ಹೊಸಪೇಟೆ ಬಂದ್ ಬಹುತೇಕ ಯಶಸ್ವಿ

7
ಬೆಳಿಗ್ಗೆಯಿಂದ ರಸ್ತೆಗಿಳಿಯದ ಸಾರಿಗೆ ಸಂಸ್ಥೆ ಬಸ್ಸುಗಳು; ಶಾಲಾ, ಕಾಲೇಜಿಗೆ ರಜೆ

ಹೊಸಪೇಟೆ ಬಂದ್ ಬಹುತೇಕ ಯಶಸ್ವಿ

Published:
Updated:
Deccan Herald

ಹೊಸಪೇಟೆ: ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆ ಖಂಡಿಸಿ ಸೋಮವಾರ ಕರೆ ಕೊಟ್ಟಿದ್ದ ‘ಭಾರತ್‌ ಬಂದ್‌’ಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಂದ್‌ ಬಹುತೇಕ ಯಶಸ್ವಿಗೊಂಡಿತು.

ಕಾಂಗ್ರೆಸ್‌, ಸಿಪಿಐಎಂ ಹಾಗೂ ಜೆ.ಡಿ.ಎಸ್‌. ಕಾರ್ಯಕರ್ತರು ನಗರದಲ್ಲಿ ಸುತ್ತಾಡಿ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿಸಿದರು. ‘ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ನಡೆಸುತ್ತಿರುವ ಪ್ರತಿಭಟನೆಗೆ ಎಲ್ಲರೂ ಸಹಕರಿಸಬೇಕು’ ಎಂದು ಧ್ವನಿವರ್ಧಕ ಮೂಲಕ ಪ್ರಚಾರ ಕೈಗೊಂಡರು.

ಬೆಳಿಗ್ಗೆ ಏಳು ಗಂಟೆಯ ನಂತರ ಸಾರಿಗೆ ಸಂಸ್ಥೆಯ ಬಸ್ಸುಗಳು ರಸ್ತೆಗೆ ಇಳಿಯಲಿಲ್ಲ. ದೂರದ ಊರುಗಳಿಂದ ಬಂದಿದ್ದ ಬಸ್ಸುಗಳು, ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿ ಡಿಪೊ ಸೇರಿಕೊಂಡವು. ನಗರ ಸಾರಿಗೆ ಸೇರಿದಂತೆ ಯಾವುದೇ ಬಸ್ಸುಗಳು ಸಂಚರಿಸದ ಕಾರಣ ಪರ ಊರುಗಳಿಗೆ ಹೋಗಬೇಕಾದವರು ಪರದಾಟ ನಡೆಸಿದರು. ನಿಲ್ದಾಣದಲ್ಲೇ ಬಸ್ಸಿಗಾಗಿ ಕಾದು ಕಾದು ಸುಸ್ತಾಗಿ ಮನೆಗೆ ಹಿಂತಿರುಗಿದರು. ಕೆಲವರು ನಿಲ್ದಾಣದಲ್ಲೇ ನಿದ್ರೆಗೆ ಶರಣಾದರು. ಕೇಂದ್ರ ಬಸ್‌ ನಿಲ್ದಾಣದಲ್ಲಿ ಟಿಕೆಟ್‌ ಕಾಯ್ದಿರಿಸುವ ಘಟಕ ಎಂದಿನಂತೆ ಕೆಲಸ ನಿರ್ವಹಿಸಿತು.

ಬಟ್ಟೆ, ಕಿರಾಣಿ ಮಳಿಗೆಗಳು, ಹೋಟೆಲ್‌ಗಳು, ಚಿತ್ರಮಂದಿರಗಳು ಬಂದ್‌ ಆಗಿದ್ದವು. ಶಾಲಾ, ಕಾಲೇಜುಗಳಿಗೆ ಭಾನುವಾರ ಸಂಜೆಯೇ ರಜೆ ಘೋಷಿಸಿದ್ದರಿಂದ ಅವುಗಳು ಬಾಗಿಲು ತೆರೆಯಲಿಲ್ಲ. ತರಕಾರಿ ಹಾಗೂ ಹಣ್ಣಿನ ಮಾರುಕಟ್ಟೆಯಲ್ಲಿ ಎಂದಿನಂತೆ ವಹಿವಾಟು ನಡೆಯಿತು. ಬ್ಯಾಂಕುಗಳು, ಸರ್ಕಾರಿ ಕಚೇರಿಗಳು ತೆರೆದಿದ್ದವು. ಆಟೊಗಳು ಎಂದಿನಂತೆ ಸಂಚರಿಸಿದವು. ಜನ ಹಾಗೂ ವಾಹನ ಸಂಚಾರ ವಿರಳವಾಗಿದ್ದರಿಂದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಸೇರಿದ ಕಾಂಗ್ರೆಸ್‌ ಹಾಗೂ ಜೆ.ಡಿ.ಎಸ್‌. ಕಾರ್ಯಕರ್ತರು ಅಲ್ಲಿಂದ ಪ್ರಮುಖ ಮಾರ್ಗಗಳಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದರು. ಚಕ್ಕಡಿ, ಜಟಕಾ ಬಂಡಿ, ಸೈಕಲ್‌ ತುಳಿದು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಕೆಲವು ಕಾರ್ಯಕರ್ತರು ಖಾಲಿ ಸಿಲಿಂಡರ್‌, ಪೆಟ್ರೋಲ್‌ ತುಂಬಿದ ಬಾಟಲಿಗಳನ್ನು ಪ್ರದರ್ಶಿಸಿದರು. ‘ಬಡವರ ವಿರೋಧಿ ಮೋದಿಗೆ ಧಿಕ್ಕಾರ’ ಎಂಬ ಫಲಕಗಳನ್ನು ಹಿಡಿದುಕೊಂಡು ಹೆಜ್ಜೆ ಹಾಕಿದರು.

ಮೂರಂಗಡಿ ವೃತ್ತ, ಪುಣ್ಯಮೂರ್ತಿ ವೃತ್ತ, ಬಸ್‌ ನಿಲ್ದಾಣ, ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದ ಮೂಲಕ ಹಾದು ರೋಟರಿ ವೃತ್ತದಲ್ಲಿ ಸಮಾವೇಶಗೊಂಡರು. ಅಲ್ಲಿ ಕೆಲಸಮಯ ರಸ್ತೆತಡೆ ಚಳವಳಿ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಅಲ್ಲೇ ಧರಣಿ ಸತ್ಯಾಗ್ರಹ ನಡೆಸಿದರು.

‘ದೇಶ ಆರ್ಥಿಕವಾಗಿ ದಿವಾಳಿ’: ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ಇಮಾಮ್‌ ನಿಯಾಜಿ ಮಾತನಾಡಿ, ‘ತೈಲ ಬೆಲೆ ಏರಿಕೆಯಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ಶೇ 30ರಷ್ಟು ಇಂಧನ ದರ ಇಳಿಸಬೇಕು’ ಎಂದು ಆಗ್ರಹಿಸಿದರು.

‘ನೋಟು ಅಮಾನ್ಯಗೊಳಿಸಿದ ಕಾರಣ ದೇಶದ ಪ್ರಗತಿಗೆ ಹಿನ್ನಡೆಯಾಗಿದೆ. ಹೊಸ ನೋಟುಗಳನ್ನು ಮುದ್ರಿಸಲು ₹6 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ. ದೇಶದಾದ್ಯಂತ ಖೋಟಾ ನೋಟುಗಳು ಚಲಾವಣೆಗೆ ಬಂದಿವೆ. ರೂಪಾಯಿ ಮೌಲ್ಯ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ದೇಶ ಆರ್ಥಿಕವಾಗಿ ದಿವಾಳಿಯಾಗಿದೆ. ಅದಕ್ಕೆ ಕೇಂದ್ರ ಸರ್ಕಾರದ ವೈಫಲ್ಯವೇ ಕಾರಣ’ ಎಂದು ಜರಿದರು.

ಜೆ.ಡಿ.ಎಸ್‌. ಮುಖಂಡ ದೀಪಕ್‌ ಕುಮಾರ್‌ ಸಿಂಗ್‌ ಮಾತನಾಡಿ, ‘ಎಲ್ಲ ಪಕ್ಷಗಳು ಒಂದಾಗಿ ಕೇಂದ್ರದ ವಿರುದ್ಧ ಹೋರಾಟ ನಡೆಸುವ ಅಗತ್ಯವಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ಬರದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಅದೇ ರೀತಿ ಮುಂದಿನ ಚುನಾವಣೆಯಲ್ಲಿ ಪುನಃ ಬಿಜೆಪಿ ಅಧಿಕಾರಕ್ಕೆ ಬರದಂತೆ ಶ್ರಮಿಸಬೇಕು. ಇಲ್ಲವಾದಲ್ಲಿ ಇಡೀ ದೇಶವನ್ನು ಕಾರ್ಪೊರೇಟ್‌ ಕಂಪನಿಗಳಿಗೆ ಮಾರಿ ಬಿಡುತ್ತಾರೆ’ ಎಂದು ಎಚ್ಚರಿಸಿದರು.

ಮಾರಣ್ಣ ಮಾತನಾಡಿ, ‘ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿರುವುದರಿಂದ ಜನಸಾಮಾನ್ಯರು ರಕ್ತದ ಕಣ್ಣೀರು ಹರಿಸುತ್ತಿದ್ದಾರೆ. ಆದರೂ ಕೇಂದ್ರ ಸರ್ಕಾರ ಜಪ್ಪಯ್ಯ ಅನ್ನುತ್ತಿಲ್ಲ’ ಎಂದರು.

ಮುಖಂಡರಾದ ಗುಜ್ಜಲ್‌ ನಾಗರಾಜ್‌, ನಿಂಬಗಲ್‌ ರಾಮಕೃಷ್ಣ, ಎಸ್‌. ಯರ್ರಿಸ್ವಾಮಿ, ತಾರಿಹಳ್ಳಿ ವೆಂಕಟೇಶ, ಮುನ್ನಿ, ರಜೀಯಾ ಬೇಗಂ, ಲಕ್ಷ್ಮಿ, , ಶ್ರೀನಿವಾಸ, ಜಡೆಪ್ಪ, ವಿಜಯಕುಮಾರ, ಇಮ್ರಾನ್‌, ಪಾಂಡು, ನಾಸೀರ್‌ ಬಾಯಿ, ಸಲೀಂ, ಭಾಗ್ಯಲಕ್ಷ್ಮಿ ಭರಾಡೆ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ದುರುಗಪ್ಪ ಪೂಜಾರ, ಜೆ.ಡಿ.ಎಸ್‌. ಮುಖಂಡ ಕೆ. ಕೊಟ್ರೇಶ್‌ ಇದ್ದರು. ಸ್ಥಳೀಯ ಕಾಂಗ್ರೆಸ್‌ ಶಾಸಕ ಆನಂದ್‌ ಸಿಂಗ್‌ ಇರಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !