ಸಸ್ಯ ಪಾಲನೆಯಲ್ಲಿ ಸಂತೃಪ್ತಿ

ಸೋಮವಾರ, ಏಪ್ರಿಲ್ 22, 2019
29 °C
ರಜೆ ಪಡೆಯದೇ ದುಡಿಯುವ ದಿನಗೂಲಿ ನೌಕರ ವೀರಣ್ಣ

ಸಸ್ಯ ಪಾಲನೆಯಲ್ಲಿ ಸಂತೃಪ್ತಿ

Published:
Updated:
Prajavani

ಹೂವಿನಹಡಗಲಿ: ಸರ್ಕಾರಿ ನೌಕರರಿಗೆ ರಜಾ ದಿನ ಎಂದರೆ ನಿರಾಳಭಾವ. ಸಾಲು ಸಾಲು ರಜೆಗಳು ಬಂದರಂತೂ ಅವರ ಸಂಭ್ರಮಕ್ಕೆ ಪಾರವೇ ಇರುವುದಿಲ್ಲ. ಹೆಚ್ಚುವರಿ ರಜೆಗಳನ್ನು ಪಡೆದು ಮೋಜು, ಮಸ್ತಿಯಲ್ಲಿ ಕಾಲ ಕಳೆಯುವವರೇ ಹೆಚ್ಚು. ಆದರೆ, ಇಲ್ಲೊಬ್ಬ ಅರಣ್ಯ ಇಲಾಖೆಯ ದಿನಗೂಲಿ ನೌಕರ ರಜೆಗಳನ್ನೇ ಪಡೆಯದೇ ಸಸ್ಯ ಬೆಳೆಸುವ ಕಾಯಕದ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ತಾಲ್ಲೂಕಿನ ಮದಲಗಟ್ಟಿ ಗ್ರಾಮದ ಕೇಂದ್ರೀಯ ಸಸ್ಯ ಕ್ಷೇತ್ರದಲ್ಲಿ ಅರಣ್ಯ ವೀಕ್ಷಕರಾಗಿರುವ ಹೂವಿನಹಡಗಲಿಯ ಬಸೆಟ್ಟಿ ವೀರಣ್ಣ ಎರಡು ದಶಕದಿಂದ ಸಸ್ಯಲೋಕದಲ್ಲಿ ಬದಕು ಕಟ್ಟಿಕೊಂಡಿದ್ದಾರೆ. ಭಾನುವಾರ ಹಾಗೂ ರಜಾ ದಿನಗಳಲ್ಲೂ ಸಸ್ಯ ಸಂರಕ್ಷಣೆಯ ಕರ್ತವ್ಯಕ್ಕೆ ಹಾಜರಾಗಿ ವಿಶಿಷ್ಟ ಸೇವೆ ಸಲ್ಲಿಸುತ್ತಿದ್ದಾರೆ.

ತುಂಗಭದ್ರಾ ನದಿ ತಟದಲ್ಲಿರುವ ಮದಲಗಟ್ಟಿಯಲ್ಲಿ ನೀಲಗಿರಿ ತೋಪು ಹಸಿರು ಹೊದ್ದು ನಿಂತಿದೆ. ಇದರ ನಡುವೆ ವಲಯ ಅರಣ್ಯ ಇಲಾಖೆಗೆ ಸೇರಿದ ಸಸ್ಯಕ್ಷೇತ್ರವಿದೆ. ತಾಲ್ಲೂಕಿನ ಕಾಯ್ದಿಟ್ಟ ಅರಣ್ಯ ಪ್ರದೇಶ, ರಸ್ತೆ ಬದಿಯ ನೆಡುತೋಪುಗಳಲ್ಲಿ ಗಿಡಗಳನ್ನು ನೆಡಲು ಪ್ರತಿವರ್ಷ ಇಲ್ಲಿ ವಿವಿಧ ಜಾತಿಯ ಲಕ್ಷಾಂತರ ಸಸಿಗಳನ್ನು ಬೆಳೆಸಲಾಗುತ್ತಿದೆ. ಕಳೆದ 20 ವರ್ಷಗಳಿಂದ ಬಸೆಟ್ಟಿ ವೀರಣ್ಣ ಇಲ್ಲಿ ಸಸಿಗಳನ್ನು ಬೆಳೆಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಭಾನುವಾರ ಹಾಗೂ ಹಬ್ಬದ ರಜಾ ದಿನಗಳಲ್ಲೂ ಅವರು ಕರ್ತವ್ಯಕ್ಕೆ ಹಾಜರಾಗಿ ಸಸಿಗಳ ಆರೈಕೆ ಮಾಡುತ್ತಾರೆ.

ಪ್ರತಿವರ್ಷ ಜೂನ್‌, ಜುಲೈನಲ್ಲಿ ಮಳೆ ಬೀಳುತ್ತಿದ್ದಂತೆ ಮಣ್ಣು, ಗೊಬ್ಬರ ಮಿಶ್ರಣ ಮಾಡಿ ಪ್ಲಾಸ್ಟಿಕ್ ಚೀಲಕ್ಕೆ ತುಂಬುತ್ತಾರೆ. ಅರಣ್ಯ ಇಲಾಖೆ ನೀಡುವ ಕಮರ, ಹೊಂಗೆ, ಬೇವು, ಹುಣಸೆ, ಕಕ್ಕೆ ಬೀಜಗಳನ್ನು ಪ್ಲಾಸ್ಟಿಕ್‌ ಚೀಲದಲ್ಲಿ ನಾಟಿ ಮಾಡುತ್ತಾರೆ.

ಕೆಲಸದ ಒತ್ತಡದ ದಿನಗಳಲ್ಲಿ ಸ್ಥಳೀಯ ಕೂಲಿಕಾರ ಮಹಿಳೆಯರನ್ನು ಕೆಲಸಕ್ಕೆ ತೊಡಗಿಸಿಕೊಳ್ಳುತ್ತಾರೆ. ನಂತರ ಇವರೇ ಎಂಟು ತಿಂಗಳ ಕಾಲ ಸಸಿಗಳಿಗೆ ನೀರುಣಿಸಿ ಮಕ್ಕಳಂತೆ ಜೋಪಾನ ಮಾಡುತ್ತಾರೆ. ಕೊನೆಗೇ ಅರಣ್ಯ ಪ್ರದೇಶದಲ್ಲಿ ನೆಡುವುದಕ್ಕಾಗಿ ಸಸಿಗಳನ್ನು ಕಳಿಸಿಕೊಡುವಾಗ ಗಿಡಗಳ ಬಗ್ಗೆ ಕಾಳಜಿ ವಹಿಸಿ ಎಂದು ಸಿಬ್ಬಂದಿಗೆ ಹೇಳಿ ಕಳಿಸುತ್ತಾರೆ.

2000ನೇ ಸಾಲಿನಲ್ಲಿ ಅವರು ಕೆಲಸಕ್ಕೆ ಸೇರಿದ್ದಾಗ ಸಿಗುತ್ತಿದ್ದ ಕೂಲಿ ದಿನಕ್ಕೆ ₹35. ಈಗ ತಿಂಗಳಿಗೆ ₹,9000 ವೇತನ ಪಡೆಯುತ್ತಿದ್ದಾರೆ. ಇದರಲ್ಲಿ ಕುಟುಂಬ ನಿರ್ವಹಣೆ ಜತೆಗೆ ಹೂವಿನಹಡಗಲಿಯಿಂದ ಮದಲಗಟ್ಟಿಗೆ ನಿತ್ಯವೂ ಸ್ವಂತ ಖರ್ಚಿನಲ್ಲಿ ಓಡಾಡುತ್ತಾರೆ. ರಜೆ ದಿನಗಳಲ್ಲೂ ಕರ್ತವ್ಯ ನಿರ್ವಹಿಸಿದರೂ ಅವರಿಗೆ ಸಂಬಳ ಹೊರತಾಗಿ ಅರಣ್ಯ ಇಲಾಖೆಯಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಮುಂದೆ ಒಳ್ಳೆಯ ದಿನಗಳು ಬರುವ ನಿರೀಕ್ಷೆಯೊಂದಿಗೆ ಅವರು ಸಸ್ಯಲೋಕದಲ್ಲೇ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.

‘ರಜೆ ಎಂದು ನಾನು ಮನೆಯಲ್ಲಿ ಕುಳಿತರೆ ಸಸಿಗಳನ್ನು ನೋಡಿಕೊಳ್ಳುವವರು ಯಾರು ಎಂದು ಪ್ರಶ್ನಿಸುವ ವೀರಣ್ಣ, ಅಕ್ಕರೆಯಿಂದ ಬೆಳೆಸಿದ ಗಿಡಗಳು ಬಾಡಿದರೆ ನನ್ನಿಂದ ನೋಡಲು ಆಗುವುದಿಲ್ಲ. ಮನಸ್ಸಿಗೆ ಬೇಸರವಾಗುತ್ತದೆ. ಸಸ್ಯಲೋಕದಲ್ಲಿ ಕಾಲ ಕಳೆಯುವುದೆಂದರೆ ನನಗೆ ಎಲ್ಲಿಲ್ಲದ ಪ್ರೀತಿ, ಖುಷಿ’ ಎನ್ನುತ್ತಾರೆ.

‘ಸಸ್ಯ ಕ್ಷೇತ್ರದಲ್ಲಿ ಎಂಟು ತಿಂಗಳ ಕಾಲ ಸಸಿಗಳನ್ನು ಬೆಳೆಸುವ ಕೆಲಸ ಮಾಡುತ್ತೇನೆ. ನಂತರ ಅಧಿಕಾರಿಗಳ ಸೂಚನೆಯಂತೆ ಅರಣ್ಯ, ರಸ್ತೆ ಬದಿಯಲ್ಲಿ ಗಿಡಗಳ ನಾಟಿ, ನೀರುಣಿಸುವುದು, ಸಸಿಗಳ ರಕ್ಷಣೆಗಾಗಿ ಮುಳ್ಳು ಕಟ್ಟುವ ಕೆಲಸಕ್ಕೆ ಹೋಗುತ್ತೇನೆ’ ಎಂದು ವೀರಣ್ಣ ತಿಳಿಸಿದರು. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !