ಶುಕ್ರವಾರ, ಡಿಸೆಂಬರ್ 6, 2019
24 °C
ಕಬ್ಬು ಬೆಳೆಗಾರರ ಬವಣೆ ನೀಗಿಸಲು ಪ್ರಧಾನಿಗೆ ಪತ್ರ; ಪಿಎಂಒ ಕಚೇರಿಯಿಂದ ರಾಜ್ಯಕ್ಕೆ ಸೂಚನೆ

ಕಾರ್ಖಾನೆ ಆರಂಭಕ್ಕೆ ಏಕಾಂಗಿ ಹೋರಾಟ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Deccan Herald

ಹೊಸಪೇಟೆ: ಇಲ್ಲಿನ ಚಿತ್ತವಾಡ್ಗಿಯ ಇಂಡಿಯನ್‌ ಶುಗರ್‌್ ರಿಫೈನರಿ (ಐ.ಎಸ್‌.ಆರ್‌.) ಸಕ್ಕರೆ ಕಾರ್ಖಾನೆ ಆರಂಭಿಸಲು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಉಪಾಧ್ಯಕ್ಷ ವೈ. ಯಮುನೇಶ್‌ ಏಕಾಂಗಿ ಹೋರಾಟಕ್ಕೆ ಇಳಿದಿದ್ದಾರೆ.

ಹೊಸಪೇಟೆ–ಕೊಟ್ಟೂರು ಮಾರ್ಗದಲ್ಲಿ ಪ್ರಯಾಣಿಕರ ರೈಲು ಸಂಚಾರ, ಹೊಸಪೇಟೆ–ಬೆಂಗಳೂರು ನಡುವೆ ಹೊಸ ಪ್ಯಾಸೆಂಜರ್‌ ರೈಲು ಓಡಿಸುವುದು, ಅನಂತಶಯನಗುಡಿ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಕ್ರಿಯವಾಗಿ ಹೋರಾಟ ನಡೆಸುತ್ತಿರುವ ಅವರು, ಇದೀಗ ಕಬ್ಬು ಬೆಳೆಗಾರರು ಅನುಭವಿಸುತ್ತಿರುವ ಸಂಕಷ್ಟ ನೋಡಿ, ಪ್ರಧಾನಿ ಕಚೇರಿಗೆ ನೇರವಾಗಿ ಪತ್ರ ಬರೆದಿದ್ದಾರೆ. ಅವರ ಈ ಪತ್ರಕ್ಕೆ ಪ್ರಧಾನಿ ಕಚೇರಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ. ‘ಅರ್ಜಿದಾರರ ಸಮಸ್ಯೆ ಬಗೆಹರಿಸಲು ಆದಷ್ಟು ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದು ಪ್ರಧಾನಿ ಕಚೇರಿಯಿಂದ ರಾಜ್ಯ ಸರ್ಕಾರಕ್ಕೆ ಸೂಚನೆ ಕೊಡಲಾಗಿದೆ. 

ಮೂರು ವರ್ಷಗಳಿಂದ ಐ.ಎಸ್‌.ಆರ್‌. ಸಕ್ಕರೆ ಕಾರ್ಖಾನೆ ಮುಚ್ಚಿರುವುದರಿಂದ ಕಬ್ಬು ಬೆಳೆಗಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದೆ ಪೂರೈಸಿದ ಕಬ್ಬಿನ ಬಾಕಿಯನ್ನು ಕಾರ್ಖಾನೆ ಪಾವತಿಸಿಲ್ಲ. ಸದ್ಯ ಕಟಾವಿನ ಹಂತಕ್ಕೆ ಬಂದಿರುವ ಕಬ್ಬು ನುರಿಸಲು ಕಾರ್ಖಾನೆ ಮುಂದಾಗುತ್ತಿಲ್ಲ. ಇದರಿಂದ ಸಣ್ಣ ಹಾಗೂ ಅತಿ ಸಣ್ಣ ರೈತರು ಎದುರಿಸುತ್ತಿರುವ ಸಮಸ್ಯೆ ಮನಗಂಡು ಯಮುನೇಶ್‌ ಅವರು ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದಾರೆ. ಪ್ರಧಾನಿ ಕಚೇರಿಯಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿ, ರಾಜ್ಯ ಸರ್ಕಾರಕ್ಕೆ ಸೂಚನೆ ಕೊಟ್ಟು ತಿಂಗಳು ಕಳೆದರೂ ಸಹ ಇದುವರೆಗೆ ಈ ನಿಟ್ಟಿನಲ್ಲಿ ಯಾವುದೇ ಪ್ರಗತಿಯಾಗಿಲ್ಲ.

‘ನನ್ನ ಅಹವಾಲನ್ನು ಪ್ರಧಾನಿ ಕಚೇರಿ ಆಲಿಸಿ, ತಕ್ಷಣವೇ ರಾಜ್ಯ ಸರ್ಕಾರಕ್ಕೆ ಸೂಚನೆ ಕೊಟ್ಟಿದೆ. ಹೀಗಿದ್ದರೂ ರಾಜ್ಯ ಸರ್ಕಾರ ಕಾರ್ಖಾನೆ ಆರಂಭಿಸಲು ಕ್ರಮ ಕೈಗೊಂಡಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಬೇಕು. ರೈತರು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಹೋರಾಟ ನಡೆಸಿದರೆ ಕಾರ್ಖಾನೆ ಆರಂಭಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ಯಮುನೇಶ್‌ ಹೇಳಿದರು.

‘ರಾಜ್ಯದ ಇತರೆ ಕಬ್ಬಿನ ಕಾರ್ಖಾನೆಗಳಿಗೆ ಹೋಲಿಸಿದರೆ ಐ.ಎಸ್‌.ಆರ್‌. ಕಾರ್ಖಾನೆ ರೈತರಿಗೆ ಪಾವತಿಸಬೇಕಿರುವ ಹಣದ ಮೊತ್ತ ಬಹಳ ಕಡಿಮೆ. ನಿರಾಣಿ ಸಕ್ಕರೆ ಕಾರ್ಖಾನೆ ₨40 ಕೋಟಿಗೂ ಅಧಿಕ ಬಾಕಿ ಉಳಿಸಿಕೊಂಡಿದೆ. ಇತರೆ ಕಾರ್ಖಾನೆಗಳು ₨25ರಿಂದ ₨30 ಕೋಟಿ ಬಾಕಿ ಪಾವತಿಸಬೇಕಿದೆ. ಐ.ಎಸ್‌.ಆರ್‌. ಕಾರ್ಖಾನೆ ₨10 ಕೋಟಿಗಿಂತ ಕಡಿಮೆ ಬಾಕಿ ಕೊಡಬೇಕಿದೆ. ಸರ್ಕಾರ ಮಧ್ಯ ಪ್ರವೇಶಿಸಿದರೆ ಸಮಸ್ಯೆ ಬಗೆಹರಿಯಲು ಹೆಚ್ಚು ದಿನಗಳು ಬೇಕಿಲ್ಲ. ಆದರೆ, ಸರ್ಕಾರ ಇಚ್ಛಾಶಕ್ತಿ ತೋರುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕೆಲವು ರೈತರು ದಾವಣಗೆರೆ, ಗದಗ ಜಿಲ್ಲೆಯ ಕಾರ್ಖಾನೆಗಳಿಗೆ ಕಬ್ಬು ಸಾಗಿಸುತ್ತಿದ್ದಾರೆ. ಪ್ರತಿ ಟನ್‌ ಕಬ್ಬಿಗೆ ₨1,900 ಕಾರ್ಖಾನೆಗಳು ಕೊಡುತ್ತಿವೆ. ಕಬ್ಬು ಕಟಾವು, ಸಾಗಣೆ ವೆಚ್ಚ, ಚಾಲಕನ ಭತ್ಯೆ ಸೇರಿದಂತೆ ಪ್ರತಿ ಲೋಡ್‌ಗೆ ₨800ರಿಂದ ₨1,000 ಖರ್ಚು ರೈತರಿಗೆ ಬರುತ್ತಿದೆ. ಹೀಗಾಗಿ ರೈತರಿಗೆ ಪ್ರತಿ ಟನ್‌ ಕಬ್ಬಿಗೆ ₨1,500 ಸಿಗುತ್ತಿದೆ. ಇದರಿಂದ ಅವರಿಗೆ ಹೆಚ್ಚಿನ ಲಾಭ ಸಿಗುತ್ತಿಲ್ಲ’ ಎಂದರು.

ಪ್ರತಿಕ್ರಿಯಿಸಿ (+)