ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ಅಂಜನಾದ್ರಿ ಮುಗೀತು, ಈಗ ಹಂಪಿ ಸರದಿ

ಹಂಪಿ ಸುತ್ತಮುತ್ತಲಿನ 14 ಹೋಟೆಲ್‌ಗಳಿಗೆ ಹಂಪಿ ಪ್ರಾಧಿಕಾರದಿಂದ ನೋಟಿಸ್‌
Last Updated 1 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ತುಂಗಭದ್ರಾ ನದಿಯ ಉತ್ತರ ದಂಡೆಯ ಗಂಗಾವತಿ ಸುತ್ತಮುತ್ತ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯೊಡ್ಡಿರುವ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣ ಪ್ರಾಧಿಕಾರ, ಈಗ ದಕ್ಷಿಣ ದಂಡೆಯಲ್ಲಿರುವ ಹಂಪಿ ಸುತ್ತಮುತ್ತಲಿನ ಪ್ರದೇಶದತ್ತ ಚಿತ್ತ ಹರಿಸಿದೆ.

ಆನೆಗೊಂದಿ, ರಾಮದುರ್ಗ, ಚಿಕ್ಕರಾಮಪುರ, ಹನುಮನಹಳ್ಳಿ, ಸಣಾಪುರದಲ್ಲಿ ಕಾನೂನುಬಾಹಿರವಾಗಿ ಕೃಷಿ ಜಮೀನುಗಳಲ್ಲಿ ನಡೆಸುತ್ತಿದ್ದ 49 ರೆಸಾರ್ಟ್‌, ಹೋಂ ಸ್ಟೇ, ಹೋಟೆಲ್‌ಗಳನ್ನು ಇತ್ತೀಚೆಗೆ ಪ್ರಾಧಿಕಾರ ತೆರವುಗೊಳಿಸಿದೆ. ಸುಪ್ರೀಂಕೋರ್ಟ್‌ ಸೂಚನೆ ಮೇರೆಗೆ 2020ರ ಮಾರ್ಚ್‌ 3ರಂದು ವಿರೂಪಾಪುರ ಗಡ್ಡಿಯಲ್ಲಿನ 19 ರೆಸಾರ್ಟ್‌ಗಳನ್ನು ಪ್ರಾಧಿಕಾರ ತೆರವುಗೊಳಿಸಿತ್ತು. ಒಂದಾದ ನಂತರ ಒಂದು ಅಕ್ರಮ ರೆಸಾರ್ಟ್‌, ಹೋಟೆಲ್‌ಗಳನ್ನು ತೆರವುಗೊಳಿಸುತ್ತಿರುವ ಪ್ರಾಧಿಕಾರ ಈಗ ಹಂಪಿ, ಕಡ್ಡಿರಾಂಪುರ, ಕಮಲಾಪುರದಲ್ಲೂ ಕಠಿಣ ಕ್ರಮಕ್ಕೆ ಮುಂದಾಗಿದೆ.

ಅದರ ಭಾಗವಾಗಿ ಈಗಾಗಲೇ ಪ್ರಾಧಿಕಾರ 14 ಹೋಟೆಲ್‌ಗಳನ್ನು ಗುರುತಿಸಿದೆ. ಎಲ್ಲ ಹೋಟೆಲ್‌ ಮಾಲೀಕರಿಗೆ ಈಗಾಗಲೇ ನೋಟಿಸ್‌ ಕೂಡ ನೀಡಿದೆ. ಅವರ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ವಿಷಯವನ್ನು ಸ್ವತಃ ಪ್ರಾಧಿಕಾರದ ಆಯುಕ್ತ ಸಿದ್ದರಾಮೇಶ್ವರ ಅವರು ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ.

‘ವಿಶ್ವ ಪ್ರಸಿದ್ಧ ಹಂಪಿ ಸುತ್ತಮುತ್ತಲಿನ ಪ್ರದೇಶ ಕೋರ್‌ ಜೋನ್‌ಗೆ ಸೇರಿದೆ. ಮೇಲಿಂದ ಕೃಷಿ ಜಮೀನುಗಳಲ್ಲಿ ಹೋಟೆಲ್‌ ನಡೆಸುತ್ತಿದ್ದಾರೆ. ಇದು ಸಂಪೂರ್ಣ ಕಾನೂನುಬಾಹಿರ. ಹೀಗಾಗಿ ಎಲ್ಲ ಹೋಟೆಲ್‌ ಮಾಲೀಕರಿಗೆ ನೋಟಿಸ್‌ ನೀಡಲಾಗಿದೆ. ಅವರ ಪ್ರತಿಕ್ರಿಯೆ ನೋಡಿಕೊಂಡು ಶೀಘ್ರವೇ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಸಿದ್ದರಾಮೇಶ್ವರ ತಿಳಿಸಿದ್ದಾರೆ.

‘ಕೃಷಿ ಜಮೀನುಗಳಲ್ಲಿ ಯಾವುದೇ ಕಾರಣಕ್ಕೂ ಹೋಟೆಲ್‌ ನಡೆಸುವುದಕ್ಕೆ ಅವಕಾಶವಿಲ್ಲ. ಒಂದುವೇಳೆ ಆ ಜಮೀನನ್ನು ಕೃಷಿಯೇತರ ಜಮೀನಾಗಿ ಮಾರ್ಪಡಿಸಿಕೊಂಡು, ಎಲ್ಲ ರೀತಿಯ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದರೆ ಅವಕಾಶ ಕಲ್ಪಿಸಬಹುದು. ಆದರೆ, ಕಾನೂನು ಮೀರಿ ಯಾರೂ ಹೋಟೆಲ್‌ ನಡೆಸುವಂತಿಲ್ಲ. ಅದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕಲ್ಪಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಾಧಿಕಾರ ನೋಟಿಸ್‌ ನೀಡಿರುವುದನ್ನು ಹೆಸರು ಹೇಳಲಿಚ್ಛಿಸದ ಕಡ್ಡಿರಾಂಪುರದ ಹೋಟೆಲ್‌ ಮಾಲೀಕರೊಬ್ಬರು ಖಚಿತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT