ಹೊಸಪೇಟೆ ಸಂಪೂರ್ಣ ಸ್ತಬ್ಧ, ಬಂದ್‌ ಬಹುತೇಕ ಯಶಸ್ವಿ

7
ರಸ್ತೆಗಿಳಿಯದ ಬಸ್ಸುಗಳು; ನಡೆಯದ ವ್ಯಾಪಾರ ವಹಿವಾಟು

ಹೊಸಪೇಟೆ ಸಂಪೂರ್ಣ ಸ್ತಬ್ಧ, ಬಂದ್‌ ಬಹುತೇಕ ಯಶಸ್ವಿ

Published:
Updated:
Prajavani

ಹೊಸಪೇಟೆ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ, ಮೋಟಾರ್‌ ವಾಹನ (ತಿದ್ದುಪಡಿ) ಮಸೂದೆ ಕೈಬಿಡುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ಭಾರತ ಬಂದ್‌ಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಜಂಟಿ ಕಾರ್ಮಿಕ ಸಂಘಟನೆಗಳ ಒಕ್ಕೂಟವು ನಾಲ್ಕೈದು ದಿನಗಳಿಂದ ಬಂದ್‌ ಕುರಿತು ವ್ಯಾಪಕ ಪ್ರಚಾರ ಕೈಗೊಂಡಿತ್ತು. ಇದರಿಂದ ಬಹುತೇಕ ಮಳಿಗೆಗಳು ಬೆಳಿಗ್ಗೆಯಿಂದ ಬಾಗಿಲು ತೆರೆಯಲಿಲ್ಲ. ಕೆಲವೆಡೆ ಹೋಟೆಲ್‌, ಮಳಿಗೆಗಳು ತೆರೆದಿದ್ದವು. ಆದರೆ, ಒಕ್ಕೂಟದ ಕಾರ್ಯಕರ್ತರು ಅವುಗಳನ್ನು ಮುಚ್ಚಿಸಿದರು. ಅನೇಕ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿ ಅದರ ಪದಾಧಿಕಾರಿಗಳು ಧರಣಿಯಲ್ಲಿ ಪಾಲ್ಗೊಂಡಿದ್ದರು. ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಪದಾಧಿಕಾರಿಗಳು ಪ್ರತ್ಯೇಕವಾಗಿ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.

ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು, ಮ್ಯಾಕ್ಸಿಕ್ಯಾಬ್‌, ಕ್ರ್ಯೂಸರ್‌, ಬಹುತೇಕ ಆಟೊಗಳು ರಸ್ತೆಗೆ ಇಳಿಯಲಿಲ್ಲ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಬೇಕಾದವರು ಪರದಾಟ ನಡೆಸಿದರು. ಪರ ಊರುಗಳಿಂದ ಬೆಳಿಗ್ಗೆ ರೈಲು ನಿಲ್ದಾಣ, ಬಸ್‌ ನಿಲ್ದಾಣಕ್ಕೆ ಬಂದಿದ್ದ ಜನ ನಗರ ಸಾರಿಗೆ, ಆಟೊ ಸಿಗದ ಕಾರಣ ಕಾಲ್ನಡಿಗೆಯಲ್ಲೇ ಸಾಮಾನು ಸರಂಜಾಮುಗಳನ್ನು ಹೊತ್ತುಕೊಂಡು ಹೆಜ್ಜೆ ಹಾಕಿದರು. 

ಚಹಾ ಮಳಿಗೆ, ಹೋಟೆಲ್‌ಗಳು ತೆರೆಯದ ಕಾರಣ ಜನ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟಕ್ಕೆ ಪರದಾಡಿದರು. ಬ್ಯಾಂಕುಗಳು, ಅಂಚೆ ಕಚೇರಿ, ಮಾರುಕಟ್ಟೆ ಸೇರಿದಂತೆ ಬಹುತೇಕ ದೈನಂದಿನ ಕೆಲಸಗಳು ಸ್ಥಗಿತಗೊಂಡಿದ್ದವು. ಶಾಲಾ, ಕಾಲೇಜುಗಳು ಮುಚ್ಚಿದ್ದವು. ಸರ್ಕಾರಿ ಕಚೇರಿಗಳಲ್ಲಿ ಬೆರಳೆಣಿಕೆಯಷ್ಟು ಸಿಬ್ಬಂದಿ ಇದ್ದರು. ಪ್ರಮುಖ ರಸ್ತೆಗಳಲ್ಲಿ ಜನಸಂಚಾರ ವಿರಳವಾಗಿತ್ತು. ಅಕ್ಷರಶಃ ಇಡೀ ನಗರ ಸ್ತಬ್ಧಗೊಂಡಿತ್ತು.

ಶಾಮಿಯಾನ ತೆರವು:

ಜಂಟಿ ಕಾರ್ಮಿಕ ಸಂಘಟನೆಗಳ ಒಕ್ಕೂಟವು ಸತತ 48 ಗಂಟೆ ಧರಣಿ ಸತ್ಯಾಗ್ರಹ ನಡೆಸಲು ನಗರದ ಬಸ್‌ ನಿಲ್ದಾಣದ ಎದುರು ಶಾಮಿಯಾನ ಹಾಕಿಸಿತ್ತು. ಆದರೆ, ಪೊಲೀಸರು ಅದನ್ನು ತೆರವುಗೊಳಿಸುವಂತೆ ಸೂಚಿಸಿದರು. ಹೀಗಾಗಿ ಬಿ.ಎಸ್‌.ಎನ್‌.ಎಲ್‌. ಕಚೇರಿ ಎದುರು ಶಾಮಿಯಾನ ಹಾಕಿ, ಸತ್ಯಾಗ್ರಹ ನಡೆಸಿದರು.

ಇದಕ್ಕೂ ಮುನ್ನ ನಗರದ ಶ್ರಮಿಕ ಭವನದಿಂದ ಪ್ರಮುಖ ರಸ್ತೆಗಳ ಮೂಲಕ ಧರಣಿ ಸತ್ಯಾಗ್ರಹ ಸ್ಥಳದವರೆಗೆ ನೂರಾರು ಕಾರ್ಮಿಕರು ರ್‍ಯಾಲಿ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಬಳಿಕ ಮಾತನಾಡಿದ ಒಕ್ಕೂಟದ ಜಿಲ್ಲಾ ಸಂಚಾಲಕ ಆರ್‌. ಭಾಸ್ಕರ್‌ ರೆಡ್ಡಿ, ‘ದೇಶದಲ್ಲಿ 44 ಕಾರ್ಮಿಕರ ಪರವಾದ ಕಾನೂನುಗಳಿವೆ. ಆದರೆ, ಮೋದಿಯವರು ಅವುಗಳ ಜಾಗದಲ್ಲಿ ನಾಲ್ಕು ಕೋಡ್‌ಗಳನ್ನು ತರಲು ಹೊರಟಿದ್ದಾರೆ. ಇದು ಕಾರ್ಮಿಕರನ್ನು ಮುಗಿಸುವ ಸಂಚು. ಕಾರ್ಪೊರೇಟ್‌ ವಲಯಕ್ಕೆ ಮಣೆ ಹಾಕಲು ಕಾರ್ಮಿಕರನ್ನು ಮುಗಿಸಲು ಹೊರಟಿದ್ದಾರೆ’ ಎಂದು ಟೀಕಿಸಿದರು.

‘ನಾಲ್ಕೂವರೆ ವರ್ಷಗಳಲ್ಲಿ ಪ್ರಧಾನಿ ಮೋದಿಯವರು ಸುಳ್ಳು ಭರವಸೆ, ಆಶ್ವಾಸನೆಗಳ ಮೂಲಕ ದೇಶದ ಜನರಿಗೆ ಮೋಸ ಮಾಡಿದ್ದಾರೆ. ಅಂಬಾನಿ, ಅದಾನಿ ಬಿಟ್ಟರೆ ಜನಸಾಮಾನ್ಯರಿಗೆ ಪ್ರಯೋಜನವಾಗುವ ಒಂದೇ ಒಂದು ಕೆಲಸ ಮಾಡಿಲ್ಲ. ಎಲ್ಲ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಜನಸಾಮಾನ್ಯರ ಬದುಕು ನರಕವಾಗಿದೆ’ ಎಂದರು.

’ಫೆಡರೇಷನ್‌ ಆಫ್‌ ಕರ್ನಾಟಕ ಆಟೊ ರಿಕ್ಷಾ ಡ್ರೈವರ್ಸ್‌ ಯೂನಿಯನ್‌’ ರಾಜ್ಯ ಕಾರ್ಯದರ್ಶಿ ಕೆ.ಎಂ. ಸಂತೋಷ್‌ ಕುಮಾರ್‌ ಮಾತನಾಡಿ, ‘ಮೋಟಾರ್‌ ವಾಹನ ತಿದ್ದುಪಡಿ ಮಸೂದೆ ಹೆಸರಿನಲ್ಲಿ ಕೇಂದ್ರವು ಆಟೊ ಸೇರಿದಂತೆ ಇತರೆ ಟ್ಯಾಕ್ಸಿ ವಾಹನ ಚಾಲಕರು ಸಣ್ಣಪುಟ್ಟ ತಪ್ಪು ಮಾಡಿದರೆ ಜೈಲಿಗೆ ತಳ್ಳುವಂತಹ ನಿಯಮ ರೂಪಿಸಿದೆ. ಈ ಮಸೂದೆ ಕಾಯ್ದೆಯಾಗಿ ಜಾರಿಗೆ ಬಂದರೆ ಕೋಟ್ಯಂತರ ವಾಹನ ಚಾಲಕರು ಈ ಉದ್ಯೋಗ ತೊರೆಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ದೊಡ್ಡ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಈ ಮಸೂದೆ ತರಲು ಹೊರಟಿದ್ದಾರೆ. ಹೀಗಾಗಿಯೇ ಎಲ್ಲ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ’ ಎಂದು ತಿಳಿಸಿದರು.

ಮುಖಂಡರಾದ ಮುಖಂಡರಾದ ಕರುಣಾನಿಧಿ, ಜಂಬಯ್ಯ ನಾಯಕ, ಯಲ್ಲಾಲಿಂಗ, ಕೆ.ಎಂ.ಸಂತೋಷ, ಬಿಸಾಟಿ ಮಹೇಶ, ಪ್ರಭಾಕರ, ನಾಗರತ್ನಮ್ಮ, ಜಂಬಯ್ಯ ನಾಯಕ, ತಾಯಪ್ಪ ನಾಯಕ, ರಾಮಕೃಷ್ಣ ನಿಂಬಗಲ್, ಮರಿಯಮ್ಮನಹಳ್ಳಿ ಶ್ರೀನಿವಾಸ, ಬಿ.ತಿಪ್ಪೇಸ್ವಾಮಿ, ವಿ.ಎಸ್.ಕೃಷ್ಣ, ಎಂ.ರಾಮರಾವ್, ಬಿ.ಪಾಲಯ್ಯ, ಕೆ.ಎಚ್.ನಾಗರತ್ನ, ಡಿ.ಆಶಾ ಲತಾ, ಶಿವುಕುಮಾರ, ಎ.ಐ.ಎಂ.ಎಸ್‌.ಎಸ್‌. ರಾಜ್ಯ ಉಪಾಧ್ಯಕ್ಷೆ ಮಂಜುಳಾ, ಆಶಾ ಕಾರ್ಯಕರ್ತೆಯರಾದ ನೇತ್ರಾವತಿ, ಹೇಮಾವತಿ, ವೀರಮ್ಮ, ಸುಜಾತಾ, ಮಾರೆಕ್ಕ, ಭುವನ, ಲಕ್ಷ್ಮಿದೇವಿ, ರವಿ, ಅಭಿಷೇಕ, ಹುಲುಗಪ್ಪ, ತಾಯಪ್ಪ ನಾಯಕ, ಚಂದ್ರಪ್ಪ ನಾಗರಾಜ ಪತ್ತಾರ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !