ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತ ಅಬ್ದುಲ್‌ ಹಕೀಂ ಅರ್ಜಿ ಪುರಸ್ಕರಿಸದ ಹೈಕೋರ್ಟ್‌

ಪದವಿ ಹಿಂಪಡೆದ ಆದೇಶ ರದ್ದತಿ ಕೋರಿ ಅರ್ಜಿ ಸಲ್ಲಿಕೆ
Last Updated 9 ಜುಲೈ 2021, 10:01 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯವು ತಮ್ಮ ಎಂ.ಎ., ಪಿಎಚ್‌.ಡಿ ಪದವಿ ಹಿಂಪಡೆದ ಆದೇಶ ರದ್ದು ಮಾಡಬೇಕು ಎಂದು ಕೋರಿ ಹೈಕೋರ್ಟ್‌ ಮೊರೆ ಹೋಗಿದ್ದ ಪತ್ರಕರ್ತ ಅಬ್ದುಲ್‌ ಹಕೀಂ ರಜಾಕ್‌ ಅಲಿಯಾಸ್‌ ಅಬ್ದುಲ್‌ ಹಕೀಂ ಅವರ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಅರ್ಜಿದಾರರು ಇಚ್ಛಿಸಿದಲ್ಲಿ ನಾಲ್ಕು ತಿಂಗಳೊಳಗೆ ರಾಜ್ಯಪಾಲರಿಗೆ ಮೇಲ್ಮನವಿ ಸಲ್ಲಿಸಲು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಂ ಅವರು ಕಾಲಾವಕಾಶ ನೀಡಿದ್ದಾರೆ. ಆದರೆ, ‘ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರ ಅಭಿಪ್ರಾಯ ಪಡೆದು, ಅದನ್ನು ಆಧರಿಸಿರಾಜ್ಯಪಾಲರು ನಿರ್ಣಯ ತೆಗೆದುಕೊಳ್ಳಬೇಕು. ಅಲ್ಲಿಯವರೆಗೆ ಎರಡೂ ವಿಶ್ವವಿದ್ಯಾಲಯಗಳು ಪದವಿ ರದ್ದುಗೊಳಿಸಿದ ಆದೇಶ ಜಾರಿಯಲ್ಲಿರುತ್ತದೆ’ ಎಂದು ನ್ಯಾಯಮೂರ್ತಿ ತಿಳಿಸಿದ್ದಾರೆ.

‘ಹಕೀಂ ಅವರು ಖೊಟ್ಟಿ ಅಂಕ ಪಟ್ಟಿ ಸಲ್ಲಿಸಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಎಂ.ಎ., ಪಿಎಚ್‌.ಡಿ ಪೂರ್ಣಗೊಳಿಸಿದ್ದಾರೆ’ ಎಂದು ಕುಲಸಚಿವ ಎ. ಸುಬ್ಬಣ್ಣ ರೈ ಅವರು 2019ರ ಜೂ.28ರಂದು ತಾಲ್ಲೂಕಿನ ಕಮಲಾಪುರ ಪೊಲೀಸ್‌ ಠಾಣೆಗೆ ದೂರು ಕೊಟ್ಟಿದ್ದರು. ಅದರ ಅನ್ವಯ ಹಕೀಂ ವಿರುದ್ಧ ಪ್ರಕರಣ ದಾಖಲಾಗಿತ್ತು. ಅದೇ ದಿನ ಅವರ ಪದವಿ ರದ್ದುಗೊಳಿಸಲಾಗಿತ್ತು. ಇದರ ವಿರುದ್ಧ ಹಕೀಂ ಅವರು ಸಲ್ಲಿಸಿದ್ದ ಮನವಿಯನ್ನು ರಾಜ್ಯಪಾಲರು ವಜಾಗೊಳಿಸಿದ್ದರು.

ಹಕೀಂ ಅವರು ಉತ್ತರ ಪ್ರದೇಶದ ಝಾನ್ಸಿ ಬುಂದೇಲ್‌ ಖಂಡ್‌ ವಿಶ್ವವಿದ್ಯಾಲಯದ ಪದವಿ ಖೊಟ್ಟಿ ದಾಖಲೆಗಳನ್ನುಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ, 2012–13ರಲ್ಲಿ ಎಂ.ಎ ಪತ್ರಿಕೋದ್ಯಮ (ದೂರಶಿಕ್ಷಣ) ಹಾಗೂ 2014–15ರಲ್ಲಿ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಪಿಎಚ್‌.ಡಿ. ಮುಗಿಸಿದ್ದರು. ಹಾಗೆಯೇ, ಕುವೆಂಪು ವಿಶ್ವವಿದ್ಯಾಲಯದಲ್ಲಿ ಇದೇ ಖೊಟ್ಟಿ ದಾಖಲೆಗಳನ್ನು ಕೊಟ್ಟು ಎಂ.ಎ. ಪೂರ್ಣಗೊಳಿಸಿದ್ದರು. ಸತ್ಯಾಸತ್ಯತೆ ಗೊತ್ತಾಗುತ್ತಿದ್ದಂತೆ 2019ರ ಜುಲೈ 2ರಂದು ಕುವೆಂಪು ವಿಶ್ವವಿದ್ಯಾಲಯವು ಅವರ ಎಂ.ಎ. ಪದವಿ ರದ್ದುಗೊಳಿಸಿತ್ತು.

ಪ್ರಕರಣ ಸಂಬಂಧ ಅಬ್ದುಲ್‌ ಹಕೀಂ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT