ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವು ಗೆದ್ದು ಬಂದ

Last Updated 2 ಡಿಸೆಂಬರ್ 2021, 10:46 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಇಲ್ಲಿನ ಚಿತ್ತವಾಡ್ಗಿ ನಿವಾಸಿ ಕಳೆದ 17 ವರ್ಷಗಳಿಂದ ಎಚ್‌ಐವಿಯೊಂದಿಗೆ ಸಹಯಾನ ನಡೆಸುತ್ತಿದ್ದಾರೆ.

ಈ ಹಿಂದೆ ತಮಗೆ ಎಚ್‌ಐವಿ ಇದೆ ಎಂದು ಹೇಳಿಕೊಳ್ಳಲು ಹಿಂಜರಿಯುತ್ತಿದ್ದ ಅವರು ಈಗ ಯಾವುದೇ ಅಳುಕಿಲ್ಲದೇ ಅದನ್ನು ಹೇಳಿಕೊಳ್ಳುತ್ತಾರೆ. ತಮ್ಮಿಂದ ಬೇರೆ ಮಹಿಳೆಗೆ ಸಮಸ್ಯೆ ಆಗದಿರಲೆಂದು ಎಚ್‌ಐವಿ ಪೀಡಿತ ಮಹಿಳೆಯನ್ನು ವರಿಸಿದ್ದರು. ಈ ದಂಪತಿಗೆ ಈಗ ಇಬ್ಬರು ಮಕ್ಕಳು. ಅವರಿಬ್ಬರಿಗೆ ಈ ಸೋಂಕು ತಗುಲಿಲ್ಲ. ಅವರು ಆರೋಗ್ಯದಿಂದ ಇದ್ದಾರೆ.

ಎಚ್‌ಐವಿ ತಗುಲಿದ ನಂತರ ಕೋಮಾ ಹಂತಕ್ಕೆ ಹೋಗಿ ಸಾವು ಗೆದ್ದು ಬಂದಿದ್ದಾರೆ. ಮನೆಯ ಕುಟುಂಬ ಸದಸ್ಯರೆಲ್ಲರೂ ಅವರನ್ನು ನಿಕೃಷ್ಟವಾಗಿ ಕಂಡು ದೂರವಾಗಿದ್ದರು. ಆದರೆ, ಸಂಕಷ್ಟದ ಸಮಯದಲ್ಲಿ ಆರೈಕೆ ಮಾಡಿ, ಸಾವು ಗೆದ್ದು ಬರಲು ನೆರವಾದವರು ಅವರ ತಾಯಿ.

‘ನನಗೀಗ 35 ವರ್ಷ ವಯಸ್ಸು. 2004ರಲ್ಲಿ ಹೊಟ್ಟೆ ನೋವು, ಭೇದಿ, ತೂಕ ಕಡಿಮೆಯಾಗಲು ಆರಂಭಿಸಿತು. ರಕ್ತ ಪರೀಕ್ಷೆ ಮಾಡಿಸಿದಾಗ ಎಚ್‌ಐವಿ ದೃಢಪಟ್ಟಿತ್ತು. ಅದು ಹೇಗೆ ಬಂತು ಎಂಬುದು ನನಗೆ ಗೊತ್ತಾಗಲೇ ಇಲ್ಲ. ಈ ವಿಷಯ ನಮ್ಮ ಮನೆಯವರು, ಸುತ್ತಮುತ್ತಲಿನವರಿಗೆ ಗೊತ್ತಾದ ನಂತರ ನನ್ನನ್ನು ಕೀಳಾಗಿ ಕಂಡರು. ಇದರಿಂದ ಖಿನ್ನತೆಗೆ ಒಳಗಾಗಿ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಕೋಮಾ ಸ್ಥಿತಿಗೆ ಹೋಗಿದ್ದೆ. ಆದರೆ, ನನ್ನ ಅಮ್ಮ ಧೈರ್ಯ ತುಂಬಿ ಆರೈಕೆ ಮಾಡಿದಳು. ವೈದ್ಯರು ಕೂಡ ಉಪಚರಿಸಿದರು. ಅದರ ಪರಿಣಾಮ ಜೀವಂತವಾಗುಳಿದೆ’ ಎಂದು ನೆನಪಿಸಿಕೊಂಡರು.

‘ವೈದ್ಯರು ಸತತವಾಗಿ ನನ್ನೊಂದಿಗೆ ಆಪ್ತ ಸಮಾಲೋಚನೆ ನಡೆಸಿ ಧೈರ್ಯ ತುಂಬಿದರು. ಕಾಲಕಾಲಕ್ಕೆ ಔಷಧ ಕೊಟ್ಟರು. ಅದರ ಪರಿಣಾಮ ಆರೋಗ್ಯ ಚೇತರಿಕೆ ಕಂಡಿತು. ಈಗ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಚ್ಛತೆಯ ಕೆಲಸ ಮಾಡುತ್ತೇನೆ. ನನಗೀಗ ಇಬ್ಬರು ಮಕ್ಕಳಿದ್ದಾರೆ. ಎಲ್ಲರೂ ಆರೋಗ್ಯದಿಂದ ಇದ್ದೇವೆ. ಎಚ್‌ಐವಿ ದೃಢಪಟ್ಟ ನಂತರ ಗಾಬರಿ ಆಗಬಾರದು. ಸಮಾಜ ಕೂಡ ಬೇರೆ ದೃಷ್ಟಿಕೋನದಿಂದ ನೋಡಬಾರದು. ಎಲ್ಲರಿಗೂ ಬದುಕುವ ಹಕ್ಕಿದೆ’ ಎಂದು ದೃಢವಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT