ಶನಿವಾರ, ಆಗಸ್ಟ್ 20, 2022
21 °C
ರೇವ್‌ ಪಾರ್ಟಿ, ಗಾಂಜಾ ಸೇವನೆ, ಬೆತ್ತಲೆ ಕುಣಿತ ಸಾಮಾನ್ಯವಾಗಿದ್ದ ದಿನಗಳವು

PV Web Exclusive: ಹಂಪಿ ‘ಹಿಪ್ಪಿ ದ್ವೀಪ’ದ ಸುತ್ತ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಮಾದಕ ವಸ್ತು ಸೇವನೆ ಸೇರಿದಂತೆ ಇತರೆ ಅಕ್ರಮ ಚಟುವಟಿಕೆಗಳಿಂದ ವಿಶ್ವ ಪ್ರಸಿದ್ಧ ಹಂಪಿ ಈ ಹಿಂದೆ ‘ಹಿಪ್ಪಿ ದ್ವೀಪ’ (ಹಿಪ್ಪಿ ಐಲ್ಯಾಂಡ್‌) ಎಂಬ ಅಪಖ್ಯಾತಿಗೆ ಒಳಗಾಗಿತ್ತು. ಆದರೆ, ಮಠಾಧೀಶರು, ಲೇಖಕರು, ಸ್ಥಳೀಯರು ನಡೆಸಿದ ಹೋರಾಟದಿಂದ ಅದಕ್ಕೆ ಅಂಟಿಕೊಂಡಿದ್ದ ಅಪಕೀರ್ತಿ ಎರಡು ದಶಕಗಳ ನಂತರ ದೂರವಾಯಿತು.

1985ರಿಂದ 2004–05ರ ವರೆಗೆ ಹಿಪ್ಪಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಂಪಿಗೆ ಬಂದು ಹೋಗುತ್ತಿದ್ದರು. ಗಾಂಜಾ ಸೇವನೆ, ರೇವ್‌ ಪಾರ್ಟಿ ಸೇರಿದಂತೆ ಇತರೆ ಚಟುವಟಿಕೆಗಳಿಗಾಗಿ ಅವರಿಗೆ ಹಂಪಿ ಬಹಳ ಅಚ್ಚುಮೆಚ್ಚಿನ ತಾಣವಾಗಿತ್ತು. ಅದಕ್ಕೆ ಕಾರಣ ಹಂಪಿಯ ಭೌಗೋಳಿಕ ಪರಿಸರ.

ನದಿ, ಬೆಟ್ಟ ಗುಡ್ಡ, ಕಲ್ಲು ಬಂಡೆ, ಕುರುಚಲು ಕಾಡಿನಿಂದ ಕೂಡಿರುವ ಹಂಪಿಯಲ್ಲಿ ಈಗಿನಂತೆ ಈ ಹಿಂದೆ ಭದ್ರತೆ, ನಿಗಾ ವ್ಯವಸ್ಥೆ ಇರಲಿಲ್ಲ. ಹಣದಾಸೆಗಾಗಿ ಸ್ಥಳೀಯರು ಏನೇ ನಡೆದರೂ ನೋಡಿಯೂ ನೋಡದಂತೆ ಇರುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡು ‘ಡ್ರಗ್ಸ್‌ ಪೆಡ್ಲರ್‌’, ಹಿಪ್ಪಿಗಳು ರಾಜಾರೋಷವಾಗಿ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದರು. ವಿದೇಶಗಳಿಂದ ಬರುತ್ತಿದ್ದ ಹಿಪ್ಪಿಗಳು ನೇರ ಗೋವಾಕ್ಕೆ ಬಂದು ಅಲ್ಲಿಂದ ಮಾದಕ ವಸ್ತುಗಳ ಜತೆಗೆ ಹಂಪಿಗೆ ಬರುತ್ತಿದ್ದರು. ಹಂಪಿಯಲ್ಲೂ ಕೆಲವರು ಗಾಂಜಾ ಮಾರುತ್ತಿದ್ದರು. 

ರಾತ್ರಿಯಿಡೀ ತುಂಗಭದ್ರಾ ನದಿ ತಟದಲ್ಲಿ ಪಾರ್ಟಿ ಆಯೋಜಿಸಿ, ಮೋಜು ಮಸ್ತಿ ಮಾಡುತ್ತಿದ್ದರು. ಆ ಪಾರ್ಟಿಗಳಲ್ಲಿ ಅನೇಕರು ಬೆತ್ತಲೆಯಾಗಿ ಕುಣಿಯುತ್ತಿದ್ದರು. ಕೆಲ ನಟ–ನಟಿಯರೂ ಕೂಡ ರಾತ್ರಿ ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದರು. ಗಾಂಜಾ, ಮದ್ಯ ಸೇವನೆ ರಾಜಾರೋಷವಾಗಿ ನಡೆಯುತ್ತಿತ್ತು. ಅವರನ್ನು ತಡೆಯುವವರೇ ಯಾರೂ ಇಲ್ಲದಂತಾಗಿತ್ತು. ಬರುಬರುತ್ತ ಹಂಪಿಯ ಎಲ್ಲೆಡೆ ಈ ಚಟುವಟಿಕೆಗಳು ಸಾಮಾನ್ಯವಾಗಿದ್ದವು ಎಂದು ನೆನಪು ಮಾಡಿಕೊಳ್ಳುತ್ತಾರೆ ಸ್ಥಳೀಯರು.

‘ಈ ವಿಷಯವನ್ನು ಕೆಲವು ಭಕ್ತರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಪೀಠಾಧ್ಯಕ್ಷ ಸಂಗನ ಬಸವ ಸ್ವಾಮೀಜಿ ಅವರ ಗಮನಕ್ಕೆ ತಂದಾಗ ಮಠಾಧೀಶರು, ಲೇಖಕರನ್ನು ಸಂಘಟಿಸಿ ಅದರ ವಿರುದ್ಧ ಅವರು ದೊಡ್ಡ ಮಟ್ಟದ ಹೋರಾಟ ನಡೆಸುತ್ತಾರೆ’ ಎಂದು ಆ ದಿನಗಳನ್ನು ಮೆಲುಕು ಹಾಕುತ್ತಾರೆ ಆ ಹೋರಾಟದ ಭಾಗವಾಗಿದ್ದ ಹಿರಿಯ ಲೇಖಕ ಮೃತ್ಯುಂಜಯ ರುಮಾಲೆ.

‘ಹಂಪಿಯಲ್ಲಿ ಅಕ್ರಮ ತಡೆಯುವಂತೆ ಆಗ್ರಹಿಸಿ, ‘ಹಂಪಿ ಪಾವಿತ್ರ್ಯ ಉಳಿಸಿ’ ಎಂಬ ಹೆಸರಿನಲ್ಲಿ ಹಂಪಿಯಿಂದ ಹೊಸಪೇಟೆಯವರೆಗೆ ಪಾದಯಾತ್ರೆ ನಡೆಸುತ್ತಾರೆ. ಅದನ್ನು ಬೆಂಬಲಿಸಿ ಬೇರೆ ಬೇರೆ ಭಾಗದ 150ಕ್ಕೂ ಹೆಚ್ಚು ಮಠಾಧೀಶರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಅಪಾರ ಸಂಖ್ಯೆಯ ಭಕ್ತರು, ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಅದನ್ನು ಬೆಂಬಲಿಸುತ್ತಾರೆ. ಇದು ರಾಜ್ಯಮಟ್ಟದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗುತ್ತದೆ’ ಎಂದರು.

‘ಬಳ್ಳಾರಿಯವರೇ ಆದ ರಾಜಕಾರಣಿ ಎಂ.ಪಿ. ಪ್ರಕಾಶ್‌ ಈ ಕುರಿತು ಸರ್ಕಾರದ ಗಮನ ಸೆಳೆಯುತ್ತಾರೆ. ಬಳಿಕ ಜಿಲ್ಲಾಡಳಿತವು ಗಾಂಜಾ ಸೇರಿದಂತೆ ಇತರೆ ಮಾದಕ ವಸ್ತುಗಳ ಸೇವನೆ, ರೇವ್‌ ಪಾರ್ಟಿ ಸೇರಿದಂತೆ ಎಲ್ಲ ರೀತಿಯ ಅಕ್ರಮಗಳಿಗೆ ಕಡಿವಾಣ ಹಾಕುತ್ತದೆ. ಆ ಹೋರಾಟದ ಪ್ರತಿಫಲವಾಗಿ ಹಂಪಿಯಲ್ಲಿ ಅಕ್ರಮ ಚಟುವಟಿಕೆಗಳು ನಿಂತಿವೆ. ಅದರ ಪಾವಿತ್ರ್ಯತೆ ಉಳಿಯಲು ಸಾಧ್ಯವಾಗಿದೆ’ ಎಂದು ವಿವರಿಸಿದರು.

‘ಹಂಪಿ ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಿಕೊಳ್ಳುತ್ತದೆ. ಹಂಪಿ ಪ್ರಾಧಿಕಾರ ರಚನೆಯಾಗುತ್ತದೆ. ಹಂಪಿ ಹೃದಯ ಭಾಗದಲ್ಲಿ ಪೊಲೀಸ್‌ ಠಾಣೆ ತಲೆ ಎತ್ತುತ್ತದೆ. ಹಂಪಿಯ ಎಲ್ಲೆಡೆ ಭದ್ರತಾ ಸಿಬ್ಬಂದಿ ನಿಯೋಜನೆ, ಸಿಸಿಟಿವಿ ಕ್ಯಾಮೆರಾ ಅಳವಡಿಸಿದ ನಂತರ ಎಲ್ಲ ಅಕ್ರಮಗಳು ನಿಂತಿವೆ. ಅಂದಿನಿಂದ ಹಂಪಿಗೆ ಹಿಪ್ಪಿಗಳು ಬರುವುದು ಬಹಳ ಕಮ್ಮಿಯಾಗಿದೆ’ ಎಂದು ಹಂಪಿ ಗೈಡ್‌ ಗೋಪಾಲ್‌ ತಿಳಿಸಿದ್ದಾರೆ. 

ಅಕ್ರಮಕ್ಕೆ ತಡೆ ಬಿದ್ದ ನಂತರದ ಒಂದೂವರೆ ದಶಕದಿಂದ ಹಿಪ್ಪಿಗಳು ಹಂಪಿಗೆ ಭೇಟಿ ಕೊಡುವುದು ಬಹಳ ವಿರಳ. ಹಂಪಿಗಿದ್ದ ಅಪಖ್ಯಾತಿಯೂ ದೂರವಾಗಿದೆ.
–ಗೋಪಾಲ್‌, ಹಿರಿಯ ಗೈಡ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು