ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ ನಗರಸಭೆ ಸಾಮಾನ್ಯಸಭೆ: ಸಚಿವ ಆನಂದ್ ಸಿಂಗ್ ಬಗ್ಗೆ ಸದಸ್ಯರ ಅಸಮಾಧಾನ

ಜಿಲ್ಲಾಧಿಕಾರಿ ಕ್ರಮ ಕೈಗೊಂಡಿಲ್ಲವೇಕೇ–ನಗರಸಭೆ ಸಾಮಾನ್ಯ ಸಭೆಯಲ್ಲಿ ಪ್ರಶ್ನೆ
Last Updated 7 ಜುಲೈ 2022, 10:02 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ಕಾಲುವೆಯ ಎಸ್ಕೇಪ್‌ ಗೇಟ್‌ ಹಾಗೂ ಒಳಚರಂಡಿ ಮೇಲೆ ಬಂಗ್ಲೆ ಕಟ್ಟಿಕೊಂಡಿದ್ದಾರೆ. ಸಚಿವರಿಗೆ ಒಂದು ಕಾನೂನು, ಜನರಿಗೊಂದು ಕಾನೂನಾ? ಈ ಕುರಿತು ದೂರು ಕೊಟ್ಟರೂ ಜಿಲ್ಲಾಧಿಕಾರಿ, ನಗರಸಭೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲವೇಕೇ?’

ಬುಧವಾರ ನಗರದಲ್ಲಿ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಆರನೇ ವಾರ್ಡಿನ ಸದಸ್ಯ ಅಬ್ದುಲ್‌ ಖದೀರ್‌ ಮೇಲಿನಂತೆ ಪ್ರಶ್ನಿಸಿದರು.

‘ಸಚಿವರು ಕಾಲುವೆ ಜಾಗದಲ್ಲಿ ಬಂಗ್ಲೆ ನಿರ್ಮಿಸಿದ್ದಾರೆ. ಅವರ ಆಪ್ತರಾದ ಸುರಕ್ಷಾ ಎಂಟರ್‌ಪ್ರೈಸೆಸ್‌ನವರು ಲೇಔಟ್‌ ನಿರ್ಮಿಸಿದ್ದಾರೆ. ಈ ಕುರಿತು ‘ಪ್ರಜಾವಾಣಿ’ ಪತ್ರಿಕೆ ಕೂಡ ವರದಿ ಮಾಡಿದೆ. ಎಸ್ಕೇಪ್‌ ಗೇಟ್‌ನಿಂದ ನಗರದ ಹೆಚ್ಚುವರಿ ನೀರು ಹರಿದು ಹೋಗುತ್ತದೆ. ಆದರೆ, ಅಲ್ಲಿ ಮನೆಗಳು ನಿರ್ಮಾಣವಾಗಿರುವುದರಿಂದ ಹಂಪಿ ರಸ್ತೆಯಲ್ಲಿ ನೀರು ಸಂಗ್ರಹವಾಗುತ್ತಿದೆ. ಕೂಡಲೇ ಅಲ್ಲಿ ನಿರ್ಮಿಸಿರುವ ಮನೆ, ಗೋಡೆ ತೆರವುಗೊಳಿಸಬೇಕು. ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಐಎಎಸ್‌, ಐಪಿಎಸ್‌ ಅಧಿಕಾರಿಗಳು ಜೈಲಿಗೆ ಹೋಗಿದ್ದಾರೆ’ ಎಂದು ನೆನಪಿಸಿದರು.

‘ಅಲ್ಲಿ ನಿರ್ಮಿಸಿರುವ ಲೇಔಟ್‌ ಸಚಿವರದ್ದಲ್ಲ, ಸುರಕ್ಷಾ ಎಂಟರ್‌ಪ್ರೈಸೆಸ್‌ನವರದ್ದು. ‘ಸಿಲ್ಟ್‌’ನಿಂದ ಹಂಪಿ ರಸ್ತೆಯಲ್ಲಿ ನೀರು ಸಂಗ್ರಹವಾಗುತ್ತಿದೆ’ ಎಂದು ಬಿಜೆಪಿ ಸದಸ್ಯ ರೂಪೇಶ್‌ ಕುಮಾರ್‌ ಪ್ರತಿಕ್ರಿಯಿಸಿದರು. ‘ಸುರಕ್ಷಾ ಎಂಟರ್‌ಪ್ರೈಸೆಸ್‌ನವರು ನಿವೇಶನ ಮಾಡಿದ್ದಾರೆ. ಸರ್ವೇ ನಂ. 63ರಲ್ಲಿ ಸಚಿವರ ಬಂಗ್ಲೆ ಇದೆ. ಅಲ್ಲಿ ಒಳಚರಂಡಿ ಇದೆ’ ಎಂದು ಪಕ್ಷೇತರ ಸದಸ್ಯ ಖದೀರ್‌ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಮನೋಹರ್‌, ’ಸ್ಥಳ ಪರಿಶೀಲನೆ ನಡೆಸಿ, ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಭರವಸೆ ನೀಡಿದರು.

ಅನುದಾನ ಹಂಚಿಕೆಯಲ್ಲಿ ತಾರತಮ್ಯ, ಆಕ್ರೋಶ:

ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿರುವುದಕ್ಕೆ ನಗರಸಭೆಯ ಕೆಲ ಸದಸ್ಯರು ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರ ವಿರುದ್ಧ ಹರಿಹಾಯ್ದರು.

ಕಾಂಗ್ರೆಸ್‌ ಸದಸ್ಯೆ ರೋಹಿಣಿ ವೆಂಕಟೇಶ್‌ ಮಾತನಾಡಿ, ‘ಅಧ್ಯಕ್ಷ, ಉಪಾಧ್ಯಕ್ಷರು ಅವರ ವಾರ್ಡಿಗೆ ₹80 ಲಕ್ಷ ಅನುದಾನ ಹಾಕಿಕೊಂಡಿದ್ದೀರಿ. ಬೇರೆ ವಾರ್ಡ್‌ಗಳಿಗೇಕೇ ಕೊಟ್ಟಿಲ್ಲ. ಹೈಮಾಸ್ಟ್‌ ದೀಪಗಳ ಮಂಜೂರಾತಿಯಲ್ಲೂ ತಾರತಮ್ಯವೇಕೇ ಮಾಡಿದ್ದೀರಿ’ ಎಂದು ಪ್ರಶ್ನಿಸಿದರು. ಅದಕ್ಕೆ ದನಿಗೂಡಿಸಿದ ಪಕ್ಷೇತರ ಸದಸ್ಯ ಗೌಸ್‌, ‘ನನ್ನ ವಾರ್ಡಿಗೂ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದೆ. ನನ್ನ ವಾರ್ಡಿನ ಜನರು ತೆರಿಗೆ ಕಟ್ಟುವುದಿಲ್ಲವೇ?’ ಎಂದು ಏರಿದ ದನಿಯಲ್ಲಿ ಕೇಳಿದರು. ಸದಸ್ಯರಾದ ಎಚ್.ಎಲ್‌. ಸಂತೋಷ್‌, ಅಬ್ದುಲ್‌ ಖದೀರ್‌ ಬೆಂಬಲಿಸಿದರು.

ನಗರಸಭೆ ಅಧ್ಯಕ್ಷೆ ಸುಂಕಮ್ಮ ಪರವಾಗಿ ಮಾತನಾಡಿದ ಉಪಾಧ್ಯಕ್ಷ ಎಲ್‌.ಎಸ್‌. ಆನಂದ್‌, ‘ಮುಂದಿನ ದಿನಗಳಲ್ಲಿ ಮುನ್ಸಿಪಲ್‌ ಬಜೆಟ್‌ನ ಲಭ್ಯತೆ ನೋಡಿಕೊಂಡು ಇತರೆ ವಾರ್ಡ್‌ಗಳಿಗೂ ಅನುದಾನ ಬಿಡುಗಡೆಗೊಳಿಸಲಾಗುವುದು’ ಎಂದು ಹೇಳಿದರು. ಅದಕ್ಕೆ ಸದಸ್ಯರು ತೃಪ್ತರಾಗಲಿಲ್ಲ.

‘ಎಲ್ಲ ವಾರ್ಡ್‌ಗಳಿಗೆ ಸರಿಸಮಾನವಾಗಿ ಅನುದಾನ ಕೊಡಬೇಕು. ಇಲ್ಲವಾದರೆ ಈಗ ಬಿಡುಗಡೆಯಾಗಿರುವ ಅನುದಾನ ರದ್ದುಗೊಳಿಸಬೇಕು’ ಎಂದು ರೋಹಿಣಿ ಒತ್ತಾಯಿಸಿದರು. ಅದಕ್ಕೆ ಸದಸ್ಯ ರಾಘವೇಂದ್ರ, ಇತರರು ದನಿಗೂಡಿಸಿದರು. ಆದರೆ, ಬಿಜೆಪಿ ಸದಸ್ಯ ಬುಜ್ಜಿ ಹನುಮಂತಪ್ಪ ಹಾಗೂ ಕೆಲವರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಯಾರು ಏನು ಮಾತನಾಡುತ್ತಿದ್ದಾರೆ ಎನ್ನುವುದು ಗೊತ್ತಾಗಲಿಲ್ಲ. ಈ ನಡುವೆ ಅಧ್ಯಕ್ಷರು ಸಭೆ ಮುಕ್ತಾಯಗೊಳಿಸುವುದಾಗಿ ಘೋಷಿಸಿದರು. ಅದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿ, ಅಸಮಾಧಾನ ಸೂಚಿಸಿದರು.

ಹಾಲಿ ಸಭೆಯ ಅಜೆಂಡಾದಲ್ಲಿರುವ ವಿಷಯಗಳ ಬಗ್ಗೆ ಚರ್ಚಿಸುವುದಕ್ಕೂ ಮುನ್ನ ಈ ಹಿಂದಿನ ಸಭೆಯ ನಡಾವಳಿಗಳ ಚರ್ಚಿಸಿ ಮುಂದುವರೆಯುವುದು ಉತ್ತಮ ಎಂದು ಕಾಂಗ್ರೆಸ್‌, ಪಕ್ಷೇತರ ಸದಸ್ಯರು ಹೇಳಿದರು. ಅದಕ್ಕೆ ಆಡಳಿತ ಪಕ್ಷದವರು ಒಪ್ಪಲಿಲ್ಲ. ಈ ವೇಳೆ ಎರಡೂ ಕಡೆಯವರು ಮಾತನಾಡಿದ್ದರಿಂದ ಗೊಂದಲ ಉಂಟಾಗಿತ್ತು. ‘ಈಗಿರುವ ವಿಷಯಗಳ ಕುರಿತು ಚರ್ಚಿಸಿ, ಅದರ ನಂತರ ಹಿಂದಿನ ಸಭೆ ವಿಷಯಗಳ ಬಗ್ಗೆಯೂ ಚರ್ಚಿಸಲಾಗುವುದು’ ಎಂದು ಎಲ್‌.ಎಸ್‌. ಆನಂದ್‌ ಭರವಸೆ ನೀಡಿದ ನಂತರ ಎಲ್ಲರೂ ಮೌನವಾದರು. ಇದಕ್ಕೂ ಮುನ್ನ ಆನಂದ್‌, ’ಆಯಾ ವಾರ್ಡಿನ ಸದಸ್ಯರು ಅವರ ವಾರ್ಡ್‌ಗೆ ಸಂಬಂಧಿಸಿದಂತೆ ಪ್ರಶ್ನಿಸಬಹುದು’ ಎಂದಿದ್ದಕ್ಕೆ ಸದಸ್ಯರು ವಿರೋಧ ಸೂಚಿಸಿದರು. ‘ಹೊಸಪೇಟೆ ನಗರಸಭೆ ಪ್ರತಿನಿಧಿಸುವವರು ನಾವು. ನಗರಕ್ಕೆ ಸಂಬಂಧಿಸಿ ಪ್ರಶ್ನೆ ಕೇಳಿದರೆ ತಪ್ಪೇನೂ? ಈ ಧೋರಣೆ ಸರಿಯಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

‘ಟಿ.ಬಿ. ಡ್ಯಾಂ ಇರುವ ಪ್ರದೇಶಕ್ಕೆ ನೀರಿಲ್ಲ’:

‘ಟಿ.ಬಿ. ಡ್ಯಾಂ ಇರುವ ಪ್ರದೇಶಕ್ಕೆ ನೀರಿಲ್ಲ. 180 ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಜನ ನನ್ನನ್ನು ‍ಪ್ರಶ್ನಿಸುತ್ತಿದ್ದಾರೆ. ಯಾರೂ ಸಮಸ್ಯೆ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ’ ಎಂದು ಬಿಜೆಪಿ ಸದಸ್ಯ ಬುಜ್ಜಿ ಹನುಮಂತಪ್ಪ ಅಸಮಾಧಾನ ವ್ಯಕ್ತಪಡಿಸಿದರು.

‘ನೀರಿನ ವಿಷಯವಾಗಿ ಮೂರನೇ ಸಲ ಸಭೆಯಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ಯಾವುದೇ ಪ್ರಯೋಜನವಾಗಿಲ್ಲ’ ಎಂದು ಸಿಟ್ಟು ಹೊರಹಾಕಿದರು. ಪೌರಾಯುಕ್ತ ಮನೋಹರ್‌, ‘ವಾರದೊಳಗೆ ಸಮಸ್ಯೆ ಇತ್ಯರ್ಥಪಡಿಸಲು ಕ್ರಮ ಜರುಗಿಸಲಾಗುವುದು’ ಎಂದು ಭರವಸೆ ನೀಡಿದರು.

‘ನನ್ನ ವಾರ್ಡಿನಲ್ಲಿ ಅಶುದ್ಧ ನೀರು ಸರಬರಾಜು ಆಗುತ್ತಿದೆ. ಆ ನೀರು ಕುಡಿಯಲು ಯೋಗ್ಯವಿಲ್ಲ. ಬಡವರಿಗೆ ಹಣ ಕೊಟ್ಟು ನೀರು ತರಲು ಆಗುವುದಿಲ್ಲ. ಅನೇಕ ಸಲ ಈ ವಿಷಯ ತಿಳಿಸಿದರೂ ಕಿವಿಗೆ ಹಾಕಿಕೊಂಡಿಲ್ಲ. ಸಮಸ್ಯೆ ಬಗೆಹರಿಸಿಲ್ಲ. ಇಂತಹ ಹೊಲಸು ನೀರು ನೀವೇ ಕುಡಿಯಬಹುದೇ?’ ಎಂದು ಬಾಟಲಿ ನೀರು ತೋರಿಸಿ ಸದಸ್ಯೆ ಲಕ್ಷ್ಮಿ ಪ್ರಶ್ನಿಸಿದರು. ‘ನಮ್ಮ ವಾರ್ಡಿನಲ್ಲೂ ಇದೇ ಪರಿಸ್ಥಿತಿ ಇದೆ. ಜನ ನಮಗೆ ಪ್ರಶ್ನಿಸುತ್ತಿದ್ದಾರೆ. ನೀವು ಸಮಸ್ಯೆ ಬಗೆಹರಿಸದೇ ಕಾಲಹರಣ ಮಾಡುತ್ತಿರುವುದು ಸರಿಯಲ್ಲ’ ಎಂದು ಸದಸ್ಯೆ ರೋಹಿಣಿ ಹೇಳಿದರು. ಅಧ್ಯಕ್ಷೆ ಸುಂಕಮ್ಮ, ‘ನೀವು ಸುಮ್ಮನಿರಿ, ಎಲ್ಲ ಕೆಲಸ ಮಾಡುತ್ತೇವೆ’ ಎಂದರು. ಅದಕ್ಕೆ ಸಿಟ್ಟಾದ ಲಕ್ಷ್ಮಿ, ರೋಹಿಣಿ, ‘ಒಬ್ಬ ಮಹಿಳೆಯಾಗಿ ನೀವು ಈ ರೀತಿ ಮಾತನಾಡುವುದೇ ಸರಿಯೇ? ಮಹಿಳೆಯಾಗಿ ಮಹಿಳೆಯರ ಸಮಸ್ಯೆ ಬಗೆಹರಿಸಬೇಕು. ಸುಮ್ಮನೆ ಕೂರಲು ಇಲ್ಲಿಗೆ ಬಂದಿಲ್ಲ’ ಎಂದು ಏರಿದ ದನಿಯಲ್ಲಿ ಹೇಳಿದರು.

‘ಐ ಲವ್‌ ವಿಜಯನಗರ’ಕ್ಕೆ ವಿರೋಧ:

‘ಹೊಸಪೇಟೆ ನಗರಸಭೆ ವ್ಯಾಪ್ತಿಯಲ್ಲಿ ‘ಐ ಲವ್‌ ವಿಜಯನಗರ’ ಎನ್ನುವ ಫಲಕ ನಿರ್ಮಿಸುವ’ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಹಲವರು ಅದಕ್ಕೆ ವಿರೋಧಿಸಿದರು.

‘ನಮ್ಮ ವಿಜಯನಗರ’ ಎಂದು ಹಾಕಿಸಬಹುದು. ‘ಐ ಲವ್‌ ವಿಜಯನಗರ’ ಎನ್ನುವುದು ಸರಿಯಾಗುವುದಿಲ್ಲ ಎಂದು ಕಾಂಗ್ರೆಸ್‌ ಸದಸ್ಯ ರಾಘವೇಂದ್ರ ಸಲಹೆ ನೀಡಿದರು. ಅದಕ್ಕೆ ಇತರೆ ಸದಸ್ಯರು ದನಿಗೂಡಿಸಿದರು. ‘ಐ ಲವ್‌ ವಿಜಯನಗರ’ ಯಾರ ಸಲಹೆ ಎಂದು ಅಬ್ದುಲ್‌ ಖದೀರ್‌ ಕೇಳಿದರು. ‘ನಗರಸಭೆ ಅಧ್ಯಕ್ಷೆ ಸುಂಕಮ್ಮ’ ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT