ಮಂಗಳವಾರ, ಆಗಸ್ಟ್ 20, 2019
22 °C

ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಗಮ: ಒಂದೇ ಸೂರಿನಡಿ ದೇವರು

Published:
Updated:
Prajavani

ಹೊಸಪೇಟೆ: ಇಲ್ಲಿನ ಎಸ್‌.ಆರ್‌. ನಗರದ ಚಲುವಾದಿಕೇರಿಯಲ್ಲಿ ಒಂದೇ ಸೂರಿನಡಿ ಹಿಂದೂ–ಮುಸ್ಲಿಂ ದೇವರನ್ನು ಪ್ರತಿಷ್ಠಾಪಿಸಲಾಗಿದ್ದು, ಭಾವೈಕ್ಯತೆಯ ಸಂಗಮವಾಗಿದೆ.

ಒಂದು ಭಾಗದಲ್ಲಿ ಭರಮಪ್ಪನಗುಡಿ ಧರ್ಮದೇವರು, ಅದರ ಮಗ್ಗುಲಲ್ಲಿ ಪೀರಲ ದೇವರನ್ನು ಪ್ರತಿಷ್ಠಾಪಿಸಿರುವುದು ವಿಶೇಷ. ಕಟ್ಟಡದಲ್ಲೂ ಹಿಂದೂ–ಮುಸ್ಲಿಂ ಭಾವೈಕ್ಯತೆ ಸಮ್ಮಿಲನವಾಗಿದೆ. ಮಸೀದಿ, ದೇವಾಲಯ ಹೋಲುವ ರೀತಿಯಲ್ಲಿ ಕಟ್ಟಡ ನಿರ್ಮಿಸಲಾಗಿದ್ದು, ಒಂದು ಭಾಗದಲ್ಲಿ ಓಂಕಾರ, ಇನ್ನೊಂದು ಭಾಗದಲ್ಲಿ ಅರ್ಧಚಂದ್ರಾಕೃತಿ ನಡುವೆ ನಕ್ಷತ್ರವನ್ನು ಕೆತ್ತನೆ ಮಾಡಲಾಗಿದೆ. 

ಅಂದಹಾಗೆ, ಕಟ್ಟಡ ನಿರ್ಮಾಣಕ್ಕೆ ಮೂರುವರೆ ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದ್ದು, ಅದರ ಸಂಪೂರ್ಣ ಖರ್ಚನ್ನು ಸ್ಥಳೀಯರೇ ಭರಿಸಿರುವುದು ವಿಶೇಷ.

ಭಾನುವಾರ ಬೆಳಿಗ್ಗೆ ಹಿಂದೂ–ಮುಸ್ಲಿಂ ಸಮಾಜದವರು ಸೇರಿಕೊಂಡು ವಿಶೇಷ ಪೂಜೆ, ಪ್ರಾರ್ಥನೆ ಮಾಡಿದರು. ಬಳಿಕ ಮಾತನಾಡಿದ ದಲಿತ ಸಮಾಜದ ಮುಖಂಡ ಸೋಮಶೇಖರ ಬಣ್ಣದಮನೆ, ‘ಇತ್ತೀಚಿನ ದಿನಗಳಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಪರಸ್ಪರ ಕಿತ್ತಾಡುವುದು ಹೆಚ್ಚಾಗಿದೆ. ಅದು ದೂರವಾಗಬೇಕು. ಎಲ್ಲರೂ ಸಹೋದರರಂತೆ ಬಾಳಬೇಕು. ಕೋಮು ಸೌಹಾರ್ದತೆ ಮೂಡಬೇಕು ಎಂಬ ಕಾರಣದಿಂದ ಎರಡೂ ಧರ್ಮಗಳ ದೇವರನ್ನು ಪ್ರತಿಷ್ಠಾಪಿಸಲಾಗಿದೆ’ ಎಂದು ಹೇಳಿದರು.

ಮುಖಂಡರಾದ 81 ರೆಹಮಾನ್‌ ಸಾಬ್‌, ದುರ್ಗೋಜಿ ರಾವ್‌, ಪಂಪಣ್ಣ, ಲಕ್ಷ್ಮಿನಾರಾಯಣ, ಗಣೇಶ, ಶಿವಮೂರ್ತಿ, ಮಾರುತಿ, ಎಚ್‌.ಸಿ. ರವಿ, ದೊಡ್ಡ ರಾಮಾಲಿ ಇದ್ದರು.

Post Comments (+)