ಸ್ವಚ್ಛ ನಗರ ಪಟ್ಟಿ: ಹೊಸಪೇಟೆಗೆ 388ನೇ ಸ್ಥಾನ

ಸೋಮವಾರ, ಮಾರ್ಚ್ 25, 2019
24 °C
ಹಿಂದಿನ ವರ್ಷ 401ನೇ ಸ್ಥಾನದಲ್ಲಿದ್ದ ನಗರ

ಸ್ವಚ್ಛ ನಗರ ಪಟ್ಟಿ: ಹೊಸಪೇಟೆಗೆ 388ನೇ ಸ್ಥಾನ

Published:
Updated:
Prajavani

ಹೊಸಪೇಟೆ: ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ನಗರವು ಪ್ರಸಕ್ತ ಸಾಲಿನಲ್ಲಿ 388ನೇ ಸ್ಥಾನದಲ್ಲಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಿಗಿತ ಕಂಡಿದೆ.

2018ನೇ ಸಾಲಿನಲ್ಲಿ ನಗರವು 401ನೇ ಸ್ಥಾನದಲ್ಲಿತ್ತು. ಈ ವರ್ಷ 388ನೇ ಸ್ಥಾನ ಪಡೆದುಕೊಂಡಿದ್ದು, 13 ಸ್ಥಾನ ಜಿಗಿತ ಕಾಣುವ ಮೂಲಕ ಸಮಾಧಾನಕರ ಸಾಧನೆ ಮಾಡಿದೆ.

ಕೇಂದ್ರ ನಗರಾಭಿವೃದ್ಧಿ ಇಲಾಖೆಯು ಪ್ರತಿ ವರ್ಷ ‘ಸ್ವಚ್ಛ ಸರ್ವೇಕ್ಷಣೆ’ ಹೆಸರಿನಲ್ಲಿ ಸಮೀಕ್ಷೆ ನಡೆಸುತ್ತಿದೆ. ಸ್ವಚ್ಛತೆಗೆ ಹೆಚ್ಚು ಒತ್ತು ಕೊಟ್ಟು ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ನಗರಗಳ ಪಟ್ಟಿ ಬಿಡುಗಡೆ ಮಾಡುತ್ತಿದೆ. ಈ ವರ್ಷದ ಪಟ್ಟಿಯನ್ನು ಇತ್ತೀಚೆಗೆ ಪ್ರಕಟಿಸಿದೆ.

‘ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನಗರದ ಸ್ಥಾನ ಏರಿಕೆ ಕಂಡಿರುವುದೇಕೇ‘ ಎಂದು ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸೈಯದ್‌ ಮನ್ಸೂರ್‌ ಅವರನ್ನು ಕೇಳಿದರೆ, ‘ಪೌರ ಕಾರ್ಮಿಕರು ವಾಹನಗಳಲ್ಲಿ ಪ್ರತಿ ದಿನ ಆಯಾ ಬಡಾವಣೆಗಳ ಮನೆ ಬಾಗಿಲಿಗೆ ಹೋಗಿ ನೇರವಾಗಿ ಜನರಿಂದ ಕಸ ಸಂಗ್ರಹಿಸುತ್ತಿದ್ದಾರೆ. ಈ ಹಿಂದೆ ಆಯಾ ಬಡಾವಣೆಗಳಲ್ಲಿ ಕಸದ ತೊಟ್ಟಿಗಳನ್ನು ಇಟ್ಟಿದ್ದೆವು. ಕೆಲವರು ತೊಟ್ಟಿ ಒಳಗೆ ಕಸ ಹಾಕಿದರೆ, ಕೆಲವರು ಹೊರಗೆ ಚೆಲ್ಲಿ ಹೋಗುತ್ತಿದ್ದರು. ಅದು ರಸ್ತೆ ಮೇಲೆಲ್ಲ ಹರಿದಾಡುತ್ತಿತ್ತು. ಈಗ ಅದು ತಪ್ಪಿದೆ’ ಎಂದು ಹೇಳಿದರು.

‘ಕಸ ಸಂಗ್ರಹಿಸುವ ವಾಹನಗಳೊಂದಿಗೆ ಧ್ವನಿವರ್ಧಕ ಅಳವಡಿಸಿ, ಸ್ವಚ್ಛತೆ ಕುರಿತು ತಿಳಿವಳಿಕೆ ಮೂಡಿಸಲಾಗುತ್ತಿದೆ. ಇದು ಜನರಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಬೆಳಿಗ್ಗೆ ಧ್ವನಿವರ್ಧಕದ ಶಬ್ದ ಕೇಳಿದೊಡನೆ ವಾಹನದೊಳಗೆ ಕಸ ಹಾಕಿ ಹೋಗುತ್ತಾರೆ. ಹೀಗೆ ಎಲ್ಲರ ಸಹಕಾರದಿಂದ ಬದಲಾವಣೆ ಉಂಟಾಗಿದೆ’ ಎಂದು ಮಾಹಿತಿ ನೀಡಿದರು.

‘ಈ ಹಿಂದೆ ಕೆಲವೇ ಕಡೆ ಸಾರ್ವಜನಿಕ ಶೌಚಾಲಯಗಳಿದ್ದವು. ಎಲ್ಲೆಲ್ಲಿ ಅಗತ್ಯ ಇದೆ ಎಂಬುದನ್ನು ಮನಗಂಡು ಕೆಲವು ಕಡೆಗಳಲ್ಲಿ ಹೊಸದಾಗಿ ನಿರ್ಮಿಸಲಾಗಿದೆ. ಜನ ಅವುಗಳನ್ನು ಉಪಯೋಗಿಸುತ್ತಿದ್ದಾರೆ. ನಿತ್ಯ ಚರಂಡಿಗಳನ್ನು ಸ್ವಚ್ಛಗೊಳಿಸಿ, ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಹೀಗಾಗಿ ಎಲ್ಲೆಡೆ ಸ್ವಚ್ಛತೆ ಕಂಡು ಬರುತ್ತಿದೆ. ಬರುವ ದಿನಗಳಲ್ಲಿ ಇದರಲ್ಲಿ ಇನ್ನಷ್ಟು ಸುಧಾರಣೆ ತಂದು, ಇನ್ನೂ ಮೇಲಿನ ಸ್ಥಾನಕ್ಕೆ ಬರಲು ಪ್ರಯತ್ನಿಸಲಾಗುವುದು’ ಎಂದು ಭರವಸೆ ವ್ಯಕ್ತಪಡಿಸಿದರು.

‘ವಿಶ್ವ ಪಾರಂಪರಿಕ ತಾಣ ಹಂಪಿ ನಗರದ ಸನಿಹದಲ್ಲಿದೆ. ನಿತ್ಯ ದೇಶ–ವಿದೇಶದ ಜನ ನಗರಕ್ಕೆ ಬಂದು ಹಂಪಿಗೆ ಹೋಗುತ್ತಾರೆ. ಈಗಿರುವ ಸ್ವಚ್ಛತೆ ಸಾಲದು. ಇನ್ನಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ರಸ್ತೆಬದಿ ಗೂಡಂಗಡಿ ಇಟ್ಟುಕೊಂಡವರು ಅಲ್ಲೇ ಆಹಾರ ತಯಾರಿಸಿ, ತ್ಯಾಜ್ಯ ಸುರಿದು ಹೋಗುತ್ತಾರೆ. ಅದಕ್ಕೆ ಕಡಿವಾಣ ಹಾಕಬೇಕು. ಈಗಿರುವ ಸಾರ್ವಜನಿಕ ಶೌಚಾಲಯಗಳು ಸಾಲದು. ಇನ್ನಷ್ಟು ಶೌಚಾಲಯಗಳನ್ನು ನಿರ್ಮಿಸಿ, ಉತ್ತಮ ರೀತಿಯಲ್ಲಿ ಅವುಗಳ ನಿರ್ವಹಣೆ ಮಾಡಬೇಕು’ ಎಂದು ಪರಿಸರಪ್ರೇಮಿ ಬಸವರಾಜ ಸಲಹೆ ಮಾಡಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !