ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಕೆ ಬೋನ್ಸಾಯ್‌ ನಿಪುಣೆ

Last Updated 18 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಗಿಡ ಪುಟ್ಟದಾದರೂ ಸುತ್ತಲೂ ಹಬ್ಬಿಕೊಂಡ ಹೂವು, ಹಣ್ಣುಗಳು. ‌ಕುತೂಹಲದ ಜೊತೆಗೆ ಕಣ್ಸೆಳೆಯುವ ಕಲಾತ್ಮಕ ರೂಪ...

ಬೋನ್ಸಾಯ್ ನೆನಪಿಸಿಕೊಂಡರೆ ಮನದಲ್ಲಿ ಮೂಡುವ ಅಕ್ಷರಗಳು ಇವು. ಇದೇ ಚೆಲುವು ಈಚೆಗೆ ಹಲವರನ್ನು ಬೋನ್ಸಾಯ್ ಗಿಡದತ್ತ ಆಕರ್ಷಿಸಿದೆ. ಬೋನ್ಸಾಯ್‌‌ ಬೆಳೆಸುವುದನ್ನು ಹವ್ಯಾಸವಾಗಿಸಿಕೊಂಡವರು ಚಂಪಾ ಕಾಬ್ರಾ. ಇವರ ಬಳಿ 400ಕ್ಕೂ ಹೆಚ್ಚು ಬೋನ್ಸಾಯ್‌ ಗಿಡಗಳಿವೆ.

ಕೊಡಗು ಮೂಲದ ಚಂಪಾ, ಬೆಂಗಳೂರಿಗೆ ಬಂದ ಹೊಸತರಲ್ಲಿ ಸಮಯ ಕಳೆಯಲು ಯೋಚಿಸುತ್ತಿದ್ದಾಗ ಇವರನ್ನು ಸೆಳೆದಿದ್ದು ಬೋನ್ಸಾಯ್‌‌ ಗಿಡಗಳು. ದೊಡ್ಡ ಮರಗಳ ಪುಟ್ಟ ಪ್ರತಿರೂಪದಂತಿರುವ ಈ ಕಲಾತ್ಮಕ ಗಿಡಗಳನ್ನು ಹೇಗೆ ಬೆಳೆಯುತ್ತಾರೆ ಎಂಬ ಕುತೂಹಲ ಅದರೆಡೆಗೆ ಇವರನ್ನು ಸೆಳೆಯಿತು. ಮೂವತ್ತು ವರ್ಷಗಳಿಂದ ಬೋನ್ಸಾಯ್‌‌ ಕಲೆಯಲ್ಲಿ ಚಂಪಾ ತೊಡಗಿಸಿಕೊಂಡಿದ್ದಾರೆ.

ಇವರ ಹತ್ತಿರದ ಸಂಬಂಧಿಯೊಬ್ಬರು ಬೋನ್ಸಾಯ್‌‌ ಗಿಡಗಳನ್ನು ಬೆಳೆಸುತ್ತಿದ್ದರು. ಮದುವೆಯ ನಂತರ ಒಂದಿಷ್ಟು ಗಿಡಗಳನ್ನು  ಉಡುಗೊರೆಯಾಗಿ ನೀಡಿದರು. ಕೈತೋಟದಲ್ಲಿ ಇವರಿಗೆ ಮೊದಲಿನಿಂದಲೂ ಇದ್ದ ಆಸಕ್ತಿ ಚುರುಕುಗೊಂಡಿದ್ದು ಸಹ ಆಗಲೇ. ಬೋನ್ಸಾಯ್ ಕಲೆಯನ್ನು ಮೈಗೂಡಿಸಿಕೊಳ್ಳುತ್ತಿದ್ದಂತೆ ಅದರೆಡೆಗಿನ ಆಸಕ್ತಿಯೂ ಹೆಚ್ಚಾಗುತ್ತಾ ಸಾಗಿತು. ದಿನೇದಿನೇ ಬೋನ್ಸಾಯ್‌‌ನಲ್ಲಿ ವಿವಿಧ ಪ್ರಯೋಗಗಳನ್ನು ಮಾಡಲು ಆರಂಭಿಸಿದರು.

ಗಿಡಗಳನ್ನು ಮಕ್ಕಳಂತೆ ಅತಿ ಜಾಗರೂಕತೆಯಿಂದ ನೋಡಿಕೊಳ್ಳುವ ಇವರ ಬಳಿ ಸುಮಾರು ನಲವತ್ತು ಪ್ರಭೇದದ ಬೋನ್ಸಾಯ್‌‌ ಇವೆ. ಮನೆಯಲ್ಲಿಯೇ ಪುಟ್ಟ ಬೋನ್ಸಾಯ್‌‌ ಉದ್ಯಾನವನ್ನೂ ವಿನ್ಯಾಸಗೊಳಿಸಿದ್ದಾರೆ. ಚಹ ಕಪ್, ಬುಟ್ಟಿ, ಟ್ರೇ, ಸಿರಾಮಿಕ್‌ ಪಾಟ್‌ ಹೀಗೆ ಯಾವುದೇ ಸಾಮಗ್ರಿ ಸಿಕ್ಕರೂ ಬೋನ್ಸಾಯ್‌‌ ಗಿಡ ಬೆಳೆಸಲು ಬಳಸಿಕೊಳ್ಳುತ್ತಾರೆ.


ಚಂಪಾ ಕಾಬ್ರಾ

ಕಿತ್ತಳೆ, ಸೇಬು, ಪೇರಳೆಹಣ್ಣು, ಪೀಚ್‌, ದಾಳಿಂಬೆಯನ್ನು ಬೋನ್ಸಾಯ್‌‌ ರೂಪದಲ್ಲಿ ಬೆಳೆಸಿದ್ದಾರೆ. ಆಸಕ್ತರಿಗೆ ಗಿಡಗಳ ನಿರ್ವಹಣೆ ತರಬೇತಿಯನ್ನೂ ನೀಡುತ್ತಾರೆ. ಬೋನ್ಸಾಯ್‌‌ ಗಿಡಗಳ ಬಗ್ಗೆ ಪುಸ್ತಕ, ಅಂತರ್ಜಾಲಗಳಲ್ಲಿ ತಡಕಾಡಿ ತಿಳಿದುಕೊಳ್ಳುತ್ತಾರೆ. ದೇಶ, ವಿದೇಶಗಳಲ್ಲಿ ನಡೆಯುವ ಬೋನ್ಸಾಯ್‌‌ ಸಮ್ಮೇಳನಗಳಲ್ಲಿಯೂ ಭಾಗವಹಿಸುತ್ತಾರೆ.

‘ಬೋನ್ಸಾಯ್‌‌ ಗಿಡಗಳಿಗೆ ಸಾವಿರ ವರ್ಷಗಳ ಇತಿಹಾಸವಿದೆ. ಜಪಾನ್ ಮೂಲದ ಈ ಗಿಡ ನೋಡಲು ಆಕರ್ಷಕ. ಒಂದೆರಡು ಗಿಡಗಳಾದರೆ ಸುಲಭದಲ್ಲಿ ನಿರ್ವಹಣೆ ಮಾಡಬಹುದು. ಹೆಚ್ಚು ಗಿಡಗಳಿದ್ದರೆ ನಿರ್ವಹಣೆ ಸ್ವಲ್ಪ ಕಷ್ಟ. ಇಕ್ಕಟ್ಟಾಗುತ್ತಿರುವ ನಗರ
ಹಾಗೂ ಮನೆಯ ಆಲಂಕಾರಿಕ ಪ್ರಜ್ಞೆ ಎರಡಕ್ಕೂ ಈ ಗಿಡ ಹೇಳಿಮಾಡಿಸಿದ್ದು. ಮನೆಯ ಒಳಾಂಗಣ ಹಾಗೂ ಹೊರಾಂಗಣ ಎರಡರ ಅಂದವನ್ನೂ ಹೆಚ್ಚು ಮಾಡುವ ಬೋನ್ಸಾಯ್ ಬೆಳೆಯುವವರ ಸಂಖ್ಯೆ ಈಚೆಗೆ ನಗರದಲ್ಲಿ ಹೆಚ್ಚಾಗುತ್ತಿದೆ’ ಎಂದು ವಿವರಣೆ ನೀಡುತ್ತಾರೆ ಚಂಪಾ.

ಹತ್ತು ದಿನಗಳಿಗೊಮ್ಮೆ ಹೊಂಗೆ ಹಿಂಡಿ, ಬೇವಿನಸೊಪ್ಪು ಹಿಂಡಿ, ಹುಚ್ಚೆಳ್ಳು ಹಿಂಡಿ ನೆನೆಹಾಕಿ ಗಿಡಗಳಿಗೆ ಗೊಬ್ಬರವಾಗಿ ಬಳಸುತ್ತಾರೆ. ಆಸಕ್ತರಿಗೆ ಗಿಡಗಳನ್ನೂ ಕೊಡುತ್ತಾರೆ.

‘ಮರದ ಮೂಲ ವಿನ್ಯಾಸವನ್ನು ಹಾಗೆಯೇ ಉಳಿಸಿಕೊಳ್ಳುವುದು ಬೋನ್ಸಾಯ್‌ ಕಲೆಯ ಸವಾಲು. ಕುಂಡದಲ್ಲಿ ಬೆಳೆಯುವ ಬೋನ್ಸಾಯ್‌ ತಂತ್ರಜ್ಞಾನದ ಮರಗಳಿಗೂ ನೆಲದಲ್ಲಿ ಬೆಳೆಯುವ ಮರಗಳಿಗೂ ಗಾತ್ರವೊಂದನ್ನು ಹೊರತುಪಡಿಸಿದರ ಬೇರೆ ವ್ಯತ್ಯಾಸವಿಲ್ಲ. ನೆಲದ ಮೇಲೆ ಸಹಜವಾಗಿ ಬೆಳೆಯುವ ಮರ ಹೇಗೆ ಕಾಣುತ್ತದೆಯೋ ಅದು ಕುಂಡದಲ್ಲಿ ಹಾಗೆಯೇ ಕಾಣುವಂತೆ ವೈರ್‌ನಿಂದ ಅದನ್ನು ಕೆತ್ತಲಾಗುತ್ತದೆ. ತೆಂಗಿನ ಮರಗಳನ್ನು ಹೊರತುಪಡಿಸಿ, ಚಿಕ್ಕ ಎಲೆಗಳಿರುವ ಯಾವುದೇ ಮರವನ್ನಾದರೂ ಬೋನ್ಸಾಯ್‌‍ ಆಗಿ ಪರಿವರ್ತಿಸಬಹುದು’ ಎನ್ನುತ್ತಾರೆ ಚಂಪಾ.


‘ಮನೆಯ ಅಂದ ಹೆಚ್ಚಿಸುವಲ್ಲಿ ಬೋನ್ಸಾಯ್ ಪಾತ್ರ ಮಹತ್ವದ್ದು. ಈ ಗಿಡವು ಗಾಳಿಯನ್ನು ಶುದ್ಧೀಕರಿಸುವ ಗುಣ ಹೊಂದಿದೆ. ಚಿಕ್ಕಪುಟ್ಟ ಸಾಮಗ್ರಿಗಳಲ್ಲಿ ಬೊನ್ಸಾಯ್‌ಗಳನ್ನು ಬೆಳೆಸಿದರೆ ನೋಡಲು ಆಕರ್ಷಕವಾಗಿರುತ್ತದೆ’ ಎಂದು ಇದರ ಮಹತ್ವ ಕುರಿತು ಹೇಳುತ್ತಾರೆ.

**
200 ವರ್ಷ ಇರಬಲ್ಲದು
ಎಲ್ಲಾ ಜಾತಿಯ ಗಿಡಗಳನ್ನೂ ಬೋನ್ಸಾಯ್‌ಗೆ ಒಗ್ಗಿಸಬಹುದು. ಗರಿಷ್ಠ ಎತ್ತರ ಸಾಮಾನ್ಯವಾಗಿ ನಾಲ್ಕು ಅಡಿ ಇರುತ್ತದೆ. ಏಕಕಾಂಡ, ಬಹುಕಾಂಡ ಹಾಗೂ ಸಮೂಹಕಾಂಡ ಎಂಬ ವಿನ್ಯಾಸಗಳು ಚಾಲ್ತಿಯಲ್ಲಿವೆ. ಮೊದಲು ಗಿಡದ ಮಾದರಿಯನ್ನು ತೆಗೆದುಕೊಂಡು, ಅದರ ಎತ್ತರವನ್ನು ನಿರ್ಧರಿಸಿಕೊಂಡು ನಂತರ ನೆಡಲಾಗುತ್ತದೆ. ಕುಂಡದ ವಾತಾವರಣಕ್ಕೆ ಹೊಂದಿಕೊಳ್ಳುವ ಈ ಗಿಡಗಳು 200 ವರ್ಷಗಳವರೆಗೂ ಇರಬಲ್ಲವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT