರಿ ಮಲಗುವ ಕೋಣೆಯಾಗಿ, ಬೆಳಿಗ್ಗೆ ತರಗತಿ ನಡೆಸುವ ಕೋಣೆಯನ್ನಾಗಿ ಮಾರ್ಪಾಡು ಮಾಡಲಾಗುತ್ತಿದೆ.

‘ಸರ್ಕಾರಿ ವಸತಿ ಶಾಲೆಯಲ್ಲಿ ಕನ್ನಡ, ಹಿಂದಿ ಮತ್ತು ಗಣಿತ ವಿಷಯಕ್ಕೆ ಮೂವರು ಕಾಯಂ ಶಿಕ್ಷಕರಿದ್ದಾರೆ. ಆರು ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಪ್ರತಿ ತರಗತಿಯಲ್ಲಿ ಸರಾಸರಿ 50ರಂತೆ, 150 ವಿದ್ಯಾರ್ಥಿಗಳಿದ್ದಾರೆ. ಅಡುಗೆ ಮಾಡುವವರು ಮತ್ತು ರಾತ್ರಿ ಕಾವಲುಗಾರ ಸೇರಿ ಆರು ಜನ ಹೊರಗುತ್ತಿಗೆ ಸಿಬ್ಬಂದಿ ಇದ್ದಾರೆ. ಹಿಂದಿ ಶಿಕ್ಷಕರೇ ವಾರ್ಡನ್‍ನ ಹೆಚ್ಚುವರಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಇಲ್ಲಿಯವರೆಗೂ ಯಾವುದೇ ಸಮಸ್ಯೆ ಆಗದಂತೆ ಎಚ್ಚರವಹಿಸಿದ್ದೇವೆ’ ಎಂದು ಪ್ರಭಾರ ಉಪಪ್ರಾಚಾರ್ಯ ಭೀಮಣ್ಣ ದೊಡ್ಡಮನಿ ತಿಳಿಸಿದರು.

ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ ₹ 1,600ರಂತೆ 150 ಮಕ್ಕಳಿಗೂ ಸರ್ಕಾರವೇ ಹಣ ಭರಿಸುತ್ತದೆ. ನಿತ್ಯವೂ ವಿಶೇಷ ಅಡುಗೆ ಮಾಡಲಾಗುತ್ತದೆ. ವಾರಕ್ಕೊಮ್ಮೆ ಚಿಕನ್‍ ಊಟದ ವ್ಯವಸ್ಥೆ ಇದೆ. ಆದರೆ, ವಾರ್ಡನ್‍ ಅಡುಗೆ ವೇಳಾಪಟ್ಟಿ ಪ್ರಕಾರ ಊಟ ಕೊಡುತ್ತಿಲ್ಲ ಎಂದು ಯುವ ಮುಖಂಡ ಶೃಂಗಾರತೋಟ ಬಸವರಾಜ್ ದೂರಿದರು.

ಶಾಲಾ ತರಗತಿಗೆ ಸರಿಯಾಗಿ ಶಿಕ್ಷಕರು ಹಾಜರಾಗದೇ ಪಾಠಗಳು ಸರಿಯಾಗಿ ನಡೆಯುತ್ತಿಲ್ಲ. ಮೆನು ಚಾರ್ಟ್ ಪ್ರಕಾರ ಊಟ ಕೊಡುತ್ತಿಲ್ಲ. ಆದಷ್ಟು ಬೇಗ ಸ್ವಂತ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ, ಮಕ್ಕಳಿಗೆ ರಕ್ಷಣೆ ನೀಡಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

**

ರಾತ್ರಿ ಇಬ್ಬರು ಕಾವಲುಗಾರರು ಇದ್ದಾರೆ. ಕಸವನಹಳ್ಳಿ ಬಳಿ ಕಟ್ಟಡ ನಿರ್ಮಾಣ ಹಂತದಲ್ಲಿದೆ. ಪೂರ್ಣಗೊಂಡ ಬಳಿಕ ಸ್ಥಳಾಂತರಿಸಲಾಗುವುದು.
– ಭೀಮಣ್ಣ ದೊಡ್ಡಮನಿ, ಪ್ರಭಾರ ಉಪಪ್ರಾಚಾರ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT